ಔರಾದ್ ತಾಲ್ಲೂಕಿನ ಚಿಂತಾಕಿ ಪೊಲೀಸ್ ಠಾಣೆ ವ್ಯಾಪ್ತಿಯ ಕರಂಜಿ(ಬಿ) ಗ್ರಾಮದ ರೈತರೊಬ್ಬರು ಹೊಲದಲ್ಲಿ ಹತ್ತಿ ಬೆಳೆ ಮಧ್ಯೆ ಬೆಳೆದಿದ್ದ ₹8.12 ಲಕ್ಷ ಗಾಂಜಾವನ್ನು ಜಿಲ್ಲಾ ಪೊಲೀಸರು ಡ್ರೋನ್ ಕ್ಯಾಮೆರಾ ಮೂಲಕ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಲದಲ್ಲಿ ಬೆಳೆಗಳ ನಡುವೆ ಗಾಂಜಾ ಸಸಿ ನಾಟಿ ಮಾಡಿ ಬೆಳೆದರೆ ಯಾರಿಗೂ ಗೊತ್ತಾಗುವುದಿಲ್ಲ. ಕದ್ದು ಮುಚ್ಚಿ ಮಾರಾಟ ಮಾಡಬಹುದು ಎಂಬ ಉದ್ದೇಶದಿಂದ ರೈತರೊಬ್ಬರು ಅಕ್ರಮವಾಗಿ 46 ಗಾಂಜಾ ಗಿಡಗಳನ್ನು ಬೆಳೆದಿದ್ದರು.
ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಡಿಸಿಆರ್‌ಬಿ ಘಟಕ ಪಿಎಸ್‌ಐ ಅಂಬ್ರೀಶ್ ವಾಘಮೋರೆ, ಚಿಂತಾಕಿ ಠಾಣೆ ಪಿಎಸ್‌ಐ ಚಂದ್ರಶೇಖರ ನಿರ್ಣೆ ಅವರ ನೇತ್ರತ್ವದಲ್ಲಿ ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿ, ಡ್ರೋನ್ ಕ್ಯಾಮರಾ ಬಳಸಿ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿದ್ದಾರೆ.
ʼಹತ್ತಿ ಬೆಳೆಯ ಮಧ್ಯೆ ಅಕ್ರಮವಾಗಿ ಬೆಳೆದಿದ್ದ ₹8.12 ಲಕ್ಷ ಮೌಲ್ಯದ 8.120 ಕೆಜಿ ಗಾಂಜಾದ 46 ಗಿಡಗಳನ್ನು ಪತ್ತೆಯಾಗಿವೆ. ಗಾಂಜಾ ಬೆಳೆದ ಆರೋಪಿತನ ವಿರುದ್ಧ ಚಿಂತಾಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆʼ ಎಂದು ಎಸ್ಪಿ ಪ್ರದೀಪ ಗುಂಟಿ ತಿಳಿಸಿದ್ದಾರೆ.
ʼಕೆಲವರು ಪೊಲೀಸರ ಕಣ್ಣು ತಪ್ಪಿಸಿ ಕಾನೂನು ಬಾಹಿರ ಕೆಲಸಕ್ಕೆ ಕೈ ಹಾಕುತ್ತಾರೆ. ನಮ್ಮ ಇಲಾಖೆಗೆ ಎಲ್ಲಿ ಅಕ್ರಮ ನಡೆಯುತ್ತದೆ ಎನ್ನುವ ಬಗ್ಗೆ ಮಾಹಿತಿ ಇರುತ್ತದೆ. ಕೃಷಿ ಜಮೀನುಗಳಲ್ಲಿ ನಿಷೇಧಿತ ಬೆಳೆಗಳನ್ನು ಬೆಳೆಯಬಾರದು. ಮಾದಕ ವಸ್ತು ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಮಾಹಿತಿ ನೀಡಿ, ಬೀದರ್ ವ್ಯಸನ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಕಾನೂನು ಬಾಹಿರವಾಗಿ ಅಕ್ರಮ ಚಟುವಟಿಕೆಗಳಲ್ಲಿ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆʼ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಬೀದರ್ | ಮಧ್ಯಪ್ರದೇಶದಿಂದ ಗಾಂಜಾ ಖರೀದಿ : 43 ಕೆಜಿ ಗಾಂಜಾದೊಂದಿಗೆ ಸಿಕ್ಕಿಬಿದ್ದ ಮಹಿಳೆ ಪೊಲೀಸರ ವಶಕ್ಕೆ
ಕಾರ್ಯಾಚರಣೆಯಲ್ಲಿ ಡಿಎಸ್‌ಬಿ ಘಟಕದ ಎಎಸ್‌ಐ ಗುಂಡಪ್ಪಾ ರೆಡ್ಡಿ, ಸಿಬ್ಬಂದಿ ಸಂತೋಷ, ರಾಜಕುಮಾರ್, ಸಂತೋಷ ಹಾಘೂ ಚಿಂತಾಕಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸಿದ್ದೇಶ್ವರ, ಶ್ರೀಪತಿ, ಗೋರಖ, ಸದೋಜಾತ, ಸಂತೋಷ, ಮಾಣಿಕ ಮತ್ತಿತರರು ಭಾಗವಹಿಸಿದ್ದರು.