ಬೀದರ್ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯಿಂದಲೇ 25 ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಇರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಪರೋಕ್ಷ ಪ್ರಯತ್ನ ನಡೆಯುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಆರೋಪಿಸಿದ್ದಾರೆ.
ʼಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ವೇಳೆ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದಿರುವುದು ಇದಕ್ಕೆ ನಿದರ್ಶನ. ಇದು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಿದೆ. ಈವರೆಗೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾಗಿದ್ದವರು ಶಾಲೆಗೆ ತೆರಳಲು ಕೌನ್ಸೆಲಿಂಗ್‍ನಲ್ಲಿ ಭಾಗವಹಿಸಿದರೆ 25ಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳ ಖಾಲಿ ಹುದ್ದೆಗಳು ಆನ್‍ಲೈನ್‍ನಲ್ಲಿ ತೋರಿಸುತ್ತಿಲ್ಲ. ಹೀಗಾಗಿ ಹೆಚ್ಚುವರಿ ಶಿಕ್ಷಕರು ಹಾಗೂ ಸಿಆರ್‌ಪಿಗಳು ಕೌನ್ಸೆಲಿಂಗ್‍ನಲ್ಲಿ ಸ್ಥಳ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆʼ ಎಂದು ತಿಳಿಸಿದ್ದಾರೆ.
ʼಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಪ್ರತಿ ವಿದ್ಯಾರ್ಥಿಗೂ ಆಯಾ ಗ್ರಾಮದಲ್ಲಿ ಶಾಲೆ ಇರಬೇಕು. ದೂರವಿದ್ದರೆ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂಬ ನಿಯಮವಿದೆ. ಆದರೆ, ಇಲಾಖೆಯು ಗಾಮ ಪಂಚಾಯಿತಿಗೊಂದು ಮ್ಯಾಗ್ನಿಫೈಡ್ ಶಾಲೆ, ಹೋಬಳಿಗೆ ಒಂದು ಕೆಪಿಎಸ್ ಶಾಲೆ, ತಾಲ್ಲೂಕಿಗೊಂದು ಪಿಎಂಶ್ರೀ ಶಾಲೆ ಹೆಸರಲ್ಲಿ ಸಣ್ಣ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆʼ ಎಂದು ಆಪಾದಿಸಿದ್ದಾರೆ.
ʼಶಾಲೆ ಮುಚ್ಚಿದರೆ ಕನ್ನಡ ಭಾಷೆಯ ಭವಿಷ್ಯಕ್ಕೆ ಕುತ್ತು ಬರಲಿದೆ. ಸರ್ಕಾರಿ ಶಾಲೆಗಳು ಕನ್ನಡ ಮಾಧ್ಯಮದ ಆಧಾರವಾಗಿವೆ. ಅವನ್ನೇ ಮುಚ್ಚುವ ಕಾರ್ಯ ಖಂಡನೀಯ. ಇದರ ವಿರುದ್ಧ ಎಲ್ಲ ಕನ್ನಡ ಪರ ಸಂಘಟನೆಗಳು ಧ್ವನಿ ಎತ್ತಬೇಕಿದೆ. ಶಾಲಾ ಶಿಕ್ಷಣ ಇಲಾಖೆಯು ವರ್ಗಾವಣೆ ಕೌನ್ಸೆಲಿಂಗ್ ಮುಂದೂಡಿದ್ದು, ಮರು ಕೌನ್ಸೆಲಿಂಗ್ ನಡೆಸುವ ಜಿಲ್ಲೆಯಲ್ಲಿ ಎಲ್ಲ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಆನ್‍ಲೈನ್‍ನಲ್ಲಿ ಪ್ರಕಟಿಸಿ, ವರ್ಗಾವಣೆಯಲ್ಲಿ ಶಿಕ್ಷಕರಿಗೆ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸಬೇಕುʼ ಎಂದು ಆಗ್ರಹಿಸಿದ್ದಾರೆ.
ʼಜಿಲ್ಲೆಯ ಅನೇಕ ಶಾಲೆಗಳಲ್ಲಿ 25ಕ್ಕಿಂತ ಹೆಚ್ಚು ಮಕ್ಕಳಿದ್ದರೂ ಒಬ್ಬರೂ ಕಾಯಂ ಶಿಕ್ಷಕರಿಲ್ಲ. ಗಡಿ ಭಾಗದ ಶಾಲೆಗಳು ಒಳಗೊಂಡಂತೆ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿಷಯಕ್ಕೊಬ್ಬರು ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣ ನೀಡುವುದು ಹಾಗೂ ಕನ್ನಡ ಶಾಲೆಗಳನ್ನು ಉಳಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆʼ ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ವಡ್ಡರ್ಸೆ ನೆನಪು; ಬೆಳೆ ನೀಡದೆ ಹೋಯಿತೆ ‘ಮುಂಗಾರು’?
ʼಯಾವ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚಬಾರದು. ಒಂದು ವೇಳೆ ಅಂತಹ ಕ್ರಮಕ್ಕೆ ಮುಂದಾದರೆ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಪರ ಹಾಗೂ ಶಿಕ್ಷಕರ ಸಂಘಟನೆಗಳೊಂದಿಗೆ ಬೀದಿಗಿಳಿದು ಹೋರಾಟ ನಡೆಸಲಿದೆʼ ಎಂದು ಚನ್ನಶೆಟ್ಟಿ ಎಚ್ಚರಿಸಿದ್ದಾರೆ