ಬೀದರ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಭೇಟಿ ನೀಡಿ ಪರಿಶೀಲಿಸಿದರು.
ಬೀದರ್ ತಾಲ್ಲೂಕಿನ ಬರಿದಾಬಾದ್, ಬುಧೇರಾ, ಇಸ್ಲಾಂಪುರ, ಭಾಲ್ಕಿ ತಾಲ್ಲೂಕಿನ ನಿಟ್ಟೂರು(ಬಿ) ಮತ್ತು ಕಮಲನಗರ ತಾಲ್ಲೂಕಿನ ಸಾವಳಿ, ಸಂಗಮ ಗ್ರಾಮದ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು.
ಬಳಿಕ ಮಾತನಾಡಿ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ʼನೆರೆ ಹಾವಳಿಯ ಕುರಿತು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ. ರೈತ ಕಾಳಜಿ ಇಲ್ಲದ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭೀಕರ ನೆರೆ ಹಾವಳಿಯಿಂದ ತತ್ತರ ಗೊಂಡಿರುವ ಸಂಕಷ್ಟಿತ ಜನರ ಹಾಗೂ ರೈತರ ನೆರವಿಗೆ ಧಾವಿಸದೆ ತಾತ್ಸಾರ ಧೋರಣೆ ಅನುಸರಿಸುತ್ತಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʼಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರೈತರು ಸಂಪೂರ್ಣ ಬೆಳೆ ಕಳೆದುಕೊಂಡು ಚಿಂತೆಗೀಡಾಗಿದ್ದಾರೆ.ಚಕಾಂಗ್ರೆಸ್ ಸರ್ಕಾರದ ಹೃದಯಹೀನ ನಡವಳಿಕೆಯ ಕಾರ್ಯವೈಖರಿ ದೃಶ್ಯಗಳು ಪ್ರವಾಸದಲ್ಲಿ ಎದ್ದು ಕಂಡಿವೆ. ಸರ್ಕಾರ ರೈತರಿಗೆ ಶಾಶ್ವತ ಪರಿಹಾರ ನೀಡಲು ಮುಂದಾಗಬೇಕು. ಎನ್‌ಡಿಆರ್‌ಎಫ್ ಪರಿಹಾರ ಬಂದೇ ಬರುತ್ತದೆ. ಆದರೆ ರಾಜ್ಯ ಸರ್ಕಾರ ತತ್‌ಕ್ಷಣ ಪರಿಹಾರಕ್ಕೆ ನೀಡಬೇಕುʼ ಎಂದು ಆಗ್ರಹಿಸಿದರು.
ʼನಾವು ರಾಜಕೀಯ ಮಾಡಲು ಬಂದಿಲ್ಲ. ಮುಖ್ಯಮಂತ್ರಿಯವರನ್ನು ನಾನು ಟೀಕಿಸಲ್ಲ. ಸಂಕಷ್ಟದಲ್ಲಿರುವ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಬಂದಿದ್ದೇವೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರ್ಕಾರವಿದ್ದಾಗ ಎನ್‌ಡಿಆರ್‌ಆಫ್ ನಿಯಮಗಳಡಿ ಪರಿಹಾರ ನೀಡಲಾಗಿತ್ತು. ಅಷ್ಟೇ ಪರಿಹಾರ ರಾಜ್ಯ ಸರ್ಕಾರದಿಂದಲೂ ನೀಡಿದ್ದರು. ಮನೆ, ಬೆಳೆ ಹಾನಿಯಾದ ಬಡವರಿಗೆ, ರೈತರಿಗೆ ಪರಿಹಾರ ನೀಡಲಾಗಿತ್ತು. ಈಗಲೂ ರಾಜ್ಯ ಸರ್ಕಾರ ಅದೇ ರೀತಿ ಕೆಲಸ ಮಾಡಬೇಕುʼ ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಬೆಳಿಗ್ಗೆ ಬೀದರ್ ತಾಲ್ಲೂಕಿನ ಖಾಶೆಂಪುರ(ಪಿ) ಗ್ರಾಮದಲ್ಲಿ ಇತ್ತೀಚೆಗೆ ಸಾಲ ಬಾಧೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ರೈತ ಮಹಿಳೆ ಗಂಗಮ್ಮ ಶಂಕರರಾವ್ ಮಚಕೂರೆ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಆರ್ಥಿಕ ನೆರವು ನೀಡಿದರು.

ಇದನ್ನೂ ಓದಿ : ಭೀಮಾನದಿ ಪ್ರವಾಹ : ಒಂದೇ ವಾರದಲ್ಲಿ 1.18 ಹೆಕ್ಟೇರ್ ಬೆಳೆ ಹಾನಿ, ಹಲವು ಸೇತುವೆ ಮುಳುಗಡೆ
ಶಾಸಕರಾದ ಪ್ರಭು ಚೌಹಾಣ್, ಡಾ.ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಮುಖಂಡರಾದ ಈಶ್ವರ್ ಸಿಂಗ್ ಠಾಕೂರ್, ಶಶಿಧರ ಹೊಸಳ್ಳಿ, ಬಾಬು ವಾಲಿ ರಘುನಾಥರಾವ್ ಮಲ್ಕಾಪುರೆ, ಗುರುನಾಥ ಜ್ಯಾಂತಿಕರ್ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.