ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಅಡಿಯಲ್ಲಿ ಬರುವ ಭಾಲ್ಕಿ ತಾಲ್ಲೂಕಿನ ಮೆಹಕರ್ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ವಿದ್ಯಾರ್ಥಿಗಳ ʼಬರʼ ಎದುರಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಾಗಿಲು ಮುಚ್ಚಿದೆ.
2006-07ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸರ್ಕಾರಿ ಪಿಯು ಕಾಲೇಜು ತಾಲ್ಲೂಕಿನ ಗಡಿ ಗ್ರಾಮದ ವಿದ್ಯಾರ್ಥಿಗಳಿಗೆ ಹೊಸ ಭರವಸೆ ಮೂಡಿಸಿತು. ಆರಂಭದಲ್ಲಿ ಕೆಲ ವರ್ಷಗಳ ಕಾಲ ವಿದ್ಯಾರ್ಥಿಗಳ ಪ್ರವೇಶಾತಿ ಚನ್ನಾಗಿಯೇ ಇತ್ತು. ತದನಂತರ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶಾತಿ ಕುಸಿತಗೊಂಡು ಇದೀಗ ಕಾಲೇಜಿಗೆ ಬೀಗ್ ಜಡಿಯಲಾಗಿದೆ.
ಗ್ರಾಮದ ಹೊರವಲದಲ್ಲಿರುವ ಕಾಲೇಜು ಅಗತ್ಯ ಕಟ್ಟಡ, ತರಗತಿ ಕೋಣೆ, ವಿಶಾಲ ಆಟದ ಮೈದಾನ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಹೊಂದಿದೆ. ಮಕ್ಕಳು ಓದುವ ಅಥವಾ ಪೋಷಕರಿಗೆ ಈ ಕಾಲೇಜಿನಲ್ಲಿ ಓದಿಸುವ ಹಂಬಲ ಮತ್ತು ಆಸಕ್ತಿ ಇಲ್ಲದಿರುವ ಕಾರಣಕ್ಕೆ ಶೂನ್ಯ ದಾಖಲಾತಿ ಹಾದಿ ಹಿಡಿದು ಇದೀಗ ಬೇರೆಡೆ ಸ್ಥಳಾಂತರಗೊಳ್ಳುವ ಹಂತದಲ್ಲಿದೆ.
ಪರೀಕ್ಷೆ ಬರೆದ ಇಬ್ಬರು ವಿದ್ಯಾರ್ಥಿಗಳು ಫೇಲ್ :
ಕಳೆದ ವರ್ಷ ಮೆಹಕರ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಗೆ ಕೇವಲ ನಾಲ್ಕು ಮಕ್ಕಳ ದಾಖಲಾತಿ ಇತ್ತು. ಅವರಲ್ಲಿ 2 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾದರು, ಪರೀಕ್ಷೆ ಬರೆದ ಉಳಿದ 2 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಈ ವರ್ಷ ಶೂನ್ಯ ಫಲಿತಾಂಶ ದಾಖಲಿಸಿದ ಜಿಲ್ಲೆಯ ಕಾಲೇಜುಗಳ ಪಟ್ಟಿಯಲ್ಲಿ ಈ ಕಾಲೇಜು ಸಹ ಇತ್ತು.
ದ್ವಿತೀಯ ಪಿಯುಸಿಯಲ್ಲಿ ಇಬ್ಬರು ಉರ್ದು ಮಾಧ್ಯಮ ವಿದ್ಯಾರ್ಥಿಗಳಿದ್ದರು. ಕಾಲೇಜಿನ 4 ಜನ ಉಪನ್ಯಾಸಕರು ಒಂದೇ ಬಾರಿ ವರ್ಗಾವಣೆಯಾದ ಪರಿಣಾಮ ವಿದ್ಯಾರ್ಥಿಗಳ ಕಲಿಕೆಗೆ ಭಾರಿ ಹಿನ್ನಡೆಯಾಗಿತ್ತು. ಬೇರೆ ಉಪನ್ಯಾಸಕರನ್ನು ನಿಯೋಜಿಸಿದರೂ ಕಲಿಕೆಗೆ ಬೇಕಾದ ಪೂರಕ ವಾತಾವರಣ ಸಿಗದಿರುವ ಕಾರಣಕ್ಕೆ ಫಲಿತಾಂಶ ಶೂನ್ಯ ಬಂದಿತು.

