ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22 ರಿಂದ ಅ.7ರವರೆಗೆ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಬೀದರ್ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಭಾನುವಾರ ಭಾಲ್ಕಿಯಲ್ಲಿ ಚಾಲನೆ ನೀಡಿದರು.
ಬಳಿಕ ಸಚಿವರು ಮಾತನಾಡಿ, ʼರಾಜ್ಯದ 7 ಕೋಟಿಗೂ ಅಧಿಕ ಇರುವ ಜನರಿಗೆ ಸಾಮಾಜಿಕ ನ್ಯಾಯ ಸಿಗಬೇಕು. ಸಮಾಜದಲ್ಲಿರುವ ಯಾರೊಬ್ಬರೂ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಘನ ಉದ್ದೇಶದಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿ, ನಿರ್ಗತಿಕರಿಗೂ ಸರ್ಕಾರಿ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಈ ಸಮೀಕ್ಷೆ ನಡೆಸಲಾಗುತ್ತಿದೆʼ ಎಂದರು.
ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಬಗ್ಗೆ 60 ಪ್ರಶ್ನೆಗಳ ಮುಖಾಂತರ ಸಮಗ್ರವಾಗಿ ವರದಿಯನ್ನು ಪಡೆದು, ಆ ವರದಿ ಆಧಾರದ ಮೇಲೆ ಸರ್ಕಾರದ ಮಟ್ಟದಲ್ಲಿ ಅವರಿಗೆ ಯಾವ ಸೌಲಭ್ಯ ಒದಗಿಸಬೇಕೆಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಿ ಸಮ ಸಮಾಜ ನಿರ್ಮಿಸುವ ಉದ್ದೇಶ ನಮ್ಮ ಸರ್ಕಾರದ್ದಾಗಿದೆʼ ಎಂದು ತಿಳಿಸಿದರು.

ʼಈ ಸಮೀಕ್ಷೆ ರಾಜ್ಯದ ಸಮಗ್ರ ಅಭಿವೃದ್ಧಿ, ಉತ್ತಮ ಯೋಜನೆ ರೂಪಣೆ ಹಾಗೂ ಜನಜೀವನ ಸುಧಾರಣೆಗೆ ಪ್ರಮುಖ ಆಧಾರವಾಗಲಿದೆ. ಆದ್ದರಿಂದ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರೂ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಿಖರ ಹಾಗೂ ಸತ್ಯ ಮಾಹಿತಿಯನ್ನು ನೀಡಬೇಕುʼ ಎಂದು ಸಚಿವ ಈಶ್ವರ ಖಂಡ್ರೆ ಅವರು ಮನವಿ ಮಾಡಿದರು.
ಇದನ್ನೂ ಓದಿ : ಬೀದರ್ | ಚೆಂಡು ಹೂವು ಕೃಷಿಯಲ್ಲಿ ಖುಷಿ ಕಂಡ ಬಿಎಸ್ಸಿ ಪದವೀಧರ