ಕಮಲನಗರ ತಾಲ್ಲೂಕಿನ ಖೇಡ ಗ್ರಾಮದಿಂದ ಹುಲಸೂರ(ಕೆ) ಗ್ರಾಮದ ರಸ್ತೆಯಲ್ಲಿ ಅಲ್ಲಲ್ಲಿ ಭಾರೀ ಗಾತ್ರದ ಗುಂಡಿಗಳು ಬಿದ್ದಿದ್ದು, ವಾಹನಗಳ ಸವಾರರು ಸಂಚಾರಕ್ಕೆ ಪ್ರಯಾಸ ಪಡುವಂತಾಗಿದೆ.
ಸಂಗಮ ಗ್ರಾಮದಿಂದ ಖೇಡ ಗ್ರಾಮದ ಮುಖಾಂತರ ಹುಲಸೂರ(ಕೆ), ಚಾಂಡೇಶ್ವರ, ಸೋನಾಳ, ಕಾಳಗಪುರ, ಸೋನಾಳವಾಡಿ ಗ್ರಾಮಗಳಿಗೆ ಸಂಪರ್ಕಿಸುವ ಈ ರಸ್ತೆಯಲ್ಲಿ ಅಲ್ಲಲ್ಲಿ ಹಾಕಿದ ಡಾಂಬರ್ ಕಿತ್ತು ದೊಡ್ಡದಾದ ತೆಗ್ಗು-ಗುಂಡಿಗಳು ಬಿದ್ದಿವೆ. ಇದರಿಂದ ವಾಹನ ಸವಾರರಿಗೆ, ಜಮೀನುಗಳಿಗೆ ತೆರಳುವ ರೈತರಿಗೆ ನಿತ್ಯ ತೊಂದರೆಯಾಗುತ್ತಿದೆ.
ಮೊದಲೇ ದುರಸ್ತಿಗೆ ಕಾದಿರುವ ರಸ್ತೆಯಲ್ಲಿ ಎರಡು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಿದ್ದು,ಗುಂಡಿಗಳಲ್ಲಿ ನೀರು ಸಂಗ್ರಹವಾಗಿದೆ. ಈ ಹದಗೆಟ್ಟ ರಸ್ತೆಯಲ್ಲಿ ವಾಹನ ಸವಾರರು ಸ್ವಲ್ಪ ವೇಗವಾಗಿ ತೆರಳಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಇಲ್ಲಿನ ನಿತ್ಯ ಸಂಚರಿಸುವ ಸವಾರರು ಹೇಳುತ್ತಾರೆ.
ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ತೆಗ್ಗು ಬಿದ್ದ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾರ್ಯ ಮಾಡದೇ ನಿರ್ಲಕ್ಷ ಮಾಡುತ್ತಿದ್ದಾರೆ. ರಸ್ತೆ ಹದಗೆಟ್ಟು ದೊಡ್ಡ ಗುಂಡಿಗಳು ಬಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಮುಂದಾಗದೆ ಮೌನ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ʼಖೇಡ ದಿಂದ ಹುಲಸೂರ(ಕೆ) ಗ್ರಾಮಕ್ಕೆ ಹೋಗುವ ಸುಮಾರು 4 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟು ತೆಗ್ಗು-ಗುಂಡಿಗಳು ಬಿದ್ದಿವೆ. ಮಳೆಗಾಲ ಆರಂಭವಾಗಿದ್ದರಿಂದ ಈ ರಸ್ತೆಯಲ್ಲಿ ಸಂಚಾರ ಮಾಡುವುದು ಹರಸಾಹಸ ಎಂಬಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಗುಂಡಿಗಳನ್ನು ಮುಚ್ಚಿ ಸವಾರರ ಜೀವ ಉಳಿಸಬೇಕುʼ ಎಂದು ಖೇಡ ಗ್ರಾಮದ ನಿವಾಸಿ ಉತ್ತಮ ಸುತಾರ್ ಒತ್ತಾಯಿಸಿದ್ದಾರೆ.
ʼಚುನಾವಣೆ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ಮಾಡಿಸಿಕೊಡುತ್ತೇವೆ ಎಂದು ಭರವಸೆ ನೀಡಿದ ಜನಪ್ರತಿನಿಧಿಗಳು ಜನರಿಗೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಿಕೊಡಬೇಕು. ಈ ಮಾರ್ಗದ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳಿವೆ. ದ್ವಿಚಕ್ರ ಸೇರಿದಂತೆ ಆಟೊ, ಕಾರು, ಸೈಕಲ್, ಟ್ರ್ಯಾಕ್ಟರ್ ಸೇರಿದಂತೆ ಹಲವು ವಾಹನಗಳ ಸವಾರರಿಗೆ ನುಂಗಲಾರದ ತುತ್ತಾಗಿದೆ. ಮಳೆ ಬಂದರಂತೂ ವಾಹನ ಸವಾರರ ಪಾಡು ದೇವರಿಗೆ ಪ್ರೀತಿ ಎಂಬಂತಾಗುತ್ತದೆʼ ಎಂದು ಚಾಂಡೇಶ್ವರ ಗ್ರಾಮದ ಶರಣು ಕುಶನೂರೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕೆಕೆಆರ್‌ಟಿಸಿ ಬಸ್-ಬೈಕ್ ಮುಖಾಮುಖಿ ಡಿಕ್ಕಿ : ಸವಾರ ಸಾವು
ಈ ಕುರಿತು ʼಈದಿನ.ಕಾಮ್ʼ ಜೊತೆಗೆ ಔರಾದ್ ತಾಲ್ಲೂಕು ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್ ವೆಂಕಟ ಸಿಂಧೆ ಮಾತನಾಡಿ, ʼಮಳೆಯಿಂದ ಹಾನಿಯಾದ ರಸ್ತೆಗಳ ಕುರಿತು ಮಾಹಿತಿ ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತಿದ್ದು, ಅನುದಾನ ಬಂದ ಬಳಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದುʼ ಎಂದು ತಿಳಿಸಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.