ಬೀದರ್ ಜಿಲ್ಲಾದ್ಯಂತ ಕಳೆದ ಮಂಗಳವಾರ ಆರಂಭವಾದ ಮಳೆ ಬುಧವಾರ ರಾತ್ರಿಯಿಡೀ ಸುರಿಯಿತು, ಗುರುವಾರ ಸಂಜೆ ತನಕ ಎಡೆ ಬಿಡದೆ ಮುಂದುವರೆದಿದೆ. ನಿರಂತರ ಮಳೆಯಿಂದ ಜಿಲ್ಲೆಯ ನದಿ, ಕೆರೆ, ಕಟ್ಟೆಗಳು ಮೈದುಂಬಿ ಹರಿಯುತ್ತಿದ್ದು, ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಭಾರಿ ಅವಾಂತರಗಳು ಸೃಷ್ಟಿಯಾಗಿದೆ.
ವರುಣನ ಆರ್ಭಟದಿಂದ ಕಾರಂಜಾ ಜಲಾಶಯ, ಮಾಂಜ್ರಾ ನದಿ ಸೇರಿದಂತೆ ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿದ್ದು, ನೀರಿನ ಹರಿವು ಹೆಚ್ಚಳದಿಂದ ನದಿ, ಕೆರೆ ದಂಡೆಯ ಜಮೀನುಗಳು ಸಂಪೂರ್ಣ ಮುಳುಗಡೆ ಆಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನದಿ, ಕೆರೆಗಳ ಪಾತ್ರದ ಜನರಿಗೆ ಪ್ರವಾಹದ ಕುರಿತು ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.

ಭಾರಿ ಮಳೆಯಿಂದಾಗಿ ಜಿಲ್ಲೆಯ ನಾನಾ ಕಡೆ ಸೇತುವೆ, ರಸ್ತೆಗಳು ಜಲಾವೃತವಾಗಿ, ರಸ್ತೆ ಸಂಪರ್ಕ ಕಡಿತಗೊಂಡಿದೆ. ಬೀದರ್ ತಾಲೂಕಿನ ಗುಮ್ಮಾ , ಔರಾದ್ ತಾಲೂಕಿನ ಯನಗುಂದಾ, ಏಕಂಬಾ, ಭಾಲ್ಕಿ ತಾಲೂಕಿ ದಾಡಗಿ, ಕಮಲನಗರ ತಾಲೂಕಿನ ಕೋರಿಯಾಳ-ಬಸನಾಳ ಮಧ್ಯೆದ ಸೇತುವೆ ಮೇಲೆ ನೀರು ಹರಿದು ಸಂಪರ್ಕ ಕಡಿತವಾಯಿತು. ಇದರಿಂದ ವಾಹನ ಸವಾರರು ಸಮಸ್ಯೆ ಎದುರಿಸಿದರು. ಇನ್ನು ಭಾರಿ ಮಳೆಗೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾದರೆ, ಕೆಲವೆಡೆ ಮನೆ, ಓಣಿಗಳಿಗೆ ನೀರು ನುಗ್ಗಿದೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಈಶ್ವರ ಖಂಡ್ರೆ, ಜಿಲ್ಲಾಧಿಕಾರಿ ಭೇಟಿ :
ಬೀದರ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡ ಹಿನ್ನೆಲೆ ಗುರುವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು.
ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ), ಸಿಂದಬಂದಗಿ , ಭಾಲ್ಕಿ ತಾಲೂಕಿನ ಗೋಧಿ ಹಿಪ್ಪರಗಾ, ಕಾರಂಜಾ ಜಲಾಶಯ, ಕಮಲನಗರ ತಾಲೂಕಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿ, ಜನರಿಂದ ಮಾಹಿತಿ ಕಲೆ ಹಾಕಿದರು.

ಕಾರಂಜಾ ಜಲಾಶಯದ ನೀರಿನ ಮಟ್ಟ ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಬಳಿಕ ಸಿಂದಬಂದಗಿ ಗ್ರಾಮದ ಪ್ರಾಥಮಿಕ ಶಾಲೆಗೆ ನೀರು ನುಗ್ಗಿರುವುದನ್ನು ಭೇಟಿ ನೀಡಿ, ತಕ್ಷಣ ಮಳೆ ನೀರು ಹೊರಹಾಕಲು ವ್ಯವಸ್ಥೆ ಮಾಡುವಂತೆ ಗ್ರಾಮದ ಪಿಡಿಒ ಅವರಿಗೆ ಸೂಚಿಸಿದರು.
