ಆದರ್ಶ ಶಿಕ್ಷಕ ಎನಿಸಿಕೊಳ್ಳಲು ಉತ್ತಮ ಬೋಧನೆ, ಶಿಸ್ತು, ಸಹಕಾರ, ಸತತ ಅಧ್ಯಯನ ಸೇರಿ ಹಲವು ಆದರ್ಶಮಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ.ಜಗನ್ನಾಥ ಹೆಬ್ಬಾಳೆ ತಿಳಿಸಿದರು.
ಬೀದರ್ ನಗರದ ವಿದ್ಯಾಶ್ರೀ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ವಿದ್ಯಾಶ್ರೀ ಮಾದರಿ ಪ್ರಾಥಮಿಕ ಶಾಲೆ ಹಾಗೂ ವಿದ್ಯಾನಿಧಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ʼಶಿಕ್ಷಕರು ನಿರಂತರವಾಗಿ ಕಲಿಯುತ್ತಿರಬೇಕು. ಪ್ರಯತ್ನಶೀಲರಾಗುವುದರ ಜೊತೆಗೆ ಕ್ರಿಯಾಶೀಲರಾಗಿ ಮಕ್ಕಳ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುವಂತೆ ಬೋಧಿಸಬೇಕು. ಮಕ್ಕಳ ಜೀವನ ಉಜ್ವಲವಾಗುವಂತೆ ಅವರಿಗೆ ಮಾರ್ಗದರ್ಶನ ಮಾಡಬೇಕು. ಸರಳ ಜೀವನ, ಉದ್ವೇಗರಹಿತ, ಪರಿಪೂರ್ಣತೆ ಮತ್ತು ಪರಿಪಕ್ವತೆ ಹೊಂದಿರಬೇಕುʼ ಎಂದು ಕಿವಿಮಾತು ಹೇಳಿದರು.
ವಿದ್ಯಾಶ್ರೀ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಗಣಪತಿ ಸೋಲಪುರೆ ಮಾತನಾಡಿ, ʼಶಿಕ್ಷಕರಾದವರು ಧನಾತ್ಮಕ ವಿಚಾರಗಳೊಂದಿಗೆ, ಆಕರ್ಷಕ ನಿರೂಪಣಾ ಶಕ್ತಿ ಹೊಂದಿರಬೇಕು. ಆಧುನಿಕತೆಗೆ ಹೊಂದಿಕೊಂಡು ಡಿಜಿಟಲ್ ಉಪಕರಣಗಳನ್ನು ಸದ್ಬಳಕೆ ಮಾಡಿಕೊಂಡು ಬೋಧಿಸಬೇಕು ಎಂದು ಹೇಳಿದ ಅವರು, ಶಾಲೆಯ ಎಲ್ಲಾ ಕಾರ್ಯಗಳಿಗೆ ಸಹಕಾರ ನೀಡುತ್ತಿರುವ ಟ್ರಸ್ಟ್ ಅಧ್ಯಕ್ಷೆ ಶೀಲಾ ದೇಶಪಾಂಡೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಬೀದರ ತಾಲೂಕಾಧ್ಯಕ್ಷ ಎಸ್.ಬಿ.ಕುಚಬಾಳ, ಟ್ರಸ್ಟ್ ಖಜಾಂಚಿ ರೇಣುಕಾ ಆರ್.ಮಂಗಲಗಿ, ಟ್ರಸ್ಟ್ ಸದಸ್ಯರಾದ ವಿಜಯಲಕ್ಷ್ಮಿ ಸೋಲಪುರೆ, ಕೇದಾರ ಎಂ.ದೇಶಪಾಂಡೆ, ಆದರ್ಶ ಮಂಗಲಗಿ, ಶಾಲೆಯ ಮುಖ್ಯಗುರು ರಾಘವೇಂದ್ರ ಕುಲಕರ್ಣಿ ಸೇರಿದಂತೆ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ವರದಕ್ಷಿಣೆ ಕಿರುಕುಳ ಆರೋಪ : ಗಂಡ, ಮಾವ, ಅತ್ತೆ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್