ಗುಣಮಟ್ಟದ ಶಿಕ್ಷಣ ಜೊತೆಗೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಗುರುಪ್ರಸಾದ ಈಶ್ವರ ಖಂಡ್ರೆ ಹೇಳಿದರು.
ಬೀದರ್ ನಗರದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼನಾನಾ ಕಾರ್ಯಗಳ ಒತ್ತಡಗಳ ನಡುವೆ ಶಿಕ್ಷಕರು ಮಕ್ಕಳಿಗೆ ಉತ್ತಮ ಬೋಧನೆ ಮಾಡಬೇಕು. ಮಕ್ಕಳಿಗೆ ಪಠ್ಯದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು. ಸದಾ ಮಕ್ಕಳ ಏಳಿಗೆ ಬಯಸುವ ಶಿಕ್ಷಕ ವೃತ್ತಿ ಎಲ್ಲರಿಗೂ ಸಿಗುವುದಿಲ್ಲʼ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಗಂಗಾಬಿಕೆ ಪಾಟೀಲ್ ಮಾತನಾಡಿ, ʼಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ಎಲ್ಲ ವೃತ್ತಿಗಳಿಗೆ ತೆರಳುವವರು ಶಿಕ್ಷಕರಿಂದ ಕಲಿತ ವಿದ್ಯಾರ್ಥಿಗಳೇ ಆಗಿರುತ್ತಾರೆ. ಬಸವಾದಿ ಶರಣರು ತಿಳಿಸಿದ ಅರಿವೇ ಗುರು, ಕಾಯಕದ ಮಹತ್ವ ಮೈಗೂಡಿಸಿಕೊಳ್ಳಬೇಕಾಗಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆʼ ಎಂದು ತಿಳಿಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ರಂಜನಾ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ʼವಿದ್ಯಾರ್ಥಿಗಳ ಕಲಿಕಾ ಉನ್ನತಿಗೆ ಶಿಕ್ಷಕರು ನಿರಂತರವಾಗಿ ಶ್ರಮಿಸುತ್ತಾರೆ. ಮಕ್ಕಳ ಯಶಸ್ವಿ ಬದುಕಿಗೆ ದಾರಿ ತೋರುವ ಶಿಕ್ಷಕರನ್ನು ವಿದ್ಯಾರ್ಥಿಗಳು ಯಾವತ್ತೂ ಮರೆಯದೆ ಗೌರವಿಸಬೇಕುʼ ಎಂದು ಸಲಹೆ ನೀಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಅಂಕುಶ ಡೋಲೆ ಮಾತನಾಡಿ, ʼಈ ಭಾಗದಲ್ಲಿ ಸ್ಥಾಪನೆಯಾದ ಅಕ್ಕಮಹಾದೇವಿ ಮಹಿಳಾ ಕಾಲೇಜು ಮಹಿಳಾ ಶಿಕ್ಷಣ ಪ್ರಗತಿಗೆ ನಾಂದಿ ಹಾಡಿತು. ಮಹಿಳಾ ಸಬಲೀಕರಣ ಉದ್ದೇಶದಿಂದ ಮಾಜಿ ಸಚಿವ ಭೀಮಣ್ಣಾ ಖಂಡ್ರೆ ಹಾಗೂ ಡಾ.ಚನ್ನಬಸವ ಪಟ್ಟದ್ದೇವರು ನಿರ್ಮಿಸಿದ ಈ ಕಾಲೇಜು ಜಿಲ್ಲೆಗೆ ಮಾದರಿಯಾಗಿದೆʼ ಎಂದರು.
ವಿದ್ಯಾರ್ಥಿನಿಯರಾದ ಅಂಜಲಿ ಶಿವಕುಮಾರ್ ಹಾಗೂ ಗಂಗಾಶ್ರೀ ಅವರು ಶಿಕ್ಷಕರ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬೀದರ್ | ಕುಡಿದ ಮತ್ತಿನಲ್ಲಿ ಮಾಂಜ್ರಾ ನದಿಗೆ ಹಾರಿದ ವ್ಯಕ್ತಿ, ಮೃತದೇಹ ಪತ್ತೆ
ಕಾರ್ಯಕ್ರಮದಲ್ಲಿ ಪ್ರಮುಖರಾದ ಧೀರಜ್ ದೇಶಪಾಂಡೆ, ಮಲ್ಲಿಕಾರ್ಜುನ ಹೊನ್ನಾ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು. ಶ್ರೇಯಾ ನಿರೂಪಿಸಿದರು. ಸುಶ್ಮಾ ವಂದಿಸಿದರು.