ಇತ್ತೀಚಿಗೆ ಶಾಲಾ ಚಾವಣಿ ಕುಸಿದು ವಿದ್ಯಾರ್ಥಿ ಗಾಯಗೊಂಡಿರುವ ಬೀದರ್ ತಾಲೂಕಿನ ಬಗದಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿ, ಶಿಕ್ಷಕರಿಂದ ಮಾಹಿತಿ ಪಡೆದರು.
ನಂತರ ಮೌಲಾನಾ ಆಜಾದ ಪ್ರೌಢ ಶಾಲೆಗೆ ಭೇಟಿ ನೀಡಿ ಶಿಥಿಲಗೊಂಡ ಕಟ್ಟಡಗಳ ಪರಿಶೀಲನೆ ನಡೆಸಿದರು. ಅಲ್ಲಿನ ನಲಿ ಕಲಿ ಕೇಂದ್ರದ ಪುಟ್ಟ ಮಕ್ಕಳೊಂದಿಗೆ ಕುಳಿತು ಚಟುವಟಿಕೆಗಳನ್ನು ವೀಕ್ಷಿಸಿದರು. ಬಳಿಕ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಗಣಿತ ವಿಷಯ ಪಾಠ ಮಾಡಿದರು. ಮಕ್ಕಳ ಶೈಕ್ಷಣಿಕ ಗುಣಪಟ್ಟ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಲಾ ಉಪನಿರ್ದೇಶಕ ಓಂಕಾರ ರುಗನ್ ಹಾಗೂ ಬಿಇಒ ಮದರ ಖಾನ್ ಉಪಸ್ಥಿತರಿದ್ದರು.

ನಂತರ ಸಿಕಿಂದ್ರಾಪುರ ಹಾಲು ಉತ್ಪಾದಕರ ಸಂಘಕ್ಕೆ ಭೇಟಿ ನೀಡಿ ಮಹಿಳಾ ಸದಸ್ಯರೊಂದಿಗೆ ಹಾಲು ಶೇಖರಣೆ ಬಗ್ಗೆ ಮಾಹಿತಿ ಪಡೆದರು. ತದನಂತರ ಭಾಲ್ಕಿ ತಾಲೂಕಿನ ಹಾಲಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.
ಆಸ್ಪತ್ರೆಗೆ ದಿನನಿತ್ಯ ಬರುವ ಹೊರ ರೋಗಿಗಳ ವಿವರ, ಹೆರಿಗೆ ಕೋಣೆ ಹಾಗೂ ಔಷಧಾಲಯ ಪರಿಶೀಲಿಸಿದರು. ನಾಯಿ ಕಡಿತ ಹಾಗೂ ಹಾವು ಕಡಿತಕ್ಕೆ ಇಂಜೆಕ್ಷಗಳನ್ನು ಕಡ್ಡಾಯವಾಗಿ ಲಭ್ಯವಿರುವಂತೆ ಸೂಚಿಸಿದರು. ಅನಿಮಿಯಾ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ವೈದ್ಯಾಧಿಕಾರಿ ಡಾ.ಜೋಹಾ ಫಾತಿಮಾ ಅವರಿಗೆ ಸೂಚಿಸಿದರು.
ಇದನ್ನೂ ಓದಿ : ಕೊಪ್ಪಳ | ಮೂರು ವರ್ಷದಲ್ಲಿ 45 ತಾಯಂದಿರು, 1,254 ಶಿಶುಗಳ ಸಾವು
ಆಗಸ್ಟ್15 ರಂದು ನಡೆಯಲಿರುವ ಧ್ವಜಾರೋಹಣ ಹಿನ್ನೆಲೆಯಲ್ಲಿ ಜಿಲ್ಲಾ ನೆಹರು ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಬುಧವಾರ ಭೇಟಿ ನೀಡಿ ಪೂರ್ವ ಸಿದ್ಧತೆ ಪರಿಶೀಲಿಸಿದರು.