ʼಪ್ರಸಕ್ತ ಸಾಲಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜಿಲ್ಲಾದ್ಯಂತ ಕಳೆದ 7 ದಿನಗಳಲ್ಲಿ 122 ಮೀ.ಮೀ ಮಳೆಯಾಗಿದ್ದು, ಶೇ 199ರಷ್ಟು ಹೆಚ್ಚುವರಿ ಮಳೆಯಾಗಿದೆʼ ಎಂದು ಜಿಲ್ಲಾಡಳಿತ ತಿಳಿಸಿದೆ.
ನೆರೆಯ ಮಾಹಾರಾಷ್ಟ್ರದಲ್ಲಿ ಹೆಚ್ಚುವರಿ ಮಳೆಯಾಗಿ ಧನೆಗಾಂವ್ ಜಲಾಶಯದಿಂದ ಹೆಚ್ಚುವರಿಯಾಗಿ ಮಾಂಜ್ರಾ ನದಿಗೆ ನೀರು ಹರಿಸುತ್ತಿರುವುದರಿಂದ ಜಿಲ್ಲಾದ್ಯಂತ ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ಭಾನುವಾರ ಪ್ರಕಟಣೆಯಲ್ಲಿ ಜಿಲ್ಲಾಡಳಿತ ಮಾಹಿತಿ ನೀಡಿದೆ.
157 ಮನೆ, 94,272 ಹೆಕ್ಟೇರ್ ಬೆಳೆ ಹಾನಿ :
ಸೆಪ್ಟೆಂಬರ್ ತಿಂಗಳ ಕಳೆದ ಮೂರು ದಿನಗಳಲ್ಲಿ 8 ಜಾನುವಾರು ಸಾವನ್ನಪ್ಪಿದರೆ, 157 ಮನೆ ಹಾನಿಯಾಗಿದ್ದು, 100 ಮನೆಗಳಲ್ಲಿ ನೀರು ನುಗ್ಗಿ ದವಸ ಧಾನ್ಯಗಳು ಮತ್ತು ದಿನಬಳಕೆ ವಸ್ತುಗಳಿಗೆ ಹಾನಿಯಾಗಿದೆ. ಇಲ್ಲಿಯವರೆಗೆ ಮಾನವ ಜೀವ ಹಾನಿ ಸಂಭವಿಸಿರುವುದಿಲ್ಲ. ಸಮೀಕ್ಷೆ ಪ್ರಗತಿಯಲ್ಲಿದೆ ಎಂದು ತಿಳಿಸಿದೆ.
ಆಗಸ್ಟ್ ತಿಂಗಳ ಅಂತ್ಯಕ್ಕೆ 94272.47 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈಗಾಗಲೇ ಬೆಳೆ ಹಾನಿಯಾಗಿರುವ ಜಂಟಿ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿ ಮೊದಲನೇ ಹಂತದ ಬೆಳೆ ಹಾನಿ ಜಂಟಿ ಸಮೀಕ್ಷೆ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರೈತರ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ಅಳವಡಿಸಲು ಪರಿಹಾರ ತಂತ್ರಾಂಶ (Portal) ಓಪನ್ ಮಾಡಲು ಅನುಮತಿ ಕೋರಲಾಗಿ, ರೈತರ ವಿವರ ಪರಿಹಾರ ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇತ್ತಿಚ್ಚಿನ ಮಳೆಯಿಂದ ಬೆಳೆ ಹಾನಿಯಾಗಿರುವ ಸಮೀಕ್ಷೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದೆ.

