ಕಾಡು ಪ್ರಾಣಿಗಳ ಹಾವಳಿಗೆ ಬೇಸತ್ತಿರುವ ರೈತರು ಸೋಲಾರ್ ತಂತಿ, ಹಳೆ ಸೀರೆಗಳ ಮೊರೆ ಹೋಗಿದ್ದು, ಬೆಳೆ ರಕ್ಷಣೆಗೆ ಹರಸಾಹಸ ಪಡುವಂತಾಗಿದೆ.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ರೈತರು ಸೋಯಾ ಅವರೆ, ಹೆಸರು, ಉದ್ದು, ತೊಗರಿ, ಹತ್ತಿ ಸೇರಿದಂತೆ ಇತರೆ ಬೆಳೆ ಬಿತ್ತನೆ ಮಾಡಿದ್ದಾರೆ. ಆದರೆ, ಕಾಡುಹಂದಿ, ಕೃಷ್ಣಮೃಗ, ಜಿಂಕೆಗಳು ಸೇರಿ ಇತರ ಪ್ರಾಣಿಗಳ ಹಿಂಡು ರೈತರ ಜಮೀನಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬಹುತೇಕ ಹಳ್ಳಿಗಳಲ್ಲಿ ರೈತರು ಹೊಲದ ಸುತ್ತಲೂ ಹಳೆ ಸೀರೆ, ಬೊಂಬೆ, ಖಾಲಿ ಬಾಟಲಿಗಳನ್ನು ಕಟ್ಟುತ್ತಿದ್ದಾರೆ. ಇನ್ನು ಕೆಲ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಸೋಲಾರ್ ತಂತಿ ಅಳವಡಿಸಿ ಬೆಳೆ ಸಂರಕ್ಷಣೆಗೆ ಮುಂದಾಗಿದ್ದಾರೆ. ಮಳೆಯ ಕೊರತೆ ಒಂದೆಡೆಯಾದರೆ, ಬೆಳೆ ಹಾಳಾಗದಂತೆ ನೋಡಿಕೊಳ್ಳುವುದೇ ಅವರಿಗೆ ಇನ್ನೊಂದು ದೊಡ್ಡ ಸವಾಲಿನ ಕೆಲಸವಾಗಿದೆ.

ರಾತ್ರಿ, ಹಗಲು ಎನ್ನದೆ ಜಮೀನಿಗೆ ನುಗ್ಗುವ ಕಾಡು ಹಂದಿ, ಜಿಂಕೆಗಳು ಚಿಗುರೊಡೆದ ಮೊಳಕೆಯ ಎಲೆ ತಿಂದು ಹಾಳು ಮಾಡುತ್ತಿವೆ. ಹೊಲದ ಕಟ್ಟೆ ಸುತ್ತಲೂ ಸೀರೆಗಳನ್ನು ಕಟ್ಟಿದರೆ ಬರುವುದಿಲ್ಲ ಅಂದುಕೊಂಡಿ ಉಪಾಯ ಮಾಡುತ್ತಿದ್ದಾರೆ. ಆದರೆ, ಸೀರೆ ಕಟ್ಟಿದರೂ ಅಂಜದ ಪ್ರಾಣಿಗಳು ಮತ್ತೆ ಬೆಳೆ ನಾಶಪಡಿಸುತ್ತಿವೆ. ಹಣವಿದ್ದವರು 15 ರಿಂದ 20 ಸಾವಿರ ಹಣ ಖರ್ಚು ಮಾಡಿ ಹೊಲದ ಸುತ್ತಲೂ ಕಬ್ಬಿಣ ತಂತಿ ಬಿಗಿದು ಸೋಲಾರ್ ಅಳವಡಿಸಿಕೊಂಡು ಬೆಳೆ ರಕ್ಷಿಸಿಕೊಳ್ಳುವ ಪರಿಸ್ಥಿತಿ ಬಂದಿದೆ.
