ಬೀದರ್ ಜಿಲ್ಲೆಯಾದ್ಯಂತ ವರುಣನ ಅಬ್ಬರ ಮುಂದುವರೆದಿದ್ದು, ನಿರಂತರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.
ಎರಡ್ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು, ಶನಿವಾರ ಬೆಳಿಗ್ಗೆಯಿಂದಲೇ ಆರಂಭವಾಗಿದೆ. ನಿರಂತರವಾಗಿ ಜಿಟಿಜಿಟಿ ಮಳೆಯಾಗುತ್ತಿದ್ದು, ನಡು ನಡುವೆ ಜೋರಾಗಿ ಬೀಳುತ್ತಿದೆ. ಜಿಲ್ಲೆಯ ಜಲಾಶಯ, ನದಿ, ಕೆರೆ-ಕಟ್ಟೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಸತತ ಮಳೆಯಿಂದ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. ತಗ್ಗು ಪ್ರದೇಶ, ಜಲಾಶಯ, ನದಿ ಪಾತ್ರದಲ್ಲಿ ಇರುವ ಜಮೀನುಗಳಲ್ಲಿ ಬೆಳೆದ ತೊಗರಿ, ಹತ್ತಿ, ಸೋಯಾಬಿನ್, ಕಬ್ಬು ಸೇರಿದಂತೆ ನಾನಾ ಬೆಳೆಗಳ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ಬೆಳೆ ನಾಶವಾಗಿದೆ. ಮಳೆಯಿಂದ ದೈನಂದಿನ ಕೆಲಸ, ಶಾಲಾ–ಕಾಲೇಜುಗಳಿಗೆ ಹೋಗುವವರು ತೊಂದರೆ ಅನುಭವಿಸುವಂತಾಗಿದೆ.
ಸೇತುವೆ ಮುಳುಗಡೆ ಸಂಪರ್ಕ ಕಡಿತ:
ಸತತ ಮಳೆ ಹಾಗೂ ಮಹಾರಾಷ್ಟ್ರದ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ ಮಾಂಜ್ರಾ ನದಿ ತೀರದಲ್ಲಿರುವ ಗ್ರಾಮಗಳ ಸೇತುವೆ ಮುಳುಗಡೆಯಾಗಿವೆ.
ಕಮಲನಗರ ತಾಲ್ಲೂಕಿನ ಬಳತ(ಕೆ) ಗ್ರಾಮ ಸಮೀಪದ ಸೇತುವೆ ಎರಡ್ಮೂರು ದಿನಗಳಿಂದ ಮುಳುಗಡೆಯಾಗಿದೆ. ಸಂತಪೂರ-ಸಂಗಮ-ಭಾಲ್ಕಿಗೆ ಸಂಪರ್ಕಿಸುವ ರಸ್ತೆ ಸ್ಥಗಿತವಾಗಿದೆ. ಭಾಲ್ಕಿ-ಹುಲಸೂರ ಮುಖ್ಯರಸ್ತೆಯ ಇಂಚೂರ ಸಮೀಪದ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರಿಂದ ತಾಲ್ಲೂಕು ಹಾಗೂ ಮಹಾರಾಷ್ಟ್ರದ ವಿವಿಧ ಗ್ರಾಮಗಳಿಗೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ.

ಮಾಂಜ್ರಾ ನದಿ ಭೋರ್ಗರಿಯುತ್ತಿದ್ದು, ನದಿ ತೀರದಲ್ಲಿರುವ ಕೌಠಾ(ಬಿ)-ಇಸ್ಲಾಂಪುರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಎರಡ್ಮೂರು ದಿನಗಳಿಂದ ಬಂದ್ ಆಗಿದೆ. ಕಾರಂಜಾ ಜಲಾಶಯ ಹರಿವು, ಮಾಂಜ್ರಾ ನದಿ ಪ್ರವಾಹದಿಂದ ಜಿಲ್ಲೆಯ ನಾನಾ ಕಡೆ ಸೇತುವೆಗಳು ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡ ಪರಿಣಾಮ ಜನರು ಪರದಾಡುವಂತಾಗಿದೆ.
ಹೆಸರು, ಉದ್ದು ಬೆಳೆದಿದ್ದ ರೈತರು ಪ್ರವಾಹದಿಂದ ಬೆಳೆ ಕಳೆದುಕೊಂಡು ತತ್ತರಿಸಿದರು. ಮುಂದೆ ಸೋಯಾಬಿನ್, ತೊಗರಿ, ಹತ್ತಿ ಬೆಳೆ ಕೈ ಹಿಡಿಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಮತ್ತೆ ಶುರುವಾದ ಮಳೆ, ಪ್ರವಾಹ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆ ನೀರು ಸಂಪೂರ್ಣ ನೀರುಪಾಲಾಗಿದೆ. ಜಿಲ್ಲೆಯ ರೈತರಿಗೆ ಅತಿವೃಷ್ಟಿ-ಅನಾವೃಷ್ಟಿ ಪದೇ ಪದೇ ಬಾಧಿಸುತ್ತಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ನೆಲಮಟ್ಟದಲ್ಲಿರುವ ಸೇತುವೆಗಳು ಪ್ರವಾಹದಿಂದ ಮುಳುಗಡೆಯಾಗುತ್ತಿವೆ. ನೆಲ ಮಟ್ಟದ ಸೇತುವೆಗಳನ್ನು ಮೇಲ್ದರ್ಜೆಗೇರಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ರೈತರು ಆಗ್ರಹಿಸುತ್ತಿದ್ದಾರೆ.

ಮಾಂಜ್ರಾ ನದಿ ಪ್ರವಾಹದಿಂದ ನದಿ ತೀರದ ಗ್ರಾಮಗಳಾದ ಚಿಲ್ಲರ್ಗಿ, ಬಾಬಳಿ ಸೇರಿದಂತೆ ಹಲವು ಗ್ರಾಮದ ಜನರಿಗೆ ಪ್ರವಾಹ ಭೀತಿ ಎದುರಾಗಿದ್ದು, ಚಿಲ್ಲರ್ಗಿ ಗ್ರಾಮದ ಪ್ರಕಾಶ ನಾಟಿಕರ್ ಎಂಬುವವರ ದನದ ಕೊಟ್ಟಿಗೆಯೊಳಗೆ ನೀರು ನುಗ್ಗಿದ್ದು, ನದಿ ಪ್ರವಾಹ ಏರಿಕೆಯಾಗುವ ಸಾಧ್ಯತೆಯಿದ್ದು, ಗ್ರಾಮದೊಳಗೆ ನೀರು ನುಗ್ಗುವ ಆತಂಕ ಕಾಡುತ್ತಿದೆ ಎಂದು ಹೇಳಿದರು.
