ಬೀದರ್ ಬೆಟರ್‍ಮೆಂಟ್ ಫೌಂಡೇಷನ್‍ನಿಂದ ಹೊರ ತರಲಾದ ತುರ್ತು ನೆರವಿನ ಸಂಖ್ಯೆಗಳ ಸ್ಟಿಕ್ಕರ್ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ನಗರದಲ್ಲಿ ಗುರುವಾರ ಬಿಡುಗಡೆ ಮಾಡಿದರು.
ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ನೆರವಾಗುವ ದಿಸೆಯಲ್ಲಿ ಫೌಂಡೇಷನ್ ತುರ್ತು ಸಂಖ್ಯೆಗಳ ಸ್ಟಿಕ್ಕರ್ ಹೊರ ತಂದಿರುವುದು ಪ್ರಶಂಸನೀಯ ಎಂದು ಹೇಳಿದರು.
ಫೌಂಡೇಷನ್ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮಾತನಾಡಿ, ʼಫೌಂಡೇಷನ್‍ನಿಂದ ಮನೆ-ಮನೆಗೆ ಅಂಟಿಸಲು ತುರ್ತು ನೆರವಿನ ಸಂಖ್ಯೆಗಳ ಒಟ್ಟು 10 ಸಾವಿರ ಸ್ಟಿಕ್ಕರ್ ವಿತರಿಸಲಾಗುತ್ತಿದೆ. ಸ್ಟಿಕ್ಕರ್ ಪೊಲೀಸ್ ಠಾಣೆ, ಆಸ್ಪತ್ರೆ, ಆಂಬುಲನ್ಸ್, ಮಹಿಳಾ ಸಹಾಯವಾಣಿ, ರಾಷ್ಟ್ರೀಯ ಟೆಲಿಮೆಂಟಲ್ ಹೆಲ್ತ್ ಕಾರ್ಯಕ್ರಮ, ಜೆಸ್ಕಾಂ, ಏರ್‍ಪೋರ್ಟ್, ಮಹಾನಗರ ಪಾಲಿಕೆ ಸೇರಿದಂತೆ ಮಹತ್ವದ ದೂರವಾಣಿ ಸಂಖ್ಯೆಗಳನ್ನು ಒಳಗೊಂಡಿದೆʼ ಎಂದು ತಿಳಿಸಿದರು.
ʼತುರ್ತು ಸಂಖ್ಯೆಗಳು ಕಳ್ಳತನ, ಅಪಘಾತ, ಅನಾರೋಗ್ಯ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಸಹಕಾರಿಯಾಗಲಿವೆ. ಕಾರಣ, ಸಾರ್ವಜನಿಕರು ಮನೆಯ ಗೋಡೆ, ಬಾಗಿಲು ಮತ್ತಿತರ ಗಮನ ಸೆಳೆಯುವ ಸ್ಥಳಗಳಲ್ಲಿ ಸ್ಟಿಕ್ಕರ್ ಅಂಟಿಸಬೇಕುʼ ಎಂದು ಕೋರಿದರು.
ಇದೇ ವೇಳೆ ಬೀದರ್ ಬೆಟರ್‍ಮೆಂಟ್ ಫೌಂಡೇಷನ್ ವತಿಯಿಂದ ಕೈಗೊಳ್ಳಲಾದ ವಿವಿಧ ಸಾಮಾಜಿಕ ಕಾರ್ಯಗಳ ಸಂಕ್ಷಿಪ್ತ ವರದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸಲ್ಲಿಸಲಾಯಿತು.
ಇದನ್ನೂ ಓದಿ : ಬೀದರ್ | ವರದಕ್ಷಿಣೆ ಕಿರುಕುಳ ಆರೋಪ : ಗಂಡ, ಮಾವ, ಅತ್ತೆ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್
ಫೌಂಡೇಷನ್‍ನ ಡಾ.ಮಕ್ಸೂದ್ ಚಂದಾ, ಮುಹಮ್ಮದ್ ರಫಿಕ್ ಅಹಮ್ಮದ್, ಮುಹಮ್ಮದ್ ಹುಸೇನಿ, ಮುಕ್ತಾರ್ ಅಹಮ್ಮದ್, ಹಾಮೇದ್ ಖಾದ್ರಿ, ತಾಹ ಕಲೀಮುಲ್ಲಾ ಇದ್ದರು.