ಕಾಡು ಹಂದಿ, ಜಿಂಕೆ ಇತರೆ ವನ್ಯಜೀವಿ ಸೀರೆ, ಗೊಂಬೆ ಕಂಡರೆ ಮನುಷ್ಯರು ಜಮೀನಿನಲ್ಲಿ ಇದ್ದಾರೆ ಎಂಬ ಆತಂಕ ಅವುಗಳಿಗೆ ಕಾಡುತ್ತದೆ. ಹೀಗಾಗಿ ಹೊಲದಲ್ಲಿ ನುಗ್ಗುವುದಿಲ್ಲ ಎಂಬುದು ಅನ್ನದಾತರ ಲೆಕ್ಕಾಚಾರ. ಆದರೆ ಸೀರೆ, ಗೊಂಬೆ ಸೋಲಾರ್ ಬೇಲಿಗೆ ಭಯಪಡದ ಪ್ರಾಣಿಗಳು ಬೆಳೆ ಜಮೀನಿಗೆ ನುಸುಳಿ ತಿನ್ನುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಔರಾದ್ ತಾಲ್ಲೂಕಿನ ಚಟ್ನಾಳ, ಜೀರ್ಗಾ, ಶೆಂಬೆಳ್ಳಿ, ಮಸ್ಕಲ್, ಚಿಂತಾಕಿ, ವಡಗಾಂವ, ಬಸವಕಲ್ಯಾಣ ತಾಲ್ಲೂಕಿನ ಮಂಠಾಳ, ಮುಡಬಿ, ಭಾಲ್ಕಿ ತಾಲ್ಲೂಕಿನ ನಿಟ್ಟೂರ, ಹೊನ್ನೆಕೇರಿ, ಬಾಳುರ ಸೇರಿದಂತೆ ಜಿಲ್ಲೆಯ ನಾನಾ ಕಡೆ ಜಿಂಕೆ, ಕಾಡು ಹಂದಿಗಳ ಕಾಟ ವಿಪರೀತವಾಗಿದೆ. ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ರೈತರು ಹಲವಾರು ಉಪಾಯಗಳನ್ನು ಮಾಡುತ್ತಿದ್ದಾರೆ. ಆದರೂ ಬೆಳೆ ರಕ್ಷಣೆ ಆಗುತ್ತಿಲ್ಲ. ಬಿತ್ತನೆಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿದ ರೈತರು ನಿರೀಕ್ಷಿತ ಫಸಲು ಕೈಗೆ ಬಾರದೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಗೋಳು ತೋಡಿಕೊಳ್ಳುತ್ತಿದ್ದಾರೆ.

ಬಿತ್ತನೆ ಬೀಜ, ರಸಗೊಬ್ಬರ ಅಲ್ಲದೆ ಉತ್ತಮವಾಗಿ ಬೆಳೆ ಬರಲಿ ಅಂದುಕೊಂಡು ಕೃಷಿ ಕಾರ್ಮಿಕರನ್ನು ಬಳಸಿಕೊಂಡು ಕಳೆ ಕೀಳಲಾರಂಭಿಸಿದ್ದಾರೆ. ಆದರೆ, ಪ್ರಾಣಿಗಳ ಕಾಟ ವಿಪರೀತ ಇರುವ ಕಾರಣಕ್ಕೆ ಉಳುಮೆಗೆ ಮಾಡಿದ ಖರ್ಚು ವಾಪಸ್ ಬರುತ್ತದೆಯೋ ಇಲ್ಲ ಎಂಬ ಆತಂಕ ತೀವ್ರವಾಗಿ ಕಾಡುತ್ತಿದೆ.
