ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಅತ್ಯಂತ ಪ್ರತಿಭಾವಂತರಾಗಿದ್ದು, ಬದುಕಿನಲ್ಲಿ ಯಶಸ್ಸಿನ ಕಡೆಗೆ ತಮ್ಮ ಅವಿರತ ಪ್ರಯತ್ನವಿರಲಿ ಎಂದು ಸಾಮಾಜಿಕ ಕಾರ್ಯಕರ್ತ ವಿನೋದ ರತ್ನಾಕರ್ ಹೇಳಿದರು.
ಬೆಂಗಳೂರಿನ ಅವಿರತ ಟ್ರಸ್ಟ್ ವತಿಯಿಂದ ಬೀದರ್ ತಾಲ್ಲೂಕಿನ ಕಬೀರಾಬಾದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶನಿವಾರ ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ʼನೈತಿಕ ಮೌಲ್ಯ ಶಿಕ್ಷಣ ಜೊತೆಗೆ ಮಕ್ಕಳಲ್ಲಿ ಸಂಸ್ಕಾರ ಶಿಕ್ಷಣ ಬೀಜ ಬಿತ್ತುವುದು ಮುಖ್ಯವಾಗಿದೆʼ ಎಂದು ತಿಳಿಸಿದರು.
ʼಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಸರ್ಕಾರದಿಂದ ಪಠ್ಯ ಪುಸ್ತಕ, ಸಮವಸ್ತ್ರ, ಬಿಸಿಯೂಟ ವಿತರಿಸುತ್ತಿದೆ. ಆದರೆ, ಸರ್ಕಾರಿ ಶಾಲೆಗಳು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅವಿರತ ಟ್ರಸ್ಟ್ ವತಿಯಿಂದ ನೋಟ್ ಬುಕ್ ವಿತರಣೆ ಕಾರ್ಯ ಶ್ಲಾಘನೀಯ. ಇದು ಮಕ್ಕಳ ಉಜ್ವಲ ಭವಿಷ್ಯಕ್ಕೆ ಪ್ರೇರಣೆಯಾಗಿದೆʼ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯಗುರು ಜಗದೇವಿ ಅವರು ಮಾತನಾಡಿ, ʼಬೆಳೆಯುವ ಪೈರು ಮೊಳಕೆಯಲ್ಲಿʼ ಎಂಬಂತೆ ಮಕ್ಕಳ ಶಿಕ್ಷಣ ಗುಣಮಟ್ಟ ವೃದ್ಧಿಗೆ ಪ್ರಾಥಮಿಕ ಶಾಲೆಗಳ ಪಾತ್ರ ಬಹುಮುಖ್ಯವಾಗಿದೆ. ಮಕ್ಕಳ ನೈತಿಕ ಶಿಕ್ಷಣಕ್ಕೆ ಪೋಷಕರ ಹಾಗೂ ಶಿಕ್ಷಕರ ಕಾಳಜಿ ಅಗತ್ಯವಿದೆ. ಸರ್ಕಾರಿ ಶಾಲೆಗಳ ಬಗ್ಗೆ ಅವಿರತ ಟ್ರಸ್ಟ್ ಅವರ ಕಾಳಜಿ ಮೆಚ್ಚುವಂತಹದುʼ ಎಂದು ನುಡಿದರು.
ಉಪನ್ಯಾಸಕ ಈಶ್ವರ ಮಿತ್ರಾ ಮಾತನಾಡಿ, ʼಸರ್ಕಾರ ನೀಡುವ ಹಲವು ಸೌಲಭ್ಯಗಳು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು. ಹೆಚ್ಚು ಅಧ್ಯಯನ ರೂಢಿಸಿಕೊಂಡರೆ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ. ಈ ದಿಸೆಯಲ್ಲಿ ಶಿಕ್ಷಕರು ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕುʼ ಎಂದರು.
ʼಸರ್ಕಾರ ಅಲ್ಲದೆ ಸಂಘ-ಸಂಸ್ಥೆಗಳ ಸಹಕಾರದಿಂದ ಸರ್ಕಾರಿ ಶಾಲೆಯ ಮಕ್ಕಳು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರಿ ಶಾಲೆಯೂ ಮುಂಬರುವ ದಿನಗಳಲ್ಲಿ ಮಾದರಿ ಶಾಲೆಯಾಗಿ ರೂಪಿಸುತ್ತೇವೆʼ ಎಂದು ಶಿಕ್ಷಕ ವಿಠಲ ವರ್ಮಾ ತಿಳಿಸಿದರು.
ಇದನ್ನೂ ಓದಿ : ಬೀದರ್ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ; ಅರ್ಥಪೂರ್ಣವಾಗಿ ನಡೆಸಲು ಒಕ್ಕೊರಲ ತೀರ್ಮಾನ
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತಾನಾಜಿ ಪಾಟೀಲ, ಸಾಮಾಜಿಕ ಚಿಂತಕ ದಿಲೀಪ ಚಂದಾ ಮತ್ತಿತರರು ಮಾತನಾಡಿದರು.
ಅವಿರತ ಟ್ರಸ್ಟ ಸದಸ್ಯ ಪ್ರವೀಣ ರತ್ನಾಕರ್ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ, ಉಪಾಧ್ಯಕ್ಷೆ ಮಮತಾ ಸೇರಿದಂತೆ ಪ್ರಮುಖರಾದ ಪ್ರೇಮಸಾಗರ, ಸಕ್ಪಾಲ ಕಾಂಬಳೆ, ಆನಂದ ಮಾಸಿಮಾಡೆ ಸೇರಿದಂತೆ ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.