12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸರ್ವಸಮಾನತೆಯ ಕಲ್ಯಾಣ ರಾಜ್ಯವನ್ನು ಕಟ್ಟಿದ್ದರು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ವಿಜಯದಶಮಿ (ದಸರಾ) ನಿಮಿತ್ತ ಗುರುವಾರ ಆಯೋಜಿಸಿದ್ದ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ʼಬಸವಣ್ಣನವರ ಕ್ರಾಂತಿಯಲ್ಲಿ ಅನೇಕ ಮಹಾಶರಣರು ಭಾಗಿಯಾಗಿದ್ದರು. ಅದರಲ್ಲಿ ಶರಣ ಹರಳಯ್ಯ ಮತ್ತು ಶರಣ ಮಧುವಯ್ಯನವರು ಬಸವಸ್ಥಾಪಿತ ಸಮತಾ ರಾಜ್ಯ ನಿರ್ಮಾಣಕ್ಕಾಗಿ ಬಲಿದಾನವನ್ನು ನೀಡಿದರು. ಲಿಂಗಾಯತ ಧರ್ಮ ಸಾವಿರಾರು ಶರಣರ ತ್ಯಾಗ ಮತ್ತು ಬಲಿದಾನದ ಮೇಲೆ ನಿಂತಿದೆ. ವಿಶೇಷವಾಗಿ ಹರಳಯ್ಯ ಮತ್ತು ಮಧುವಯ್ಯನವರು ಸಮತಾ
ತತ್ವಕ್ಕಾಗಿ ಎಳೆಹೂಟಿ ಶಿಕ್ಷೆಯನ್ನು ಅನುಭವಿಸಿದರು. ಆ ದಿನ ಮಹಾನವಮಿ ಅದಕ್ಕೆ ಶರಣರು ಮರಣವೇ ಮಹಾನವಮಿʼ ಎಂದು ಹೇಳಿದರು.
ʼಶರಣರಿಗೆ ಶಿಕ್ಷೆಯಾಗಿದ್ದರೂ ಅವರು ಶರಣತತ್ವಕ್ಕಾಗಿ ತಮ್ಮ ಬಲಿದಾನ ನೀಡಿದ್ದಾರೆಂದು ಅದು ನಮಗೆ ಸೋಲಲ್ಲ ಗೆಲವು ಎಂದು ತಿಳಿದು ಕಲ್ಯಾಣ ಕ್ರಾಂತಿ ವಿಜಯೋತ್ಸವವನ್ನು ಆಚರಿಸುತ್ತ ಬಂದಿದ್ದೇವೆ. ಶರಣರ ತ್ಯಾಗ ಬಲಿದಾನ ಜಗತ್ತಿಗೆ ಪರಿಚಯಿಸುವ ಹೊಣೆಗಾರಿಕೆ ನಮ್ಮೆಲ್ಲರದಾಗಿದೆʼ ಎಂದು ತಿಳಿಸಿದರು.
ಪಟ್ಟಣದಲ್ಲಿ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮದ ಅಂಗವಾಗಿ ಪಲ್ಲಕ್ಕಿ ಮೆರವಣಿಗೆ ವೈಭವದಿಂದ ನೆರವೇರಿತು. ಹಿರೇಮಠ ಸಂಸ್ಥಾನದಿಂದ ಆರಂಭಗೊಂಡ ಪಲ್ಲಕ್ಕಿ ಮೆರವಣಿಗೆ ಪ್ರಮುಖ
ಬೀದಿ, ರಸ್ತೆ ಮೂಲಕ ಸಂಚರಿಸಿ ಚನ್ನಬಸವಾಶ್ರಮ ಪರಿಸರದಲ್ಲಿ ಸಮಾವೇಶಗೊಂಡಿತು.
ಅ.5 ರಂದು ಬಸವ ಸಂಸ್ಕೃತಿ ಅಭಿಯಾನ ಸಮಾರೋಪ :
ಅ.5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ ಜರುಗಲಿದೆ ಜಿಲ್ಲೆಯ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬಸವಲಿಂಗ ಪಟ್ಟದ್ದೇವರು ಮನವಿ ಮಾಡಿದರು. ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ವತಿಯಿಂದ ಕಳೆದ ಸೆ.1ರಿಂದ 30ರ ವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಾಗಿಬಂದ ಬಸವ ಸಂಸ್ಕೃತಿ ಅಭಿಯಾನ ಅತ್ಯಂತ ಯಶಸ್ವಿ ಕಂಡಿದೆ’ ಎಂದು ತಿಳಿಸಿದರು.
ಇದನ್ನೂ ಓದಿ : ಕಲ್ಯಾಣದಲ್ಲಿ ನೆರೆ | ಪರಿಹಾರದ ವಿವರ ನೀಡುವಂತೆ ಸರಕಾರಕ್ಕೆ ಹೆಚ್.ಡಿ.ದೇವೇಗೌಡ ಗಡುವು
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಹರಳಯ್ಯ ಸಮಾಜದ ಅಧ್ಯಕ್ಷರು, ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಪಾರ್ವತಿ ಧೂಮ್ಮನಸೂರೆ ಸೇರಿದಂತೆ ಹಲವರು ಇದ್ದರು. ರಾಜು ಜುಬರೆ ವಚನ ಗಾಯನ ನಡೆಸಿಕೊಟ್ಟರು. ಶಂಭುಲಿಂಗ ಕಾಮಣ್ಣ ಸ್ವಾಗತಿಸಿದರು. ನವಲಿಂಗ ಪಾಟೀಲ್ ನಿರೂಪಿಸಿದರು.