ಔರಾದ್ ತಾಲ್ಲೂಕಿನ ರೈತ ಬಸವರಾಜ ಮಾತನಾಡಿ, ʼಪ್ರತಿವರ್ಷ ಕಾಡು ಹಂದಿ, ಜಿಂಕೆಗಳ ಹಿಂಡು ಹೊಲಕ್ಕೆ ನುಗ್ಗಿ ಬೆಳೆ ಹಾನಿ ಮಾಡುತ್ತವೆ. ಹೀಗಾಗಿ ಹಳೆ ಸೀರೆ ಕಟ್ಟುವುದು, ಸೋಲಾರ್ ಬೇಲಿ ಹಾಕಲಾಗಿದೆ. ಆದರೂ ಪ್ರಾಣಿಗಳ ಹಾವಳಿ ಇನ್ನೂ ಕಡಿಮೆ ಆಗಿಲ್ಲ, ಇದರಿಂದಾಗಿ ಸಾವಿರಾರು ರೂಪಾಯಿ ಹಣ ಹಾಳಾಗುತ್ತಿದೆ. ಸಾಕಷ್ಟು ಪ್ರಯತ್ನದಿಂದ ಬೆಳೆ ಉಳಿಸಿಕೊಂಡರೆ, ಬೆಲೆ ಸಿಗದೆ ಕಂಗಾಲಾಗುವಂತಾಗಿದೆ. ಸರ್ಕಾರಗಳು ಬೆಂಬಲ ಬೆಲೆ ಕೊಡದೇ ಇರುವುದರಿಂದ ರೈತರ ಬದುಕು ಶೋಚನೀಯವಾಗಿದೆʼ ಎಂದು ದೂರುತ್ತಾರೆ.
ಸೋಲಾರ್ ಬೇಲಿಯಿಂದ ಅಪಾಯವಿಲ್ಲ :
ಹೊಲಗಳಿಗೆ ವಿದ್ಯುತ್ ತಂತಿ ಅಳವಡಿಕೆ ದುಬಾರಿ ಹಾಗೂ ಅಪಾಯಕಾರಿಯೂ ಹೌದು. ಆದರೆ ಸೌರಶಕ್ತಿ ಬೇಲಿಯಿಂದ ಯಾವುದೇ ಜೀವಕ್ಕೂ ಅಪಾಯವಿಲ್ಲ. ಪ್ರಾಣಿಗಳು ಶಾಕ್ ತಗುಲಿ ತಕ್ಷಣ ಓಡಿ ಹೋಗುತ್ತವೆ. ಹೀಗಾಗಿ ಹೊಲದ ಸುತ್ತಲೂ ಮರದ ಕಟ್ಟಿಗೆಗಳನ್ನು ನೆಟ್ಟು ಕಬ್ಬಿಣ ತಂತಿ ಎಳೆದು ಸೋಲಾರ್ ಕನೆಕ್ಸನ್ ಕೊಡಲಾಗುತ್ತದೆ ಎಂದು ರೈತರು ವಿವರಿಸುತ್ತಾರೆ.

ರಾತ್ರಿ ಹೊತ್ತಿನಲ್ಲಿ ಕಾಡುಪ್ರಾಣಿಗಳು ಹೊಲಗಳಿಗೆ ಲಗ್ಗೆ ಇಟ್ಟು ಬೆಳೆ ನಾಶಪಡಿಸುತ್ತಿವೆ. ಹೀಗಾಗಿ ಸೀರೆ ಕಟ್ಟಿದರೂ, ಸೋಲಾರ್ ಅಳವಡಿಸಿದರೂ ಕಾಡುಪ್ರಾಣಿಗಳ ಉಪಟಳ ಮಾತ್ರ ನಿಲ್ಲುತ್ತಿಲ್ಲ. ಅನೇಕ ಕಡೆ ರೈತರು ರಾತ್ರಿ ಜಮೀನಿನಲ್ಲಿಯೇ ಉಳಿದು ಬೆಳೆ ರಕ್ಷಿಸುವ ಸಾಹಸ ಮಾಡುತ್ತಿರುವುದು ಕಾಣಬಹುದು. ದುಬಾರಿ ಹಣ ವ್ಯಯಿಸಿ ಅಳವಡಿಸಲಾದ ಸೋಲಾರ್ ಪ್ಲೇಟ್, ಬ್ಯಾಟರಿ ಕಳ್ಳರ ಪಾಲಾಗಿದೆ ಎಂದು ಹೇಳುತ್ತಾರೆ ರೈತ ಈರಯ್ಯಾ ಸ್ವಾಮಿ.
