ಸದೃಢ ಮನೋಬಲದಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಅದಕ್ಕಾಗಿ ನಿರಂತರ ಪ್ರಯತ್ನ ಇರಬೇಕು ಎಂದು ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ದೀಲಿಪಕುಮಾರ ತಾಳಂಪಳ್ಳಿ ಹೇಳಿದರು.
ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನಲ್ಲಿ 2025-26ನೇ ಸಾಲಿನಲ್ಲಿ ಪ್ರವೇಶ ಪಡೆದ ಪ್ರಥಮ ವರ್ಷದ ಇಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼವಿದ್ಯಾರ್ಥಿಗಳು ಯಶಸ್ಸಿನ ಹಿಂದೆ ಓಡಬೇಕು. ಪಠ್ಯ ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರ ಕಲಿಯುವುದು ಮುಖ್ಯ. ಕಾಲೇಜಿನಲ್ಲಿರುವ ಉತ್ತಮ ಸೌಲಭ್ಯಗಳನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು. ಸತತ ಅಧ್ಯಯನದಿಂದ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿʼ ಎಂದು ಸಲಹೆ ನೀಡಿದರು.
ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯೆ ಮಲ್ಲಮ್ಮಾ ಎಂ.ತಾಳಂಪಳ್ಳಿ ಮಾತನಾಡಿ, ʼಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಡೀ ದೇಶದಲ್ಲಿ 15 ಲಕ್ಷಕ್ಕಿಂತ ಹೆಚ್ಚು ಹಾಗೂ ರಾಜ್ಯದ್ಲಲಿ 1.5ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇಂಜಿನೀಯರಿಂಗ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಾರೆ. ಅವರೊಂದಿಗೆ ನಿಮ್ಮ ಸ್ಪರ್ಧೆ ಇರುತ್ತದೆ ಎಂದು ತಿಳಿದು ನಿರಂತರ ಅಧ್ಯಯನದಿಂದ ಬದುಕಿನಲ್ಲಿ ಸಾಧನೆ ಮಾಡಬಹುದುʼ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಬಿಇಟಿ ಸಂಸ್ಥೆಯ ನಿರ್ದೇಶಕ, ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ ಮಾತನಾಡಿ, ʼಇಂದಿನ ತಂತ್ರಜ್ಞಾನ ಯುಗದಲ್ಲಿ ಎಲ್ಲರೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಮುನ್ನುಗ್ಗಬೇಕಾಗಿದೆ. ಉಜ್ವಲ ಭವಿಷ್ಯಕ್ಕಾಗಿ ಗಂಭೀರವಾಗಿ ಆಲೋಚಿಸಿ, ಕನಸು ನನಸು ಮಾಡಿಕೊಳ್ಳುವ ತುಡಿತವಿರಬೇಕುʼ ಎಂದರು.
ಇದನ್ನೂ ಓದಿ : ಬೀದರ್ | ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆರೋಪ : ಇಬ್ಬರು ಪಿಡಿಒ ಅಮಾನತು
ಇಂಜಿನಿಯರಿಂಗ್ ಕಾಲೇಜಿನ ರಜಿಸ್ಟಾರ್ ಪ್ರೇಮಸಾಗರ ಪಾಟೀಲ ಸೇರಿದಂತೆ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಉಪಪ್ರಾಚಾರ್ಯ ಡಾ.ಅರುಣಕುಮಾರ ಯಲಾಲ ನಿರೂಪಿಸಿದರು, ವಿದ್ಯಾಸಾಗರ ಹಾಗೂ ಆರ್.ಬಿ.ಡಿಗ್ಗಿಕರ್ ವಂದಿಸಿದರು.