ಬೀದರ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಮಕ್ಕಳು, ವಯೋವೃದ್ಧರ ಸುರಕ್ಷತೆಗಾಗಿ ವಿಶೇಷ ಗಮನ ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.
ನದಿ, ಹಳ್ಳ, ಕೆರೆಗಳನ್ನು ದಾಟದಂತೆ ಹಾಗೂ ಜಾನುವಾರುಗಳನ್ನು ನದಿ ದಂಡೆ ಅಥವಾ ಹಳ್ಳದ ತಟಕ್ಕೆ ಬಿಡಬಾರದು ಎಂದು ಮನವಿ ಮಾಡಿದ ಅವರು, ʼಅಧಿಕಾರಿಗಳಿಗೆ ಕೂಡ ನಿರ್ದೇಶನ ನೀಡಿದ್ದು, ಅವರು ತಮ್ಮ ತಮ್ಮ ಪ್ರದೇಶಗಳಲ್ಲಿ ಸತತವಾಗಿ ಹಾಜರಿದ್ದು ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರಬೇಕುʼ ಎಂದಿದ್ದಾರೆ.
ಸಾರ್ವಜನಿಕರ ಜೀವ ಮತ್ತು ಆಸ್ತಿ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇತ್ತೀಚೆಗೆ ಔರಾದ್, ಕಮಲನಗರ ತಾಲೂಕಿನಲ್ಲಿ ಅಧಿಕ ಮಳೆಯಿಂದ ಅಪಾರ ಹಾನಿ ಉಂಟಾಗಿತ್ತು. ತದನಂತರ ಕೆಲ ದಿನಗಳ ಕಾಲ ಬಿಡುವು ಕೊಟ್ಟ ಮಳೆ ಮಂಗಳವಾರದಿಂದ ಮತ್ತೆ ಆರಂಭವಾಗಿದ್ದು, ಬುಧವಾರ ರಾತ್ರಿಯಿಂದ ಜಿಲ್ಲಾದ್ಯಂತ ಮಳೆ ಅಬ್ಬರ ಮುಂದುವರೆದ ಹಿನ್ನೆಲೆ ಅನೇಕ ಕಡೆ ಕೆರೆ, ಕಟ್ಟೆಗಳು ಉಕ್ಕಿ ಹರಿಯುತ್ತಿವೆ. ಕೆಲವೆಡೆ ಸೇತುವೆ ಮೇಲಿಂದ ನೀರು ಹರಿಯುತ್ತಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ.
ಇದನ್ನೂ ಓದಿ : ಔರಾದ್ ಸೀಮೆಯ ಕನ್ನಡ | ದನ ಕಾಯೋರು ತಿಂಗಳಿಗೆ ಪಗಾರ್ ಎಷ್ಟು ತಕೋತಾರ್ ಗೊತ್ತಾ!
ಅಧಿಕ ಮಳೆ ಹಿನ್ನೆಲೆ ಔರಾದ್, ಬೀದರ್, ಕಮಲನಗರ, ಭಾಲ್ಕಿ, ಹುಲಸೂರ ತಾಲೂಕಿನಲ್ಲಿ ಅಂಗನವಾಡಿ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.