ಯುವ ಲೇಖಕರು ತಮ್ಮ ಪ್ರತಿಭೆ ಬಳಸಿಕೊಂಡು ಆಸಕ್ತಿಯ ಸೃಜನಶೀಲ ಸಾಹಿತ್ಯ ರಚನೆಗೆ ಮುಂದಾಗಬೇಕು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಕಮಲನಗರ ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆಯಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಸಾಹಿತಿ ಸಂಗಮೇಶ್ವರ ಮುರ್ಕೆ ಬರೆದ ʼಬೀದರ ಜಿಲ್ಲೆಯ ಸಂಸ್ಕೃತಿ ಪರಂಪರೆʼ ಕೃತಿ ಲೋಕಾರ್ಪಣೆ, ಪತ್ರಿಕಾ ಹಾಗೂ ವೈದ್ಯ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ʼಯುವ ಸಾಹಿತಿಗಳು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರೆ ಸಾಹಿತ್ಯ ಕ್ಷೇತ್ರ ಸಮೃದ್ಧವಾಗಿ ಬೆಳೆಯಲು ಸಾಧ್ಯ. ಬರಹಗಾರರು ಮಾನವೀಯ ಕಳಕಳಿಯೊಂದಿಗೆ ಸೂಕ್ಷ್ಮ ಸಂವೇದನಾಶೀಲರಾಗಿ ಸಾಹಿತ್ಯ ರಚಿಸಿ ವರ್ತಮಾನದ ವಾರಸುದಾರರಿಗೆ ಮಾರ್ಗದರ್ಶನ ಮಾಡುವಂತಾಗಬೇಕು. ಎಲ್ಲ ಕೃತಿಗಳ ಆಶಯ ಸತ್ಯದ ಅನ್ವೇಷಣೆಯಾದರೆ ಮಾತ್ರ ವೈಚಾರಿಕ, ಸಾಮಾಜಿಕ ಮೌಲ್ಯಗಳ ಚಿಂತನೆ ಬೆಳೆಸಲು ಸಾಧ್ಯ. ಉತ್ತಮ ಸಾಹಿತ್ಯ ಕೃತಿ ರಚನೆಗೆ ಅನುಭವ ಬೇಕು. ಲೇಖಕರು ಗಟ್ಟಿ ಸಾಹಿತ್ಯ ರಚನೆಗೆ ಹೆಚ್ಚು ಒತ್ತು ನೀಡಬೇಕುʼ ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಇಒ ಹಣಮಂತರಾಯ ಕೌಟಗೆ ಮಾತನಾಡಿ, ʼಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಮಾಧ್ಯಮ ರಂಗ ಅಗತ್ಯ. ಸಮಾಜದ ಪರಿಶುದ್ಧತೆಯಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ. ಸಕರಾತ್ಮಕ ವಿಚಾರಗಳಿಗೆ ಪ್ರಾಮುಖ್ಯ ನೀಡುತ್ತಿರುವ ಪತ್ರಿಕೆಗಳಿಂದ ಸಶಕ್ತ ಭಾರತ ನಿರ್ಮಾಣ ಸಾಧ್ಯʼ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ʼಗಡಿ ಭಾಗದಲ್ಲಿ ಕನ್ನಡ ನಾಡು-ನುಡಿ ಬೆಳವಣಿಗೆಗೆ
ಪತ್ರಕರ್ತರ ಸೇವೆ ಅನನ್ಯ. ಚನ್ನಬಸವ ಪಟ್ಟದ್ದೇವರು ಜನಿಸಿದ ನೆಲ ಕಮಲನಗರದಲ್ಲಿ ಕಸಾಪ ತಾಲೂಕು ಘಟಕ
ಕೈಗೊಳ್ಳುತ್ತಿರುವ ವಿವಿಧ ರಚನಾತ್ಮಕ ಕಾರ್ಯಗಳು ಇತರರಿಗೆ ಮಾದರಿಯಾಗಿದೆʼ ಎಂದರು.
