ಆಧುನಿಕ ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆಗೆ ವಿಪುಲ ಅವಕಾಶಗಳಿದ್ದು, ಸರ್ಕಾರ, ಸಂಘ-ಸಂಸ್ಥೆಗಳಿಂದ ನೀಡುವ ಉಚಿತ ಕೌಶಲ್ಯ ತರಬೇತಿಯಿಂದ ಅಪಾರ ಜ್ಞಾನ ಪಡೆದುಕೊಳ್ಳಬಹುದು ಎಂದು ಹೆಡ್ ಹೆಲ್ಡ್ ಹೈ ಸಂಸ್ಥೆಯ ತರಬೇತಿದಾರ ಜೀವನ ವಾಘಮಾರೆ ಹೇಳಿದರು.
ಭಾಲ್ಕಿ ಪಟ್ಟಣದ ಆರ್ಯಾನ್ ಇನ್ಸ್‌ಟೂಟ್‌ನಲ್ಲಿ ಹೆಡ್ ಹೆಲ್ಡ್ ಹೈ ಸಹಯೋಗದಲ್ಲಿ 45 ದಿನಗಳ ಉಚಿತ ಕೌಶಲ್ಯ ತರಬೇತಿ ಪಡೆದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ʼವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ಕಂಪ್ಯೂಟರ್ ತರಬೇತಿ, ವ್ಯಕ್ತಿತ್ವ ವಿಕಸನ, ಉದ್ಯೋಗ ಮಾಹಿತಿ ಪಡೆಯುವುದು ಅಗತ್ಯವಿದೆ. ಇದರಿಂದ ವಿವಿಧ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆʼ ಎಂದು ನುಡಿದರು.
ಪತ್ರಕರ್ತ ಬಾಲಾಜಿ ಕುಂಬಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼವಿದ್ಯಾರ್ಥಿಗಳು ಪಠ್ಯದ ಜೊತೆಗೆ ಬದುಕು ಕಟ್ಟಿಕೊಳ್ಳಲು ಪೂರಕ ಜ್ಞಾನಾರ್ಜನೆ ಪಡೆಯುವುದು ಅಗತ್ಯವಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಕಂಪ್ಯೂಟರ್, ಕೌಶಲಾಭಿವೃದ್ಧಿ ಕಲಿಕೆಯಿಂದ ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆಯಬಹುದು. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಹೆಚ್ಚಿನ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕುʼ ಎಂದರು.
ಆರ್ಯಾನ್ ಇನ್ಸಟೂಟ್ ಸಂಯೋಜಕ ಏಕನಾಥ ಮೇತ್ರೆ ಮಾತನಾಡಿ, ʼನಮ್ಮ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಸರ್ಕಾರದ ಸಹಭಾಗಿತ್ವದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕುʼ ಎಂದು ಮನವಿ ಮಾಡಿದರು.
ಇದನ್ನೂ ಓದಿ : ಬೀದರ್ | ಚೆಂಡು ಹೂವು ಕೃಷಿಯಲ್ಲಿ ಖುಷಿ ಕಂಡ ಬಿಎಸ್ಸಿ ಪದವೀಧರ
ಕಾರ್ಯಕ್ರಮದಲ್ಲಿ ಆರ್ಯಾನ್ ಇನ್ಸ್‌ಟೂಟ್ ಸಿಬ್ಬಂದಿಗಳಾದ ವಿಶಾಲ ಸಿಂಧೆ, ಮಹೇಶ್ವರಿ ಹಾಗೂ ತರಬೇತಿ ಪಡೆದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಗಾಯತ್ರಿ ಪಾಂಚಾಳ ನಿರೂಪಿಸಿ, ವಂದಿಸಿದರು.