ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಪತ್ರಕರ್ತರು ವಿಷಮ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಅನ್ಯಾಯದ ವಿರುದ್ಧ ಗಟ್ಟಿ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಚಿಟಗುಪ್ಪ ತಹಸೀಲ್ದಾರ್ ಮಂಜುನಾಥ್ ಪಾಂಚಾಳ ಹೇಳಿದರು.
ಚಿಟಗುಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣದ ಜ್ಞಾನಗಂಗಾ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಡಿ.ವಿ.ಜಿ ಅವರ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಮನಾಬಾದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದುರ್ಯೋಧನ ಹೂಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಪತ್ರಕರ್ತರು ಸಮಾಜ ಬದಲಾವಣೆ ತುಡಿತದಿಂದ ನಿಸ್ವಾರ್ಥ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಾರೆ. ಹಲವು ಅಡೆತಡೆಗಳ ಮಧ್ಯೆಯೂ ಎದೆಗುಂದದೆ ವರದಿ ಪ್ರಕಟಿಸುವ ಪತ್ರಕರ್ತರ ಕಾರ್ಯ ನಿಜಕ್ಕೂ ಶ್ಲಾಘನೀಯʼ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕ ಕಸಾಪ ಅಧ್ಯಕ್ಷ ಅನೀಲಕುಮಾರ ಸಿಂಧೆ ಮಾತನಾಡಿ, ʼಪತ್ರಕರ್ತರು ಸತ್ಯ ಮತ್ತು ನ್ಯಾಯದ ಪರವಾಗಿ ದನಿಯಾಗುತ್ತಾರೆ. ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಪತ್ರಕರ್ತರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ. ನಾವೆಲ್ಲರೂ ಅವರನ್ನು ಪ್ರೋತ್ಸಾಹಿಸಿ, ಸಹಕಾರ ನೀಡಬೇಕಿದೆʼ ಎಂದರು.
ಚಿಂತಕ ಶಾಂತಕುಮಾರ್ ಪಾಟೀಲ್ ಅವರು ಡಿವಿಜಿ ಅವರ ಬದುಕು-ಬರಹ ಕುರಿತು ವಿಶೇಷ ಉಪನ್ಯಾಸ ನೀಡಿದರು. ಗುರುಲಿಂಗ ಶಿವಾಚಾರ್ಯ ಸಾನಿಧ್ಯ ವಹಿಸಿದರು. ಪ್ರಾಸ್ತಾವಿಕವಾಗಿ ಸುರೇಶ ಕುಂಬಾರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹುಮನಾಬಾದ ಹಾಗೂ ಚಿಟಗುಪ್ಪಾ ತಾಲೂಕಿನ ಎಲ್ಲಾ ಪತ್ರಕರ್ತರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.
ಇದನ್ನೂ ಓದಿ : ಬೀದರ್ | ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಸುಧಾರಣೆಗೆ ಒತ್ತು ಕೊಡಿ : ಸಚಿವ ಈಶ್ವರ ಖಂಡ್ರೆ
ಸಮಾರಂಭದಲ್ಲಿ ಚಿಟಗುಪ್ಪ ತಾಲೂಕು ಪಂಚಾಯತ್ ಇಒ ಲಕ್ಷ್ಮಿ ಬಿರಾದಾರ್, ಪುರಸಭೆ ಮುಖ್ಯಾಧಿಕಾರಿ ಹುಸಾಮೋದಿನ್ ಬಾಬಾ, ಪರಿಸರ ಪ್ರೇಮಿ ಶೈಲೇಂದ್ರ ಕಾವಡಿ ಸೇರಿದಂತೆ ಪ್ರಮುಖರಾದ ಸಂಜುಕುಮಾರ ಜುನ್ನಾ, ರಾಜಪ್ಪಾ ಜಮಾದಾರ, ಪ್ರೇಮಿಳಾ ರೆಡ್ಡಿ ಮತ್ತಿತರರು ಹಾಜರಿದ್ದರು. ಈರಮ್ಮ ಜಮಗಿ ನಿರ್ವಹಿಸಿದರು. ಲಕ್ಷ್ಮೀಕಾಂತ ವಂದಿಸಿದರು.