ತದನಂತರ ಹಳ್ಳಿಖೇಡ (ಬಿ) ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ತುರ್ತು ಚಿಕಿತ್ಸಾ ಘಟಕ ಮತ್ತು ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಗೋಧಿ ಹಿಪ್ಪರಗಾ ಗ್ರಾಮದ ಹೊಲಗಳಲ್ಲಿ ನೀರು ನಿಂತು ಬೆಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು, ಹಳ್ಳ, ಕೆರೆಗಳನ್ನು ದಾಟದಂತೆ ಹಾಗೂ ಜಾನುವಾರುಗಳನ್ನು ಹಳ್ಳದ ತಟಕ್ಕೆ ಬಿಡದಂತೆ ಗ್ರಾಮಸ್ಥರಿಗೆ ತಿಳಿಸಿದರು.
ತುರ್ತು ಕ್ರಮ ಕೈಗೊಳ್ಳಲು ಸಚಿವ ಈಶ್ವರ ಖಂಡ್ರೆ ಸೂಚನೆ :
ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಗುವ ಅನಾಹುತಗಳನ್ನು ತಪ್ಪಿಸಲು ತಕ್ಷಣ ತುರ್ತು ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ʼಅತಿವೃಷ್ಟಿ ನಿರ್ವಹಿಸುವ ದೃಷ್ಟಿಯಿಂದ ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯ ನಿರ್ವಹಿಸಲು ಮತ್ತು ಅನಿವಾರ್ಯ ಸಂದರ್ಭ ಹೊರತುಪಡಿಸಿ ರಜೆ ತೆಗೆದುಕೊಳ್ಳದಿರಲು ಸೂಚಿಸಿ, ಪ್ರವಾಹ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಕಾರ್ಯ ಸನ್ನದಗೊಳಿಸಿ, ವಿಳಂಬಕ್ಕೆ ಅವಕಾಶ ಮಾಡದೆ ಪರಿಹಾರ ಕ್ರಮ ಕೈಗೊಳ್ಳಬೇಕುʼ ಎಂದು ನಿರ್ದೇಶನ ನೀಡಿದ್ದಾರೆ.
ಅತಿವೃಷ್ಟಿ ಪ್ರದೇಶಗಳಿಗೆ ಸಂಬಂಧಪಟ್ಟ ಉಪ ವಿಭಾಗಾಧಿಕಾರಿ ಕಡ್ಡಾಯವಾಗಿ ಭೇಟಿ ನೀಡಬೇಕು. ಹೆಚ್ಚು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಬಂಧಿಸಿದ ಇಲಾಖೆಗಳನ್ನೊಗೊಂಡ ತಂಡವು ಖುದ್ದು ಮೊಕ್ಕಾಂ ಹುಡುವುದು, ಹವಾಮಾನ ಇಲಾಖೆ ಮುನ್ಸೂಚನೆ, ಮಳೆ ದತ್ತಾಂಶನ್ನಾಧರಿಸಿ, ಪ್ರವಾಹ ಉಂಟಾಗಬಹುದಾದ ಪ್ರದೇಶಗಳಲ್ಲಿ ಸಂಬಂಧಿಸಿದ ಇಲಾಖೆಗಳಿಂದ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಜಾರಿಗೊಳಿಸಲು ಅವರು ಸೂಚಿಸಿದ್ದಾರೆ.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಚಿಟ್ಟಾ ರಸ್ತೆಗೆ ಭೇಟಿ, ಪರಿಶೀಲನೆ
ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಬೀದರ್ ತಾಲೂಕಿನ ಚಿಟ್ಟಾ ರಸ್ತೆ ಮಳೆಯಿಂದ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಶಾಸಕರು, ʼಈಗಾಗಲೇ ಗುಂಪಾ ರಸ್ತೆಯಿಂದ 5 ಕೋಟಿ ರೂ. ವೆಚ್ಚದ ರಸ್ತೆ ಹಾಗೂ 1 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿ ಚಾಲನೆ ನೀಡಲಾಗಿದೆ, ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನುಳಿದ ರಸ್ತೆ ನಿರ್ಮಾಣಕ್ಕಾಗಿ 9 ಕೋಟಿ ಅವಶ್ಯಕತೆ ಇರುವ ಕಾರಣ ಸಂಬಂಧಪಟ್ಟ ಇಲಾಖೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಅನುದಾನ ಬಿಡುಗಡೆ ಮಾಡಿದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದುʼ ಎಂದು ತಿಳಿಸಿದರು.

ಮಳೆ ಅವಾಂತರ : ಅಧಿಕಾರಿಗಳ ರೌಂಡಿಂಗ್
ಮಳೆಯಿಂದ ಜಿಲ್ಲೆಯ ನಾನಾ ಕಡೆ ಅವಾಂತರ ಸೃಷ್ಟಿಯಾಗಿದೆ, ಕೆಲವೆಡೆ ಸೇತುವೆ, ರಸ್ತೆಗಳು ಮುಳುಗಡೆಯಾದರೆ, ಮನೆ ಗೋಡೆ ಕುಸಿದು ಹಾನಿಯಾಗಿದೆ. ಇನ್ನು ಕೆಲವೆಡೆ ಕೆರೆ ನೀರಿನ ಹರಿವು ಹೆಚ್ಚಳದಿಂದ ಅಪಾಯ ಸಂಭವಿಸಬಹುದು ಎಂಬ ಭೀತಿ ಗ್ರಾಮಸ್ಥರಿಗೆ ಕಾಡುತ್ತಿದೆ.