ಬೆಳೆ ನಾಶ : ಎರಡು ಬಾರಿ ಬಿತ್ತನೆ :
ಯುವ ರೈತ ನಾಗನಾಥ ವಡಗಾಂವ ಮಾತನಾಡಿ, ʼಮುಂಗಾರು ಹಂಗಾಮಿನಲ್ಲಿ ಸೋಯಾ ಅವರೆ ಬಿತ್ತನೆ ಮಾಡಲಾಗಿತ್ತು. ಆದರೆ, ನೂರಾರು ಸಂಖ್ಯೆಯಲ್ಲಿ ನುಗ್ಗಿದ ಜಿಂಕೆಗಳ ಹಿಂಡು ಬೆಳೆ ನಾಶಪಡಿಸಿತು. ಹೀಗಾಗಿ ಮತ್ತೊಮ್ಮೆ ಬಿತ್ತನೆ ಮಾಡುವ ಸ್ಥಿತಿ ಬಂದಿತು. ಜಿಂಕೆ, ಕಾಡು ಹಂದಿಗಳಿಂದ ಸೋಯಾ ಬೆಳೆ ರಕ್ಷಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಅರಣ್ಯ ಇಲಾಖೆ ರೈತರ ನೆರವಿಗೆ ಧಾವಿಸಬೇಕುʼ ಎಂದು ಆಗ್ರಹಿಸಿದರು.
ʼಕಾಡುಪ್ರಾಣಿಗಳ ಹಾವಳಿಯಿಂದ ಜಿಲ್ಲೆಯಲ್ಲಿ ರೈತರ ಬೆಳೆಗಳು ಹಾಳು ಆಗುತ್ತಿರುವ ಬಗ್ಗೆ ಅನೇಕ ಬಾರಿ ಅರಣ್ಯ ಇಲಾಖೆಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶಾಶ್ವತ ಪರಿಹಾರ ಒದಗಿಸುತ್ತಿಲ್ಲ. ಕಾಡಿನಲ್ಲಿ ವನ್ಯಜೀವಿಗೆ ಆಹಾರದ ಕೊರತೆ ಎದುರಾಗಿ ಜಮೀನಿಗೆ ಬರುವ ಸಾಧ್ಯತೆಯಿದ್ದು, ಇದನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕು. ರೈತರಿಗೆ ವನ್ಯಜೀವಿಗಳ ಕಾಟ ತಪ್ಪಿಸಿ ಅವರಿಗೆ ಆರ್ಥಿಕ ಹೊರೆ ಆಗದಂತೆ ಎಚ್ಚವಹಿಸುವುದು ಇಲಾಖೆಯ ಜವಾಬ್ದಾರಿ ಆಗಿದೆʼ ಎಂದು ಬಸವಕಲ್ಯಾಣದ ರೈತ ಮುಖಂಡ ರುದಯ್ಯಾ ಸ್ವಾಮಿ ಹೇಳುತ್ತಾರೆ.
ಮಳೆ ಕೊರತೆಯಿಂದ ಬಾಡುತ್ತಿರುವ ಬೆಳೆ :
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಉತ್ತಮ ಮಳೆಯಾಗಿದ್ದರಿಂದ ಈ ಬಾರಿ ರೈತರು ಹರ್ಷದಿಂದಲೇ ಸೋಯಾ ಅವರೆ, ಹೆಸರು, ಉದ್ದು, ಹತ್ತಿ ಹಾಗೂ ತೊಗರಿ ಬಿತ್ತನೆ ಮಾಡಿದ್ದರು. ಬೆಳೆಯೂ ಚೆನ್ನಾಗಿ ಕಾಣಿಸಿಕೊಂಡಿದೆ. ಎಲ್ಲೆಡೆ ಕಳೆ ಕೀಳುವುದು, ಔಷಧ ಸಿಂಪಡಣೆ ಕೆಲಸ ಭರದಿಂದ ಸಾಗುತ್ತಿದೆ. ಜೂನ್ ತಿಂಗಳಲ್ಲಿ ಶೇ 49ರಷ್ಟು ಮಳೆ ಕೊರತೆಯಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದಕ್ಕೆ ಸದ್ಯ ತೇವಾಂಶ ಕೊರತೆ ಎದುರಾಗಿದೆ. ಆದರೆ ಆಗಾಗ ಸಣ್ಣ ಮಳೆ ಆಗುತ್ತಿರುವುದರಿಂದ ಬೆಳೆಗಳಿಗೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಎತ್ತುಗಳ ಕೊರತೆ :
