ಸಮಾಜೋಧಾರ್ಮಿಕ ಚಳವಳಿ ಮುಖಾಂತರ ಸ್ತ್ರೀ-ಪುರುಷರಿಗೆ ಸಮಾನತೆ ಸಿದ್ದಾಂತ ಬೋಧಿಸಿ, ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಬಸವಣ್ಣ ಜಗತ್ತಿನ ಮೊದಲಿಗರು ಎಂದು ಡಂಬಳ-ಗದಗ ಯಡೆಯೂರು ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವ ಸಂಸ್ಕೃತಿ ಅಭಿಯಾನ ಸಮಿತಿ ಸಹಯೋಗದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಬೀದರ್ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ವಚನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಬೇರೂರಿರುವ ಅಜ್ಞಾನ, ಅಂಧಶ್ರದ್ಧೆ, ಮೂಢನಂಬಿಕೆಗಳಿಂದ ಮುಕ್ತಗೊಳಿಸಲು ಶರಣರ ಮೌಲಿಕ ತತ್ವಗಳನ್ನು ತಿಳಿಸುವುದು ತುಂಬಾ ಅವಶ್ಯವಾಗಿದೆ. ಕೇವಲ ಮನುಷ್ಯರಷ್ಟೇ ಅಲ್ಲ, ಜಗತ್ತಿನಲ್ಲಿ ಹುಟ್ಟಿರುವಂತಹ ಎಲ್ಲ ಜೀವಿಗಳು ಕೂಡ ಸುಖದಿಂದ ಬದುಕಬೇಕೆಂಬ ಸದಾಶಯದಿಂದ ಶರಣರು ಸಕಲ ಜೀವಾತ್ಮರಿಗೆ ಲೇಸು ಬಯಸಿದರು. 21ನೇ ಶತಮಾನದ ವಿಜ್ಞಾನ-ತಂತ್ರಜ್ಞಾನದ ಯುಗದಲ್ಲೂ ಜಾತಿ, ಮತ, ಪಂಥ, ದೇವರು, ಧರ್ಮಗಳ ಹೆಸರಿನಲ್ಲಿ ಅನೇಕ ಭೇದ-ಭಾವಗಳನ್ನು ಸೃಷ್ಟಿಸಿಕೊಂಡು ಸಂಘರ್ಷಕ್ಕೆ ಇಡಾಗಿದೆʼ ಎಂದು ಹೇಳಿದರು.
ʼದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಗಳಿಂದ ಮುಕ್ತರಾಗಬೇಕೆಂಬ ಉದ್ದೇಶದಿಂದ ಬಸವಾದಿ ಶಿವಶರಣರು ಅನೇಕ ಮೌಲಿಕ ವಚನಗಳು ರಚಿಸಿ ನಮ್ಮನ್ನು ಎಚ್ಚರಗೊಳಿಸಿದ್ದಾರೆ. ಇಂದಿಗೂ ಸಮಾಜದಲ್ಲಿ ಬೇರೂರಿರುವ ಅಂಧಶ್ರದ್ಧೆ, ಮೂಢನಂಬಿಕೆಗಳಿಗೆ ಯುವ ಜನಾಂಗ ಬಲಿಯಾಗದೆ ಶರಣರ ಮೌಲ್ಯಯುತ ವಚನಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕುʼ ಎಂದು ಸಲಹೆ ನೀಡಿದರು.
ʼದೇಶದ ಭಾವೈಕ್ಯತೆ ಮತ್ತು ಬಹುಸಂಸ್ಕೃತಿಯ ರಥಯಾತ್ರೆ ಕೊಂಡೊಯ್ಯುವ ನಿಜವಾದ ವಾರಸುದಾರರೇ ಈ ದೇಶದ ಮಕ್ಕಳು. ವಿದ್ಯಾರ್ಥಿಗಳಲ್ಲಿ ಬಸವ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಿತ್ತುವ ಉದ್ದೇಶದಿಂದ ಈ ಅಭಿಯಾನ ಕೈಗೊಳ್ಳಲಾಗಿದೆʼ ಎಂದು ಬೈಲೂರು-ಮುಂಡರಗಿ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ʼಜಗತ್ತಿಗೆ ಸಮಾನತೆ ತತ್ವ ಕೊಟ್ಟ ನೆಲ ಬೀದರ್ ಜಿಲ್ಲೆ. ಬೀದರ್ ಮತ್ತು ಬಸವಕಲ್ಯಾಣ ಜಗತ್ತಿನ ಅತ್ಯಂತ ಅದ್ಭುತ ಕ್ಷೇತ್ರಗಳಾಗಿವೆ. ಬಸವಾದಿ ಶರಣರ ಮೌಲಿಕ ತತ್ವಾದರ್ಶಗಳನ್ನುಇಂದಿನ ಯುವ ಜನಾಂಗಕ್ಕೆ ಮುಟ್ಟಿಸಿ ದೇಶದ ಬಹುಸಂಸ್ಕೃತಿ ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆʼ ಎಂದು ತಿಳಿಸಿದರು.
