ಬೀದರ್ ನಗರದ ಖಾಸಗಿ ಶಾಲೆಯೊಂದರಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಜುಲೈ 24ರಂದು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಯಾವುದೇ ಕುರುಹು ಕಂಡಿಬಂದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಸ್ಪಷ್ಟನೆ ನೀಡಿದ್ದಾರೆ.
ʼಬಾಲಕಿಗೆ ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವೈದ್ಯಾಧಿಕಾರಿಗಳು ಕುಲಂಕುಶವಾಗಿ ವೈದ್ಯಕೀಯ ತಪಾಸಣೆ ನಡೆಸಿ ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ರೀತಿಯ ಪುರಾವೆ ಕಂಡು ಬಂದಿಲ್ಲ ಎಂದು ವರದಿ ನೀಡಿದ್ದಾರೆ. ಮಗುವಿಗೆ ಆದ ಗಾಯಗಳು ಆಕಸ್ಮಿಕವಾಗಿ ಯಾವುದೋ ವಸ್ತು ಚುಚ್ಚಿದ್ದರಿಂದ ಕೇವಲ ಮೇಲ್ಭಾಗದಲ್ಲಿ ಗಾಯವಾಗಿದೆ ಎಂದು ಪ್ರಾಥಮಿಕ ಅಭಿಪ್ರಾಯ ನೀಡಿದ್ದಾರೆʼ ಎಂದು ತಿಳಿಸಿದ್ದಾರೆ.
ʼಮಗುವಿಗೆ ಮತ್ತು ಮಗುವಿನ ಪಾಲಕರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಮಕ್ಕಳ ರಕ್ಷಣಾ ಘಟಕದಲ್ಲಿ ಆಪ್ತ ಸಮಾಲೋಚನೆ ನಡೆಸಿದ್ದು, ಮಗುವಿನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದ ಕುರುಹುಗಳು ಕಂಡುಬಂದಿಲ್ಲ ಎಂಬುದರ ಬಗ್ಗೆ ತನಿಖೆಯ ಎಲ್ಲ ಹಂತವನ್ನು ಮಗುವಿನ ಪೋಷಕರಿಗೆ ಕಡ್ಡಾಯವಾಗಿ ತಿಳಿಸಲಾಗುತ್ತಿದೆ. ಇನ್ನು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರೆದಿದೆʼ ಎಂದಿದ್ದಾರೆ.
ಪ್ರಕರಣದ ಸೂಕ್ಷ್ಮತೆ ಮತ್ತು ಮಗುವಿನ ಭವಿಷ್ಯದ ದೃಷ್ಟಿಯಿಂದ ಸಾರ್ವಜನಿಕರು ಮತ್ತು ಪತ್ರಕರ್ತರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಎಸ್ಪಿ ಪ್ರದೀಪ ಗುಂಟಿ ಅವರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೀದರ್ | ನಾಳೆ ʼರಮಾಬಾಯಿ ಅಂಬೇಡ್ಕರ್ʼ ನಾಟಕ ಪ್ರದರ್ಶನ : ಡಾ.ಸುಜಾತಾ ಜಂಗಮಶೆಟ್ಟಿ