ಬೀದರ್ ನಗರದಲ್ಲಿ ಸೆ. 3ರಿಂದ 14 ರವರೆಗೆ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ್ ಆಸಿಫುದ್ದೀನ್ ಹಾಗೂ ಬೀದರ್ ಘಟಕದ ಹಿರಿಯ ಸದಸ್ಯ ಮುಹಮ್ಮದ್ ನಿಝಾಮುದ್ದೀನ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಪ್ರವಾದಿ ಮುಹಮ್ಮದ್(ಸ) ಚಂದ್ರಮಾನ ಕ್ಯಾಲೆಂಡರ್ ಪ್ರಕಾರ, ರಬೀವುಲ್ ಅವ್ವಲ್ ತಿಂಗಳಲ್ಲಿ ಜನಿಸಿದರು. ಅವರ ಸಾರ್ವತ್ರಿಕ ಬೋಧನೆಗಳನ್ನು ಜನರಿಗೆ ತಿಳಿಸುವುದು, ಪ್ರವಾದಿ ಅವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಹಾಗೂ ವಿವಿಧ ಧರ್ಮೀಯರ ನಡುವಿನ ಸಂಬಂಧ ಗಟ್ಟಿಗೊಳಿಸುವುದು ಅಭಿಯಾನದ ಉದ್ದೇಶವಾಗಿದೆʼ ಎಂದು ತಿಳಿಸಿದರು.
ರಾಜ್ಯದಾದ್ಯಂತ ನಡೆಯಲಿರುವ ಅಭಿಯಾನದ ನಿಮಿತ್ತ ಬೀದರ್ ನಗರದಲ್ಲೂ ಮುಸ್ಲಿಂ ಗಣ್ಯರ ಸಮಾಲೋಚನಾ ಸಭೆ, ಗಣ್ಯರು-ಧಾರ್ಮಿಕ ಮುಖಂಡರ ಭೇಟಿ, ವೈಯಕ್ತಿಕ ಭೇಟಿ, ಕ್ಯಾಂಪಸ್ ಉಪನ್ಯಾಸ, ಜುಮಾ ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಸೆ. 13 ಮತ್ತು 14ರಂದು ಜಾಮಾ ಮಸೀದಿಯಲ್ಲಿ ಜರುಗುವ ಸೀರತ್ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‍ನ ತೆಲಂಗಾಣ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಮೌಲಾನಾ ಹಾಮೇದ್ ಮುಹಮ್ಮದ್ ಖಾನ್ ಪಾಲ್ಗೊಳ್ಳುವರು. 14 ರಂದು ಸಂಜೆ 7ಕ್ಕೆ ಹೋಟೆಲ್ ಬೀದರ್ ಗೇಟ್ ವೇನಲ್ಲಿ ಗಣ್ಯರ ಸಂವಾದ ಕಾರ್ಯಕ್ರಮ ನಡೆಯಲಿದೆ. ಜಮಾ ಅತೆ ಇಸ್ಲಾಮಿ ಹಿಂದ್‍ನ ಕೇಂದ್ರ ಸಲಹಾ ಮಂಡಳಿಯ ಸದಸ್ಯ ಮೌಲಾನಾ ಮುಹಮ್ಮದ್ ಇಕ್ಬಾಲ್ ಮುಲ್ಲಾ ಭಾಗವಹಿಸುವರುʼ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ನಾಳೆ ಬೀದರ್‌ನಲ್ಲಿ ʼಬಸವ ಸಂಸ್ಕೃತಿ ಅಭಿಯಾನʼ : ಬಸವರಾಜ ಧನ್ನೂರ್
ಜಮಾ ಅತೆ ಇಸ್ಲಾಮಿ ಹಿಂದ್‍ನ ಬೀದರ್ ಘಟಕದ ಉಪಾಧ್ಯಕ್ಷ ಮುಹಮ್ಮದ್ ಆರಿಫುದ್ದೀನ್ ಮಾತನಾಡಿ, ʼಸಮಾಜ ಸೇವೆಯ ಭಾಗವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿ, ಹಣ್ಣು ಹಂಪಲು ವಿತರಿಸಲಾಗುವುದು. ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಗುವುದುʼ ಎಂದು ತಿಳಿಸಿದರು.