ಗಮನ ಸೆಳೆದ ಸಂವಾದ:
ಬೆಳಿಗ್ಗೆ ರಂಗಮಂದಿರದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಬಸವಣ್ಣನವರನ್ನು ಏಕೆ ಸಾಂಸ್ಕೃತಿಕ ನಾಯಕರೆಂದು ಘೋಷಿಸಿದರು? ಜಗತ್ತಿನಲ್ಲಿಯುದ್ದ ತಡೆಯಲು ಏನು ಮಾಡಬೇಕು? ವಿವಿಧ ರಾಜ್ಯ-ದೇಶಗಳಿಂದ ಕಲ್ಯಾಣಕ್ಕೆ ಬಂದ ಶರಣರು ಅವರ ಭಾಷೆ ಬಿಟ್ಟು, ಕನ್ನಡಲ್ಲೇಕೆ ವಚನ ರಚಿಸಿದರು? ಸಮಾಜದಲ್ಲಿ ನೈತಿಕ ಮೌಲ್ಯ ಹೆಚ್ಚಿಸಲು ಏನು ಮಾಡಬೇಕು? ಸಾತ್ವಿಕ ಸಮಾಜ ನಿರ್ಮಾಣಕ್ಕೆ ಶರಣರ ಸಂದೇಶವೇನು? ಮಹಿಳೆಯರು ಶಿಕ್ಷಣದಲ್ಲಿ ಹೆಚ್ಚು ಮುನ್ನೆಲೆಗೆ ಬರಬೇಕಾದರೆ ಏನು ಮಾಡಬೇಕು? ಕಲ್ಲದೇವರನ್ನು ಪೂಜಿಸುವ ಮಕ್ಕಳು ಪೋಷಕರನ್ನು ಸಾಕುತ್ತಿಲ್ಲ, ಇದಕ್ಕೆ ಶರಣರ ಸಂದೇಶವೇನು? ಪರಿಸರ ಸಂರಕ್ಷಣೆಯಲ್ಲಿ ಮಠಾಧೀಶರ ಪಾತ್ರವೇನು? ಶರಣರ ಕುರಿತು ರಾಜ್ಯ ಪಠ್ಯದಲ್ಲಿವೆ, ಸಿಬಿಎಸ್‌ಇ ಪಠ್ಯದಲ್ಲಿ ಏಕೆ ಸೇರಿಸಿಲ್ಲ? ಕರ್ನಾಟಕದ ವಿವಿಧ ಮಠಗಳಲ್ಲಿ ಪೂಜೆ, ಪ್ರಾರ್ಥನೆ ಒಂದೇ ರೀತಿ ಏಕಿಲ್ಲ? 12ನೇ ಶತಮಾನದಲ್ಲಿ ಲಕ್ಷ ಶರಣರಿಗೆ ದಾಸೋಹ ಕಾರ್ಯ ವ್ಯವಸ್ಥೆ ಹೇಗೆ ಸಾಧ್ಯವಾಗಿತ್ತು? ಎಂಬೆಲ್ಲ ಪ್ರಶ್ನೆಗಳು ತೂರಿಬಂದವು.
ಬಹುತೇಕ ಎಲ್ಲ ಪ್ರಶ್ನೆಗಳು ವಿವಿಧ ಕಾಲೇಜಿನ ವಿದ್ಯಾರ್ಥಿಗಳೇ ಕೇಳಿದರು. ತೋಂಟದ ಸಿದ್ಧರಾಮ ಸ್ವಾಮೀಜಿ, ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು, ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಬಿಕಾ ಅಕ್ಕ, ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಉತ್ತರಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ, ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಬಸವ ಸಂಸ್ಕೃತಿ ಅಭಿಯಾನದ ಅಧ್ಯಕ್ಷ ಬಸವರಾಜ ಧನ್ನೂರ, ಕೆಆರ್‌ಇ ಸಂಸ್ಥೆಯ ಅಧ್ಯಕ್ಷ ಬಸವರಾಜ ಪಾಟೀಲ ಅಷ್ಟೂರ, ಹೈಕಶಿ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ ವಾಲಿ, ಮುಖಂಡ ಬಸವರಾಜ ಬುಳ್ಳಾ, ಶಿವಶಂಕರ ಟೋಕರೆ ಮತ್ತಿತರರು ಇದ್ದರು. ಸಂವಾದದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬಸವಾನುಯಾಯಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಅದ್ದೂರಿ ಮೆರವಣಿಗೆ:
ನಗರದ ಬಿ.ವ್ಹಿ.ಭೂಮರೆಡ್ಡಿ ಕಾಲೇಜು ಆವರಣದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಾರ್ವಜನಿಕ ಸಮಾರಂಭದ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಬಸವೇಶ್ವರ ವೃತ್ತದಿಂದ ಬೊಮ್ಮಗೊಂಡೇಶ್ವರ ವೃತ್ತ, ಕಿತ್ತೂರ ರಾಣಿ ಚೆನ್ನಮ್ಮ ಮಾರ್ಗವಾಗಿ ಸಭಾಂಗಣದ ತನಕ ಅದ್ದೂರಿ ಮೆರವಣಿಗೆ ನಡೆಯಿತು.

ಬಸವೇಶ್ವರ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಮಠಾಧೀಶರು, ಜಿಲ್ಲೆಯ ಶಾಸಕರು, ಸಂಸದರು, ಗಣ್ಯರು, ಕನ್ನಡಪರ, ಬಸವಪರ ಸಂಘಟನೆಗಳ ಪ್ರಮುಖರು ಹಾಗೂ ಬಸವಾಭಿಮಾನಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.