ʼಸರ್ಕಾರ ಹಾಗೂ ಸಮಾಜದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಜನರ ಧ್ವನಿಯನ್ನು ಆಡಳಿತ ವರ್ಗಕ್ಕೆ ಹಾಗೂ ಜನಪ್ರತಿನಿಧಿಗಳ ಕಿವಿಗೆ ತಲುಪಿಸುವ ಸಂದೇಶ ವಾಹಕ ಕೆಲಸ ಮಾಡುತ್ತಿದೆ. ಕೋವಿಡ್ ಸಂದಿಗ್ಧ ಸ್ಥಿತಿಯಲ್ಲಿ ಪತ್ರಕರ್ತರು ಹಾಗೂ ವೈದ್ಯರು, ಪೊಲೀಸರ ಜತೆಗೆ ಕೋವಿಡ್ ವಾರಿಯರ್ಸ್ ಗಳಾಗಿ ಪ್ರಾಣದ ಹಂಗು ತೊರೆದು ಕಾರ್ಯನಿರ್ವಹಿಸಿದ್ದು ಮರೆಯಲಾಗದುʼ ಎಂದು ತಿಳಿಸಿದರು.
ಹಿರಿಯ ಪತ್ರಕರ್ತರ ಡಾ.ಎಸ್.ಎಸ್.ಮೈನಾಳೆ ಕೃತಿ ಪರಿಚಯ ಮಾಡಿಕೊಟ್ಟರು. ಸಿಪಿಐ ಶ್ರೀಕಾಂತ ಅಲ್ಲಾಪುರ, ಸಾಹಿತಿ ಸಂಗಮೇಶ್ವರ ಮುರ್ಕೆ ಮಾತನಾಡಿದರು. ಮಹಾಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಕಮಲನಗರ ತಾಲೂಕಿನ ಪತ್ರಕರ್ತರು ಹಾಗೂ ವೈದ್ಯರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಇದನ್ನೂ ಓದಿ : ಬೀದರ್ | ಮಕ್ಕಳ ನಾಪತ್ತೆ, ಅಪಹರಣ ಪ್ರಕರಣಗಳನ್ನು ನಿರ್ಲಕ್ಷಿಸಬೇಡಿ: ಎಸ್ಪಿ ಪ್ರದೀಪ ಗುಂಟಿ
ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುನೀಲ ಕಸ್ತೂರೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ್, ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಮಂತ ಮಡಿವಾಳ ಸೇರಿದಂತೆ ಪ್ರಮುಖರಾದ ಶಿವಶಂಕರ ಟೋಕರೆ, ಪಂಡರಿ ಆಡೆ, ಡಾ.ಅಶೋಕುಮಾರ ಮಳಗೆ, ಚನ್ನಬಸವ ಘಾಳೆ, ಸತೀಶ ಜೀರ್ಗೆ, ಧನರಾಜ ಸೊಲ್ಲಾಪುರೆ, ನಾಗಯ್ಯ ಸ್ವಾಮಿ, ಶಿವಾನಂದ ವಡ್ಡೆ, ಅನೀಲಕುಮಾರ ದೇಶಮುಖ, ಜಗನ್ನಾಥ ಜೀರ್ಗೆ, ಧನರಾಜ ಭವರಾ, ಉಮೇಶ ಜೀರ್ಗೆ, ಸಂತೋಷ ಸುಲಾಕೆ, ಅವಿನಾಶ ಶಿವಣಕರ, ರಾಜಕುಮಾರ ಬಿರಾದಾರ, ಬಾಲಾಜಿ ಬಿರಾದಾರ ಇತರರಿದ್ದರು. ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಸ್ವಾಗತಿಸಿದರು. ಹಾವಗಿರಾವ ಮಠಪತಿ ನಿರೂಪಣೆ ಮಾಡಿದರು.