ಕಳೆದ ಒಂದು ತಿಂಗಳಿಂದ ನಿರಂತರ ಮಳೆಯಿಂದ ರೈತರು ಬೆಳೆದಿದ್ದ ಬೆಳೆ ಸಂಪೂರ್ಣ ಹಾನಿಗೀಡಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಕೂಡಲೇ ಬಸವಕಲ್ಯಾಣ ಹಾಗೂ ಹುಲಸೂರ ಅತಿವೃಷ್ಟಿ ಪೀಡಿತ ತಾಲ್ಲೂಕುಗಳೆಂದು ಘೋಷಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಈ ಕುರಿತು ರೈತ ಮುಖಂಡ ಪ್ರಶಾಂತ ಲಕಮಾಜಿ ನೇತ್ರತ್ವದಲ್ಲಿ ಮಂಗಳವಾರ ಸುಮಾರು 10ಕ್ಕೂ ಹೆಚ್ಚು ರೈತರು ಬಸವಕಲ್ಯಾಣ ತಹಸೀಲ್ದಾರ್ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಕೋಹಿನೂರ ನಾಡಕಚೇರಿಯ ಉಪತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ʼಬಸವಕಲ್ಯಾಣ, ಹುಲಸೂರ ತಾಲ್ಲೂಕುಗಳಲ್ಲಿ ರೈತರು ಬೆಳೆದಿದ್ದ ಉದ್ದು, ಹೆಸರು, ತೊಗರಿ, ಸೋಯಾಅವರೆ ಹಾಗೂ ಇತರೆ ಬೆಳೆಗಳು ಅಪಾರ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಜಲಾವೃತಗೊಂಡು ಸಂಪೂರ್ಣ ಹಾನಿಯಾಗಿದೆ. ಲಕ್ಷಾಂತರ ರೂಪಾರಿ ವೆಚ್ಚ ಮಾಡಿದ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ರೈತರ ಹಿತದೃಷ್ಟಿಯಿಂದ ಸರ್ಕಾರ ಎರಡು ತಾಲ್ಲೂಕುಗಳಿಗೆ ಅತಿವೃಷ್ಟಿ ಘೋಷಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ʼರೈತರ ಸಾಲಮನ್ನಾ ಮಾಡಬೇಕು. ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು. ರೈತರ ಜಮೀನಿಗೆ ಸಿಂಗಲ್ ಫೇಸ್ ವಿದ್ಯುತ್ ಕೊಡಬೇಕು. 2024-25ನೇ ಹಾಗೂ ಪ್ರಸಕ್ತ ಸಾಲಿನ ರೈತರ ವಿಮೆ ಪರಿಶೀಲಿಸಿ ಶೀಘ್ರದಲ್ಲಿ ಹಣ ಪಾವತಿಸಬೇಕುʼ ಎಂದು ರೈತರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಚಂದ್ರಕಾಂತ ಚನ್ನಪ್ಪಾ, ವೀರಣ್ಣಾ ಮೂಲಗೆ, ಶರಣು ರಾಯಜೀ, ಸುನೀಲ ಪರಂಡೆ, ಅಶೋಕ ಮೆಣಕೋಜಿ, ಮಾರುತಿ ಜಮಾದರ, ರಮೇಶ ಪೂಜಾರಿ, ಶಿವಕುಮಾರ ಮುನಾಳೆ, ಚಂದ್ರಕಾಂತ ಸಂತಾಜಿ ಸೇರಿದಂತೆ ಮತ್ತಿತರರಿದ್ದರು.
ದಾಬಕಾ(ಸಿ) ಹೋಬಳಿ ಅತಿವೃಷ್ಟಿ ಪ್ರದೇಶ ಘೋಷಿಸಿ :
ಕಮಲನಗರ ತಾಲ್ಲೂಕಿನ ದಾಬಕಾ(ಸಿ) ಹೊಬಳಿ ವ್ಯಾಪ್ತಿಯ ದಾಬಕಾ(ಸಿ) ಮತ್ತು ಚಿಕಲಿ(ಯು) ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳನ್ನು ಅತಿವೃಷ್ಟಿ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಈ ಕುರಿತು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಕಮಲನಗರ ತಾಲ್ಲೂಕು ಗ್ರೇಡ್-2 ತಹಶೀಲ್ದಾರ್ ರಮೇಶ ಪೆದ್ದೆ ಅವರಿಗೆ ಸಲ್ಲಿಸಿದರು.

ಆಗಸ್ಟ್, ಸೆಪ್ಟೆಂಬರ್ ತಿಂಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ದಾಬಕಾ(ಸಿ) ಹೊಬಳಿಯಲ್ಲಿ ಅತಿವಷ್ಟಿ ಸೃಷ್ಟಿಯಾಗಿದೆ. ಇದರಿಂದ ದಾಬಕಾ(ಸಿ) ಮತ್ತು ಚಿಕಲಿ(ಯು) ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ರೈತರು ಬೆಳೆದಿದ್ದ ಉದ್ದು, ಹೆಸರು ಮತ್ತು ತೊಗರಿ, ಸೋಯಾ ಬೆಳೆಗಳು ಸಂಪೂರ್ಣ ಹಾನಿಗೀಡಾಗಿದೆ. ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ʼರೈತರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ದಾಬಕಾ(ಸಿ) ಹೊಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳನ್ನು ಅತಿವೃಷ್ಟಿ ಪೀಡಿತ ಪ್ರದೇಶಗಳೆಂದು ಘೋಷಿಸಿ ವಿಶೇಷ ಪರಿಹಾರ ನೀಡಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಗ್ರಾಮದ ಸಮಸ್ಯೆ ಹೇಳಿದ್ರೆ ಬೆದರಿಕೆ ಹಾಕಿದ ಸಿಂಧನಕೇರಾ ಪಿಡಿಒ; ಕ್ರಮಕ್ಕೆ ಆಗ್ರಹ
ರೈತ ಮುಖಂಡರಾದ ಅಂಕುಶ ವಾಡೀಕರ, ಸಂತೋಷ ಜಾಧವ, ಪ್ರದೀಪ ರಕ್ಷ್ಯಾಳೆ, ಪ್ರಭಾಕರ ಗಣಪತರಾವ, ಸುಗ್ರೀವ ಪ್ರಲ್ಹಾದರಾವ, ಮಾರುತಿ ಮಚಕುರೆ, ರಾಜು ಶೇಳಕೆ, ಸಂಜೀವ ಮುರ್ಕೆ, ರಾಜಕುಮಾರ ಬಿರಾದಾರ, ಕಿಶನ ಪಾಟೀಲ, ಧನರಾಜ ವಾಡೀಕರ್ ಇದ್ದರು.