ಭಾರಿ ಮಳೆಯಿಂದಾಗಿ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಸಾಕಷ್ಟು ಬೆಳೆ ಹಾನಿಯಾಗಿದ್ದು, ಪ್ರತಿ ಗ್ರಾಮ ಮತ್ತು ಹೊಲಗಳಿಗೆ ಭೇಟಿ ನೀಡಿ ಸಮೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸಿ ರೈತರಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಮಾಜಿ ಸಚಿವ, ಶಾಸಕ ಪ್ರಭು ಬಿ.ಚವ್ಹಾಣ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಔರಾದ(ಬಿ) ತಾಲ್ಲೂಕು ಪಂಚಾಯತ ಕಛೇರಿ ಸಭಾಂಗಣದಲ್ಲಿ ಸೆ.12ರಂದು ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆ ಪ್ರಮಾಣ ಮತ್ತು ಬೆಳೆಹಾನಿಯ ಬಗ್ಗೆ ಸಹಾಯಕ ಕೃಷಿ ನಿರ್ದೇಶಕರಾದ ಧೂಳಪ್ಪ ವಿವರಣೆ ನೀಡಿದರು. ಸಮೀಕ್ಷೆ ಕುರಿತ ಮಾಹಿತಿಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಜುಲೈ ಮತ್ತು ಆಗಸ್ಟ್ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕ್ಷೇತ್ರದಲ್ಲಿನ ಅಂದಾಜು ಒಂದು ಲಕ್ಷ ಹೆಕ್ಟೇರ್ ಕೃಷಿ ಭೂಮಿಯ ಪೈಕಿ ಸುಮಾರು 60 ಸಾವಿರ ಹೆಕ್ಟೇರ್ ಗಿಂತ ಹೆಚ್ಚು ಬೆಳೆ ಹಾನಿಯಾಗಿದೆ. ಆದರೆ 30 ಸಾವಿರ ಹೆಕ್ಟೇರ್ ಮಾತ್ರ ಸಮೀಕ್ಷೆ ಮಾಡಿರುವುದು ಸರಿಯಲ್ಲʼ ಎಂದು ಬೇಸರ ಹೊರಹಾಕಿದರು.
ನದಿ ಸಮೀಪದ ಪ್ರದೇಶ, ಹಳ್ಳ, ತಗ್ಗು ಪ್ರದೇಶದಲ್ಲಿನ ಎಲ್ಲ ಬೆಳೆಗಳು ಸಂಪೂರ್ಣ ಮುಳುಗಡೆಯಾಗಿವೆ. ಕೆರೆ-ಕಟ್ಟೆಗಳು ಒಡೆದು ಮಣ್ಣಿನ ಸಹಿತ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಬಿತ್ತನೆಯಾದ ಸೋಯಾಅವರೆ, ತೊಗರಿ, ಹತ್ತಿ ನಷ್ಟವಾಗಿದ್ದು, ಕಟಾವಿಗೆ ಬಂದಿದ್ದ ಉದ್ದು, ಹೆಸರು ಸಂಪೂರ್ಣ ಹಾಳಾಗಿದೆ. ಸಮೀಕ್ಷೆಗೆ ನಿಯೋಜಿಸಿದ ಹಲವು ಸಿಬ್ಬಂದಿ ಗ್ರಾಮಗಳಿಗೆ ಭೇಟಿ ನೀಡದೇ ಕಚೇರಿಯಲ್ಲಿ ಕುಳಿತು ವರದಿ ಸಲ್ಲಿಸುತ್ತಿದ್ದಾರೆ. ಹೀಗಾದರೆ ರೈತರ ಪರಿಸ್ಥಿತಿ ಏನಾಗಬಹುದುʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಉಪ ಜೀವನಕ್ಕೆ ಆಧಾರವಾಗಿದ್ದ ಬೆಳೆ ಕಳೆದುಕೊಂಡು ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ರೈತರ ನೆರವಿಗೆ ನಿಲ್ಲಬೇಕು. ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆಯನ್ನು ವ್ಯವಸ್ಥಿತವಾಗಿ ಮಾಡಿ ಸರ್ಕಾರಕ್ಕೆ ನಿಖರವಾದ ವರದಿ ಸಲ್ಲಿಸಿ ರೈತರಿಗೆ ಅನುಕೂಲವಾಗುಂತೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ನಾನು ಸುಮ್ಮನಿರುವುದಿಲ್ಲʼ ಎಂದು ಎಚ್ಚರಿಸಿದರು.