ಕಳೆದ ಮೂರು ದಿನಗಳಲ್ಲಿ ಭಾರಿ ಮಳೆಯಿಂದಾಗಿ ಜಿಲ್ಲಾದ್ಯಂತ ಒಟ್ಟು 27 ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತವಾಗಿದೆ. ಬೀದರ-1, ಕಮಲನಗರ-1, ಭಾಲ್ಕಿ-16, ಬಸವಕಲ್ಯಾಣ-3, ಹುಮನಾಬಾದ-3, ಚಿಟಗುಪ್ಪಾ-1 ಹಾಗೂ ಹುಲಸೂರ-1 ರಸ್ತೆ ಸಂರ್ಪಕ ಸ್ಥಗಿತವಾಗಿದೆ. ಜಿಲ್ಲಾದ್ಯಂತ 179 ಕಿ.ಮೀ ರಸ್ತೆ, 121 ಸೇತುವೆ, 420 ಶಾಲಾ ಕೊಠಡಿಗಳು, 246 ವಿದ್ಯುತ್ ಕಂಬ, 36 ಟ್ರಾನ್ಸ್ ಫಾರ್ಮರ್‌ಗಳು ಮತ್ತು 30.68 ಕಿ.ಮೀ ವಿದ್ಯುತ ತಂತಿ, 24 ಸಣ್ಣ ನೀರಾವರಿ ಇಲಾಖೆ ಕೆರೆಗಳಿಗೆ ಹಾನಿಯಾಗಿವೆ. 241 ಅಂಗನವಾಡಿ ಕಟ್ಟಡ ಹಾನಿಯಾಗಿದ್ದು, ಸಮೀಕ್ಷೆ ಪ್ರಗತಿಯಲ್ಲಿದೆ. 17 ಕುಡಿಯುವ ನೀರಿನ ಯೋಜನೆ, 24 ಪ್ರಾಥಮಿಕ/ಸಮುದಾಯ ಆರೋಗ್ಯ ಕೇಂದ್ರಗಳಿಗೆ ಹಾನಿಯಾಗಿದೆ ಎಂದು ವಿವರಿಸಿದೆ.
2 ಕಡೆ ಕಾಳಜಿ ಕೇಂದ್ರ :
ಹುಮನಾಬಾದ ತಾಲ್ಲೂಕಿನ ಘಾಟಬೋರಾಳ ಗ್ರಾಮದ 12 ಮನೆಗಳಲ್ಲಿ ನೀರು ನುಗ್ಗಿರುವುದರಿಂದ ಕಿತ್ತೂರು ರಾಣಿ ಚನ್ನಮ್ಮಾ ವಸತಿ ನಿಲಯದಲ್ಲಿ ಮತ್ತು ಚಿಟ್ಟಗುಪ್ಪಾ ತಾಲ್ಲೂಕಿನ ಬೆಳಕೇರಾ ಗ್ರಾಮದ 8 ಮನೆಗಳಲ್ಲಿ ನೀರು ನುಗ್ಗಿರುವುದರಿಂದ ಅದೇ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಸದರಿ ಕಾಳಜಿ ಕೇಂದ್ರಗಳಲ್ಲಿ ಒಟ್ಟು 266 ಗ್ರಾಮಸ್ಥರನ್ನು ಇರಿಸಲಾಗಿದೆ. 126 ಪುರುಷರು, 84 ಮಹಿಳೆಯರು ಹಾಗೂ 56 ಮಕ್ಕಳಿದ್ದಾರೆ ಎಂದು ಮಾಹಿತಿ ನೀಡಿದೆ.
ಜಲಾವೃತ ಸೇತುವೆ, ಬೆಳೆಹಾನಿ ವೀಕ್ಷಿಸಿದ ಸಿಇಒ
ಭಾಲ್ಕಿ ತಾಲೂಕಿನ ವಿವಿಧೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಭೇಟಿ ನೀಡಿ ಪರಿಶೀಲಿಸಿದರು.

ಗಡಿಭಾಗದ ಲಂಜವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಕನಾಳ ಸೇರಿದಂತೆ ಮುಂತಾದ ಕಡೆಗಳಿಗೆ ಭೇಟಿ ನೀಡಿದ ಅವರು ಸೋಯಾ ಅವರೆ, ತೊಗರಿ ಸೇರಿ ಮತ್ತಿತರ ಬೆಳೆಹಾನಿ ವೀಕ್ಷಿಸಿ ರೈತರ ಸಂಕಷ್ಟ ಆಲಿಸಿದರು. ಬಳಿಕ ಜಲಾವೃತಗೊಂಡ ಲಖಣಗಾಂವ ಮತ್ತು ಇಂಚೂರ ಸೇತುವೆಗೆ ಭೇಟಿ ನೀಡಿ ಸೇತುವೆ ಮೇಲಿಂದ ನೀರು ಹರಿಯುತ್ತಿರುವುದನ್ನು ವೀಕ್ಷಿಸಿದರು.
ಇದನ್ನೂ ಓದಿ : ಬೀದರ್ | ʼರೈತರʼ ನೋವ ನೋಯದವರೆತ್ತ ಬಲ್ಲರೊ?
ಭಾಲ್ಕಿ ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ಲೋಕೊಪಯೋಗಿ ಇಲಾಖೆಯ ಎಇಇ ಅಲ್ತಾಫ್, ಪಿಡಿಒ ಬಲಭೀಮ ಮತ್ತಿತರರಿದ್ದರು.