ಜಮೀನಿನಲ್ಲಿ ಕಳೆ ತೆಗೆಯಲು ಎತ್ತುಗಳು ಸಿಗದ ಕಾರಣ ರೈತರು ಸೈಕಲ್ ಎಡೆ ಬಳಸುತ್ತಿದ್ದಾರೆ. ಈ ಹಿಂದೆ ಪ್ರತಿ ಗ್ರಾಮದಲ್ಲಿ ಹತ್ತಾರು ಜೋಡಿ ಎತ್ತುಗಳಿದ್ದವು. ಈಗ ಬಹುತೇಕ ಹಳ್ಳಿಗಳಲ್ಲಿ ಎತ್ತುಗಳ ಜಾಗವನ್ನು ಟ್ರ್ಯಾಕ್ಟರ್‌ಗಳು ಆಕ್ರಮಿಸಿಕೊಂಡಿದ್ದು, ಎತ್ತುಗಳ ಸಂಖ್ಯೆ ಜೊತೆಗೆ ಕೃಷಿಯಲ್ಲಿ ತೊಡಿಸಿಕೊಳ್ಳುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ.
ಬೆಳೆಯಲ್ಲಿನ ಕಳೆ ತೆಗೆಯಲು ಕೃಷಿ ಕಾರ್ಮಿಕರ ಕೊರತೆ, ಎಡೆ ಹೊಡೆಯಲು ಎತ್ತುಗಳ ಕೊರತೆ ಇದ್ದೇ ಇದೆ. ಇದರಿಂದಾಗಿ ರೈತರು ಸೈಕಲ್ ಎಡೆ ಬಳಸಿ ತಮ್ಮ ಹೊಲದಲ್ಲಿನ ಕಳೆ ತೆಗೆಯುವ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಸೈಕಲ್ ಎಡೆ ಹೊಡೆಯಲು ಯಾವುದೇ ಖರ್ಚಿಲ್ಲ. ಓರ್ವ ಕಾರ್ಮಿಕ ಸೈಕಲ್ ಎಡೆ ಬಳಸಿ ದಿನಕ್ಕೆ ಕನಿಷ್ಠ ಒಂದು ಎಕರೆ ಪ್ರದೇಶ ಕಳೆ ತೆಗೆಯಬಹುದು ಎನ್ನುತ್ತಾರೆ ರೈತ ಸಂಜುರೆಡ್ಡಿ.
ಇದನ್ನೂ ಓದಿ : ಬೀದರ್ | ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ
ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ವಿನಯ ಮಾಳಗೆ ಮಾತನಾಡಿ, ʼಜಿಲ್ಲೆಯಲ್ಲಿ ಹುಲ್ಲುಗಾವಲು ಪ್ರದೇಶದ ಅತಿಕ್ರಮಣ, ಗೋಮಾಳ, ಗಾಯರಣ ಜಮೀನು ಭೂಗಳ್ಳರ ಪಾಲಾಗುತ್ತಿದೆ. ತ್ವರಿತ ಗತಿಯಲ್ಲಿ ಆಗುತ್ತಿರುವ ಭೂ ಬಳಕೆ ಬದಲಾವಣೆಯಿಂದ ಕೃಷ್ಣಮೃಗ, ಜಿಂಕೆ ಸೇರಿದಂತೆ ಇತರ ವನ್ಯಜೀವಿ ಆವಾಸಸ್ಥಾನ ಜಾಗ ದಿನೇ ದಿನೇ ಕಡಿಮೆಯಾಗುತ್ತಿದೆ. ಇದರಿಂದ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಳವಾಗುತ್ತಿದೆ. ಕೃಷ್ಣಮೃಗ, ಜಿಂಕೆಗಳ ಸಂಖ್ಯೆ ಹೆಚ್ಚಳವಾದರೆ ಅರಣ್ಯ ಇಲಾಖೆ ಅವುಗಳನ್ನು ಸೆರೆ ಹಿಡಿದು ಸಂರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ ಬೆಳೆ ಹಾಗೂ ