ಭಾಲ್ಕಿ ತಾಲ್ಲೂಕಿನ ಹುಣಜಿ (ಕೆ) ಗ್ರಾಮ ಸಮೀಪದಲ್ಲಿ ತುಂಬಿ ಹರಿಯುತ್ತಿರುವ ಕಾರಂಜಾ ಜಲಾಶಯದ ಕಾಲುವೆಯಲ್ಲಿ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ಹುಣಜಿ(ಕೆ) ಗ್ರಾಮದ ಹರೀಶ ರಾಜಕುಮಾರ ಮಾನಕರ್ (16) ಮೃತ ಬಾಲಕ. ಬೆಳಿಗ್ಗೆ ಹರೀಶ ಮನೆಯಿಂದ ಹೊಲಕ್ಕೆ ಹೋಗಿ ಕೆಲಹೊತ್ತು ಕೆಲಸ ಮಾಡಿದ್ದಾನೆ. ಬಳಿಕ ಶೌಚಾಲಯಕ್ಕೆ ಹೋಗಿ ಬರುವೆ ಎಂದು ಹೇಳಿ ಹೋಗಿ ಕಾಲುವೆಯಲ್ಲಿ ಬಿದ್ದಿದ್ದಾನೆ. ಮರಳಿ ಬರಲಿಲ್ಲ ಎಂದು ಗಾಬರಿಗೊಂಡ ಪೋಷಕರು ಎಲ್ಲೆಡೆ ಹುಡುಕಾಡಿದರೂ ಮಾಹಿತಿ ಸಿಗಲಿಲ್ಲ. ಆತಂಕಗೊಂಡ ಪಾಲಕರು ಧನ್ನೂರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮರುದಿನ ಬೆಳಿಗ್ಗೆ ಹರೀಶ ಶವ ಕಾಲುವೆಯಲ್ಲಿ ಪತ್ತೆಯಾಗಿದೆ. ಕೈಕಾಲು ತೊಳೆದುಕೊಳ್ಳುವುದಕ್ಕಾಗಿ ಕಾಲುವೆ ಬಳಿ ಹೋದಾಗ ಆಯತಪ್ಪಿ ಒಳಗೆ ಬಿದ್ದು ನೀರಿನ ರಭಸದಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಶಂಕೆ ವ್ಯಕ್ತವಾಗಿದೆ. ಧನ್ನೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಮೂರು ತಿಂಗಳ ಹಿಂದೆ ಎಸ್‌ಎಸ್‌ಎಲ್‌ಸಿ ಪೂರೈಸಿದ ಹರೀಶನ ಜನ್ಮದಿನ ಸೆ.8ರಂದು ಇತ್ತು. ನಾಳೆ ನನ್ನ ಜನ್ಮದಿನ ಇದೆ ಆಚರಿಸೋಣ ಎಂದು ಎಲ್ಲರಿಗೂ ಹೇಳಿದನಂತೆ. ಆದರೆ, ಜನ್ಮದಿನ ಆಚರಿಸಿಕೊಳ್ಳಬೇಕಾದ ಹರೀಶ ಅಂದೇ ಶವವಾಗಿ ಪತ್ತೆಯಾಗಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆರೋಪ : ಇಬ್ಬರು ಪಿಡಿಒ ಅಮಾನತು