ದಾಖಲಾತಿ ಕುಸಿತಕ್ಕೆ ಕಾರಣಗಳೇನು:
ಹುಲಸೂರ ತಾಲ್ಲೂಕಿಗೆ ಸಮೀಪ ಇರುವ ಮೆಹಕರ್ ಗ್ರಾಮವು ಭಾಲ್ಕಿ ತಾಲ್ಲೂಕು ವ್ಯಾಪ್ತಿಯಲ್ಲಿದೆ. ಗಡಿ ಅಂಚಿನಲ್ಲಿರುವ ಈ ಗ್ರಾಮದಲ್ಲಿ ಹೆಚ್ಚು ಮರಾಠಿ ಭಾಷಿಕರಿದ್ದಾರೆ. ಸುತ್ತಲಿನ ಗ್ರಾಮಗಳಲ್ಲಿ ಮರಾಠಿ ಭಾಷೆಯ ದಟ್ಟ ಪ್ರಭಾವ ಕಾರಣದಿಂದ ಈ ಕಾಲೇಜಿನಲ್ಲಿ ಪ್ರವೇಶಾತಿಗೆ ಮಕ್ಕಳು ಹಿಂದೇಟು ಹಾಕಿರುವುದು ಒಂದು ಕಾರಣವಾದರೆ; ಈ ಕಾಲೇಜಿನ ಖಾಯಂ ಉಪನ್ಯಾಸಕರ ನೇಮಕ ಆಗದಿರುವುದು, ಗ್ರಾಮಸ್ಥರ, ಉಪನ್ಯಾಸಕರ ಇಚ್ಚಾಶಕ್ತಿ ಕೊರತೆಯಿಂದ ಕಾಲೇಜು ಇದ್ದು ಇಲ್ಲದಂತಾಗಿತ್ತು.
ಈ ಪಿಯು ಕಾಲೇಜು ಆವರಣದಲ್ಲಿ ಕನ್ನಡ ಹಾಗೂ ಮರಾಠಿ ಮಾಧ್ಯಮ ಸರ್ಕಾರಿ ಪ್ರೌಢ ಶಾಲೆ ಇದೆ. ಅಲ್ಲಿ ಎರಡು ಮಾಧ್ಯಮದಲ್ಲಿ ಮಕ್ಕಳ ದಾಖಲಾತಿ ಚನ್ನಾಗಿಯೇ ಇದೆ. ಈ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ಮಕ್ಕಳು ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಾರೆ ಎಂಬ ಉದ್ದೇಶದಿಂದ ಕಾಲೇಜು ಸ್ಥಾಪಿಸಲಾಗಿತ್ತು. ಆದರೆ, ಇಲ್ಲಿಯ ಪೋಷಕರು ತಮ್ಮ ಮಕ್ಕಳನ್ನು ದೂರದ ಭಾಲ್ಕಿ, ಬೀದರ್, ಬಸವಕಲ್ಯಾಣ ಸೇರಿದಂತೆ ನಾನಾ ಕಡೆ ಸೇರಿಸುವುದರಿಂದ ಪ್ರತಿ ವರ್ಷ ಪ್ರವೇಶಾತಿ ಇಳಿಜಾರು ಹಾದಿ ಹಿಡಿಯಿತು ಎಂಬುದು ಸ್ಥಳೀಯರು ಹೇಳುತ್ತಾರೆ.
ಬಾಳೂರ ಗ್ರಾಮಕ್ಕೆ ಕಾಲೇಜು ಸ್ಥಳಾಂತರ :
ಮೆಹಕರ್ ಗ್ರಾಮದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಈ ಬಾರಿ ಶೂನ್ಯ ಫಲಿತಾಂಶ ಜೊತೆಗೆ ದಾಖಲಾತಿ ಒಂದಕ್ಕಿ ದಾಟದ ಹಿನ್ನೆಲೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಇಲಾಖೆ ಕಾಲೇಜು ಸಂಪೂರ್ಣವಾಗಿ ಮುಚ್ಚಿಸಲಾಗಿದೆ. ಈ ಕಾಲೇಜು ಭಾಲ್ಲಿ ತಾಲ್ಲೂಕಿನ ಬಾಳೂರ ಗ್ರಾಮಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಆದರ್ಶ ಪಿಯು ಕಾಲೇಜುಗಳಲ್ಲಿ ಪ್ರವೇಶಕ್ಕೆ ನಿರುತ್ಸಾಹ :
ಬೀದರ್ ಜಿಲ್ಲೆಯ ನಾಲ್ಕು ತಾಲ್ಲೂಕು ವ್ಯಾಪ್ತಿಯಲ್ಲಿರುವ 4 ಆದರ್ಶ ವಿದ್ಯಾಲಯಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನಿಂದ ಪ್ರಾರಂಭಿಸಿದ ಆದರ್ಶ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ನಿರುತ್ಸಾಹ ಕಂಡು ಬಂದಿದೆ.