ಮಳೆಗೆ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿರುವ ಸ್ಥಳಕ್ಕೆ, ಬ್ರಿಡ್ಜ್ ಕಂ ಬ್ಯಾರೇಜ್, ಆಣೆಕಟ್ಟು ಸೇರಿದಂತೆ ವಿವಿಧ ಕಡೆ ಬಸವಕಲ್ಯಾಣ ಹಾಗೂ ಬೀದರ್ ಉಪವಿಭಾಗದ ಅಧಿಕಾರಿಗಳು, ತಹಸೀಲ್ದಾರ್, ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ವೀಕ್ಷಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡು, ಜನರಿಗೆ ಪ್ರವಾಹ ಪರಿಸ್ಥಿತಿ ಕುರಿತು ಎಚ್ಚರಿಕೆ ನೀಡಿದರು.
ಆಗಸ್ಟ್ ತಿಂಗಳ ಮಳೆಗೆ 12 ಸಾವಿರ ಹೆಕ್ಟೇರ್ ಬೆಳೆ ಹಾನಿ :
ಜಿಲ್ಲೆಯಾದ್ಯಂತ ಆಗಸ್ಟ್ ಮೊದಲ ಎರಡ್ಮೂರು ವಾರದಲ್ಲಿ ಸುರಿದ ವ್ಯಾಪಕ ಮಳೆಯಿಂದ ಜಿಲ್ಲೆಯಲ್ಲಿ ಬೆಳೆಯಲಾದ ವಿವಿಧ 12,442 ಹೆಕ್ಟೇರ್ ಬೆಳೆ ಹಾನಿಗಿದೆ ಎಂದು ಸಮೀಕ್ಷೆಯ ಅಂಕಿ-ಅಂಶಗಳಿಂದ ತಿಳಿದು ಬಂದಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಜಿಲ್ಲೆಯ ವಿವಿಧ ತಾಲೂಕಿನ ಹೆಸರು (2,125), ಉದ್ದು (1,043), ತೊಗರಿ (3,348), ಸೋಯಾಬಿನ್ (5,866) ಹಾಗೂ ಹತ್ತಿ (60) ಹೆಕ್ಟೇರ್ ಪ್ರದೇಶ ಮಳೆಗೆ ಹಾನಿಯಾಗಿದೆ. ಅತಿ ಹೆಚ್ಚು ಔರಾದ್, ಕಮಲನಗರ ತಾಲೂಕಿನಲ್ಲಿಯೇ ಆದ ಹಿನ್ನೆಲೆ ಬೆಳೆಯೂ ಈ ಅವಳಿ ತಾಲೂಕಿನಲ್ಲಿ 9,762 ಹೆಕ್ಟೇರ್‌ನಷ್ಟು ಹಾನಿಯಾಗಿದೆ. ಭಾಲ್ಕಿಯಲ್ಲಿ ಒಂದು ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ.
ವ್ಯಾಪಕ ಮಳೆ : ಶಾಲಾ-ಕಾಲೇಜು ರಜೆ
ಜಿಲ್ಲಾದ್ಯಂತ ವ್ಯಾಪಕವಾಗಿ ಸುರಿಯತ್ತಿರುವ ಮಳೆ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲಾ ಎಲ್ಲಾ ತಾಲೂಕಿನಲ್ಲಿ ತಹಸೀಲ್ದಾರ್ ಅವರು ಅಂಗನವಾಡಿ ಸೇರಿದಂತೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದರು. ಕೆಲ ತಾಲೂಕಿನಲ್ಲಿ ಬೆಳಿಗ್ಗೆ 9-10 ಗಂಟೆಗೆ ಆದೇಶ ಹೊರಡಿಸಿದ ಕಾರಣ ಎಂದಿನಂತೆ ಶಾಲಾ-ಕಾಲೇಜುಗಳಿಗೆ ತೆರಳಿದ ವಿದ್ಯಾರ್ಥಿಗಳು, ಶಿಕ್ಷಕರು ವಾಪಸ್ ಮನೆಗೆ ಹೋಗಲು ಮಳೆಯಲ್ಲಿ ಪರದಾಡಿದರು.
ಮಳೆ…ಮಳೆ…ಮಳೆ…ಹರಿಯಿತು ಹೊಳೆ….ನೆಲಕಚ್ಚಿದ ಬೆಳೆ