ʼಬೆಳೆವಿಮೆ ನೀಡುವ ಕಂಪನಿಗಳಿಂದ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಔರಾದ ಕ್ಷೇತ್ರದಲ್ಲಿ ಅತಿ ಹೆಚ್ಚು ರೈತರು ಯೋಜನೆಯಡಿ ನೋಂದಣಿಯಾಗಿದ್ದಾರೆ. ಕಂಪನಿಯವರು ತಮ್ಮಷ್ಟಕ್ಕೆ ತಾವೇ ಸಮೀಕ್ಷೆ ಮಾಡದೇ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸೇವಕರು, ಪಿಡಿಓಗಳನ್ನು ಕರೆದೊಯ್ಯಬೇಕು. ಎಲ್ಲ ರೈತರಿಗೆ ತಂತ್ರಾಂಶದ ಜ್ಞಾನ ಇರುವುದಿಲ್ಲ. ಹಾಗಾಗಿ ರೈತರಿಗೆ ಆಫ್‌ಲೈನ್ ಮೂಲಕ ಮಾಹಿತಿ ಸಲ್ಲಿಸಲು ಅವಕಾಶ ಕಲ್ಪಿಸಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕುʼ ಎಂದರು.
ʼಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು. ಕೆಲವು ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾಗಿ ಓದಲು ಬರೆಯಲು ಬರುತ್ತಿಲ್ಲ. ಹೀಗಾದರೆ ಫಲಿತಾಂಶ ಸುಧಾರಣೆ ಹೇಗೆ ಸಾಧ್ಯ? ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು. ಸರ್ಕಾರಿ ಶಾಲೆಗಳ ನಿವೇಶನ ಸಮಸ್ಯೆ ಇತ್ಯರ್ಥಪಡಿಸಬೇಕುʼ ಎಂದು ಸೂಚಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಸಾಕಷ್ಟು ಅವ್ಯವಹಾರಗಳು ಆಗುತ್ತಿವೆ. ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರ ಸಾಮಗ್ರಿಗಳು ಸಂಪೂರ್ಣ ಕಳಪೆಯಿಂದ ಕೂಡಿವೆ. ಬೆಲ್ಲ ಮತ್ತು ಪೌಡರ್ ಸೇವಿಸಲು ಯೋಗ್ಯವಾಗಿರುವುದಿಲ್ಲ. ಆದರೂ ಸಿಡಿಪಿಓ ಸುಮ್ಮನಿದ್ದಾರೆ ಎಂದು ಶಾಸಕರು ಕೋಪಗೊಂಡರು.
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರ ನೇಮಕಾತಿಯಲ್ಲಿ ಇಲಾಖೆ ಸಿಬ್ಬಂದಿ ಹಣ ವಸೂಲಿಗೆ ಇಳಿದಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಇಂಥವುಗಳನ್ನು ಗಂಭೀರವಾಗಿ ಪರಿಗಣಿಸಿ ಭ್ರಷ್ಟ ಸಿಬ್ಬಂದಿಯನ್ನು ಮನೆಗೆ ಕಳುಹಿಸಬೇಕುʼ ಎಂದು ಸೂಚಿಸಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು, ಆರೋಗ್ಯ, ತೋಟಗಾರಿಕೆ, ಪಂಚಾಯತ ರಾಜ್, ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ, ಜೆಸ್ಕಾಂ, ಅರಣ್ಯ, ರೇಷ್ಮೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ : ಬೀದರ್ | ಪಿಡಿಒಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ : ಸಿಇಒ ಗಿರೀಶ ಬದೋಲೆ
ತಾಲ್ಲೂಕು ಪಂಚಾಯತ ಆಡಳಿತಾಧಿಕಾರಿ ಸೂರ್ಯಕಾಂತ ಬಿರಾದಾರ, ತಹಸೀಲ್ದಾರರಾದ ಮಹೇಶ ಪಾಟೀಲ, ರಮೇಶ ಪೆದ್ದೆ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಹಣಮಂತರಾವ ಕೌಟಗೆ, ಪೊಲೀಸ್ ವೃತ್ತ ನಿರೀಕ್ಷಕ ರಘುವೀರಸಿಂಗ್ ಠಾಕೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.