ಜಿಲ್ಲೆಯಲ್ಲಿ ಒಟ್ಟು 24 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿದ್ದು, ಇದೀಗ ಬೀದರ್ ತಾಲ್ಲೂಕಿನ ಜನವಾಡ ಆದರ್ಶ, ಔರಾದ್ ಪಟ್ಟಣದ ಆದರ್ಶ, ಬಸವಕಲ್ಯಾಣ ತಾಲ್ಲೂಕಿನ ರಾಜೋಳ ಆದರ್ಶ ಹಾಗೂ ಚಿಟಗುಪ್ಪಾ ತಾಲ್ಲೂಕಿನ ಬೇಮಳಖೇಡ ಆದರ್ಶ ವಿದ್ಯಾಲಯಗಳಲ್ಲಿ ಈ ವರ್ಷದಿಂದ ನೂತನ ಪದವಿ ಪೂರ್ವ ಕಾಲೇಜುಗಳು ಆರಂಭವಾಗಿವೆ. ಇದರಿಂದ ಜಿಲ್ಲೆಯಲ್ಲಿ ಈಗ 28 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಾದವು.

ಜಿಲ್ಲೆಯಲ್ಲಿ ಇರುವ ಒಟ್ಟು ನಾಲ್ಕು ಆದರ್ಶ ವಿದ್ಯಾಲಯಗಳಲ್ಲಿ ಪ್ರಸಕ್ತ ವರ್ಷದಿಂದ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪಿಯು ಕಾಲೇಜು ಆರಂಭಿಸಲಾಗುತ್ತಿರುವ ಬಗ್ಗೆ ಹೆಚ್ಚಿನ ವಿದ್ಯಾರ್ಥಿ-ಪೋಷಕರಿಗೆ ಮಾಹಿತಿ ಇಲ್ಲ. ಈ ಬಗ್ಗೆ ಇಲಾಖೆಯು ಹೆಚ್ಚು ಪ್ರಚಾರ ನೀಡಲಿಲ್ಲ. ಹೀಗಾಗಿ ಆದರ್ಶ ಪಿಯು ಕಾಲೇಜುಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯದ ಹಿನ್ನೆಲ್ಲೆ ನಾಲ್ಕು ಕಾಲೇಜು ಸೇರಿ 28 ದಾಖಲಾತಿ ಮಾತ್ರ ಇದೆ.
ಹೊಸ ಕಾಲೇಜುಗಳನ್ನು ಆರಂಭಿಸಿದರೂ ವಿದ್ಯಾರ್ಥಿಗಳು ಮತ್ತು ಪಾಲಕರು ಮಾತ್ರ ಸ್ಥಳೀಯ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆಯಲು ನಿರಾಸಕ್ತಿ ತೋರುತ್ತಿದ್ದಾರೆ. ನಾಲ್ಕು ತಿಂಗಳು ಕಳೆದರೂ ಜನವಾಡ ಆದರ್ಶ ಪಿಯು ಕಾಲೇಜಿನಲ್ಲಿ ವಿಜ್ಞಾನ -3 ವಾಣಿಜ್ಯ -2, ಔರಾದ್‌ನಲ್ಲಿ ವಿಜ್ಞಾನ-18, ರಾಜೋಳದಲ್ಲಿ 4 ವಿದ್ಯಾರ್ಥಿನಿಯರು ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದರೆ, ಬೇಮಳಖೇಡ ಆದರ್ಶ ಕಾಲೇಜಿನಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಪ್ರವೇಶ ಪಡೆದಿದ್ದಾನೆ. ಪಿಯು ಪ್ರವೇಶಾತಿಗೆ ಸೆ.12 ಕಡೆಯ ದಿನವಾಗಿತ್ತು.
ನಾಲ್ಕು ಆದರ್ಶ ಪಿಯು ಕಾಲೇಜಿಗೆ 95 ಲಕ್ಷ ಖರ್ಚು :
ಆದರ್ಶ ವಿದ್ಯಾಲಯಗಳನ್ನು ಉನ್ನತೀಕರಿಸಿ ಜಿಲ್ಲೆಯಲ್ಲಿ ಹೊಸದಾಗಿ ನಾಲ್ಕು ಕಡೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದೊಂದಿಗೆ ಆದರ್ಶ ಪದವಿ ಪೂರ್ವ ಕಾಲೇಜುಗಳಾಗಿ ಮಂಜೂರಾದ ಹಿನ್ನೆಲೆ ಕಾಲೇಜುಗಳಿಗೆ ಪ್ರಯೋಗಾಲಯ, ಗ್ರಂಥಾಲಯ ಸೇರಿ ಇತರೆ ವೆಚ್ಚಗಳಿಗೆ ಸರ್ಕಾರ ಒಟ್ಟು ₹95 ಲಕ್ಷ ಅನುದಾನ ಮಂಜೂರು ಮಾಡಿದೆ.
ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕಟ್ಟಡ, ಪೀಠೋಪಕರಣ ಸೇರಿದಂತೆ ಮೂಲ ಸೌಕರ್ಯಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಸರ್ಕಾರ ಒಬ್ಬರು ಖಾಯಂ ಉಪನ್ಯಾಸಕರಿಲ್ಲದೆ ಕಾಲೇಜು ಆರಂಭಿಸಿದರೆ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸಲು ಅದೇಗೆ ಸಾಧ್ಯ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.
ನಾಲ್ಕು ಆದರ್ಶ ವಿದ್ಯಾಲಯದ ಕಟ್ಟಡದಲ್ಲಿ ಸದ್ಯ ಪಿಯು ಕಾಲೇಜು ಕಚೇರಿ, ಕೋಣೆ ತೆರೆಯಲಾಗಿದೆ. ಹೊಸ ಹುದ್ದೆ ಮಂಜೂರಾಗದ ಹಿನ್ನೆಲೆ ಸಮೀಪದ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ, ಉಪನ್ಯಾಸಕರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಈ ವರ್ಷ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಕುಸಿತವೂ ಸರ್ಕಾರಿ ಪಿಯು ಕಾಲೇಜುಗಳ ಪ್ರವೇಶದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.

ಹೊಸ ಕಾಲೇಜುಗಳಲ್ಲಿ ಕೆಲವೆಡೆ ಕಲಿಕಾ ಚಟುವಟಿಕೆಗಳು ಇನ್ನೂ ತರಗತಿ ಆರಂಭವಾಗಿಲ್ಲ ಎಂದು ಕೆಲ ವಿದ್ಯಾರ್ಥಿಗಳು ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವೆಡೆ ಒಂದೆರಡು ವಿದ್ಯಾರ್ಥಿಗಳಿದ್ದರೂ ತರಗತಿ ನಡೆಯುತ್ತಿರುವುದು ತಿಳಿದು ಬಂದಿದೆ. ಅಗತ್ಯ ಇರುವ ವ್ಯಾಪ್ತಿಯಲ್ಲಿ ಕಾಲೇಜು ಆರಂಭಿಸಲು ಉತ್ಸಾಹ ತೋರದ ಶಿಕ್ಷಣ ಇಲಾಖೆ ಅಗತ್ಯ ಇರದೇ ಇರುವ ʼನಾಮ್ ಕೇ ವಾಸ್ತೆʼ ಹೊಸ ಕಾಲೇಜು ಆರಂಭಿಸಿದ್ದು ಶಿಕ್ಷಣ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.
ಔರಾದ್ ಪಟ್ಟಣದಲ್ಲಿ ಈಗಾಗಲೇ ಸರ್ಕಾರಿ ಪದವಿ ಪೂರ್ವ ಕಾಲೇಜು ಇದೆ. ಇದೇ ಆವರಣದಲ್ಲಿರುವ ಆದರ್ಶ ವಿದ್ಯಾಲಯ ಕಟ್ಟಡದಲ್ಲಿ ಇದೀಗ ಹೊಸದಾಗಿ ಪಿಯು ಕಾಲೇಜು ಆರಂಭಿಸಲಾಗಿದೆ. ಒಂದೇ ಕ್ಯಾಂಪಸ್‌ನಲ್ಲಿ ಇನ್ನೊಂದು ಪಿಯು ಕಾಲೇಜು ಆರಂಭಿಸುವ ಬದಲು ತಾಲ್ಲೂಕಿನ ಬೇರೆ ಕ್ಷೇತ್ರದಲ್ಲಿ ಆರಂಭಿಸಿದರೆ ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು ಎಂಬುದು ಪ್ರಜ್ಞಾವಂತರ ಅಭಿಪ್ರಾಯ.
ಇದನ್ನೂ ಓದಿ : ಬೀದರ್ | ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರ ಕಾರ್ಯ ಶ್ಲಾಘನೀಯ : ಗುರುಪ್ರಸಾದ್ ಖಂಡ್ರೆ
ʼಪ್ರಸಕ್ತ ವರ್ಷ ಹೊಸದಾಗಿ ಆರಂಭವಾದ ಆದರ್ಶ ಪಿಯು ಕಾಲೇಜುಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿಲ್ಲ. ಮುಂದಿನ ಶೈಕ್ಷಣಿಕ ವರ್ಷ ಹೆಚ್ಚಿನ ಪ್ರಚಾರ ಕೈಗೊಂಡು ದಾಖಲಾತಿ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದುʼ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಕಾಂತ ಶಾಬಾದಕರ್ ʼಈದಿನʼಕ್ಕೆ ತಿಳಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.