ಹುಮನಾಬಾದ್ ತಾಲ್ಲೂಕಿನ ಸಿಂಧನಕೇರಾ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಸ್ವಚ್ಛತೆ ಕುರಿತು ಧ್ವನಿ ಎತ್ತಿದರೆ ಕರೆ ಮಾಡಿ ಬೆದರಿ ಹಾಕಿರುವ ಗ್ರಾಮ ಪಂಚಾಯತ್ ಪಿಡಿಒ ಸುಗಂಧಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಈ ಸಂಬಂಧ ಮಂಗಳವಾರ ಹುಮನಾಬಾದ್ ತಹಸೀಲ್ದಾರ್ ಅಂಜುಮ್ ತಬಸುಮ್ ಹಾಗೂ ತಾಲ್ಲೂಕು ಪಂಚಾಯತ್ ಇಒ ದೀಪಿಕಾ ನಾಯ್ಕರ್ ಅವರಿಗೆ ಸಲ್ಲಿಸಿದ ಮನವಿ ಪತ್ರ ಸಲ್ಲಿಸಿದರು.
ಸಿಂಧನಕೇರಾ ಗ್ರಾಮದ ಸಾಮಾಜಿಕ ಕಾರ್ಯಕರ್ತ ಯುವರಾಜ್ ಐಹೊಳ್ಳಿ ಅವರು, ʼಗ್ರಾಮದ ಬಸವೇಶ್ವರ ವೃತ್ತದಲ್ಲಿ ನೀರು ನಿಲ್ಲುತ್ತಿದೆ, ದಯವಿಟ್ಟು ಸರಿಪಡಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪೋಟೊ ಹಾಕಿದರು. ಅದಕ್ಕೆ ಪಿಡಿಒ ಸುಗಂಧಾ ಅವರು ಕರೆ ಮಾಡಿ, ʼನಮ್ಮನ್ನು ಪ್ರಶ್ನೆ ಮಾಡೋದಕ್ಕೆ, ನೀನೇನು ಗ್ರಾಮದ ನೇತಾ ಏನು, ಬಸವೇಶ್ವರ ವೃತ್ತದ ಬಳಿ ನೀರು ನಿಂತರೆ ನಿಮಗ್ಯಾಕೆ ಸಮಸ್ಯೆ? ಬಸವೇಶ್ವರ ಚೌಕ್ ನಿಮಗೇನು ಸಂಬಂಧ, ನಿಮ್ಮ ಏರಿಯಾ ನೀವು ನೋಡಿಕೊಳ್ಳಿ, ಅಂಬೇಡ್ಕರ್ ಮೂರ್ತಿ ಬಗ್ಗೆ ಮೊದಲು ವಿಚಾರಿಸಿʼ ಎಂದಿದ್ದಾರೆ ಎಂದು ಆರೋಪಿಸಿದರು.
ʼನಾನು ಸುಮ್ಮನ್ನೆ ಕುಂತ್ರೆ ಜಾಸ್ತಿ ಮಾಡ್ತಾ ಇದ್ದೀರಾ, ನೀವು ಎಲ್ಲದಕ್ಕೂ ರೆಡಿ ಇದ್ದರೆ ಬನ್ನಿ. ಏನು ಮಾಡಬೇಕು ಅದನ್ನು ಮಾಡಿ ತೋರಿಸ್ತೀನಿ. ಬ್ಲ್ಯಾಕ್ ಮಾಡೋಕೆ ದೂರು ಕೊಡ್ತೀರಾʼ ಎಂದು ಪಿಡಿಒ ಅವರು ಬೆದರಿಕೆ ಹಾಕಿದ್ದಾರೆ. ಯುವರಾಜ್ ಐಹೊಳ್ಳಿ ಅವರಿಗೆ ಏನಾದರೂ ತೊಂದರೆಯಾದರೆ ಪಿಡಿಒ ಸುಗಂಧಾ ಅವರೇ ಹೊಣೆಯಾಗುತ್ತಾರೆ. ಪಿಡಿಒ ವಿರುದ್ಧ ವಾರದೊಳಗೆ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ತಾಲ್ಲೂಕು ಪಂಚಾಯತ್ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುವುದುʼ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಬೀದರ್ | ಗುಣಾತ್ಮಕ ಶಿಕ್ಷಣ, ಮಾನವ ಸಂಪನ್ಮೂಲ ಬಲಿಷ್ಠಕ್ಕೆ ಯೋಜನೆ ರೂಪಿಸಿ : ನಾಗನಾಥ ಚಿಟಮೆ
ಸಾಮಾಜಿಕ ಕಾರ್ಯಕರ್ತರಾದ ಯುವರಾಜ್ ಐಹೊಳ್ಳಿ, ಆಶ್ರಯ ದೀಪ ಟ್ರಸ್ಟ್ ಉಪಾಧ್ಯಕ್ಷ ಅರವಿಂದ್ ಜೋಗಿರೆ, ಗುರು ಪಾಟೀಲ್ ಸಿಂಧನಕೇರಾ, ಭೀಮ್ ಆರ್ಮಿ ತಾಲೂಕು ಉಪಾಧ್ಯಕ್ಷ ಶೇಖ್ ಫಿರ್ದೋಸ್, ಎಂ.ಡಿ.ಬಾಬಾ ಪಟೇಲ್, ಮಲ್ಲೇಶ್ ಮಿತ್ರ, ಶೇಖ್ ಅಮಾನ್ ಸುಲ್ತಾನಿ, ಮೈನೋದ್ದಿನ್ ನಂದಗಾಂವವಾಲೆ, ಅಮರ್ ಸಿಂಧನಕೇರಾ, ಸಂದೀಪ್ ಮತ್ತಿತರರಿದ್ದರು.