ಅನುಮತಿ ಪಡೆಯದೆ ತಂಬಾಕು ವಸ್ತುಗಳ ಕಲಬೆರಕೆ ಮಾಡಿ ತಯಾರಿಸಿ ಸಂಗ್ರಹಿಸಿಟ್ಟಿದ್ದ ₹1.94 ಕೋಟಿಗೂ ಅಧಿಕ ಮೌಲ್ಯದ ಗುಟ್ಕಾ, ಪಾನ್ ಮಸಾಲ ಹಾಗೂ ₹25 ಲಕ್ಷ ಮೌಲ್ಯದ ಒಂದು ವಾಹನವನ್ನು ಜಪ್ತಿ ಮಾಡಿ 8 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಹೇಳಿದರು.
ಬೀದರ್ ನಗರದ ಗಾಂಧಿ ಗಂಜ ಹಾಗೂ ನೂತನ ನಗರ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತೇಕ ಕಡೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿತರಿಂದ ಗುಟ್ಕಾ, ಪಾನ್ ಮಸಾಲ ಮತ್ತು ಒಂದು ಐಚರ್ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಭಾನುವಾರ ಸುದ್ದುಗೋಷ್ಠಿಯಲ್ಲಿ ಅವರು ವಿವರಿಸಿದರು.
ಎಲ್ಲಿ, ಏನೇನು ಜಪ್ತಿ ?
ಬೀದರ್ ನಗರದ ಚಿದ್ರಿಯ ಬುತ್ತಿ ಬಸವಣ್ಣ ದೇವಸ್ಥಾನ ಸಮೀಪದ ಮನೆಯೊಂದರಲ್ಲಿ ಅಕ್ರಮವಾಗಿ ತಂಬಾಕು ವಸ್ತುಗಳ ಕಲಬೆರಕೆ ಗುಟಕಾ ಸಾಮಗ್ರಿ, ಪಾನ್ ಮಸಾಲಾ ಸಂಗ್ರಹಿಸಿಟ್ಟು, ಲಾರಿಯೊಂದರಲ್ಲಿ ತುಂಬುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ₹1.51 ಕೋಟಿ ಮೌಲ್ಯದ ಪಾನ್ ಮಸಾಲ, ತಂಬಾಕು ವಸ್ತು ಹಾಗೂ ಗುಟಕಾ ತಯಾರಿಸುವ ವಿವಿಧ ಸಾಮಾಗ್ರಿ ಮತ್ತು ₹25 ಲಕ್ಷ ಮೌಲ್ಯ ಒಂದು ಲಾರಿ ಸೇರಿ ಒಟ್ಟು ₹1.76 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಗಾಂಧಿ ಗಂಜ ಠಾಣೆಯ ಪೊಲೀಸರು ಜಪ್ತಿ ಮಾಡಿದ್ದಾರೆ.

ನೂತನ ನಗರ ಠಾಣೆ ವ್ಯಾಪ್ತಿಯ ಬೀದರ್ ಹೊರವಲಯದ ಕೋಳಾರ ಕೈಗಾರಿಕಾ ಪ್ರದೇಶದಲ್ಲಿ ಶೆಡ್‌ವೊಂದರಲ್ಲಿ ಸರ್ಕಾರದ ಅನುಮತಿ ಪಡೆಯದೆ ಮಾನವ ಆರೋಗ್ಯಕ್ಕೆ ಹಾನಿಕಾರವಾದ ಪಾನ್ ಮಸಾಲ, ಕೆಮಿಕಲ್ ಹಾಗೂ ಕಚ್ಚಾ ವಸ್ತು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಒಟ್ಟು ₹43.30 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಗಾಂಧಿ ಗಂಜ ಹಾಗೂ ನೂತನ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ : ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿ | ₹100 ಕೋಟಿ ವಿಶೇಷ ಪರಿಹಾರ ಕೊಡಿ : ಸಿಎಂಗೆ ಈಶ್ವರ ಖಂಡ್ರೆ ಮನವಿ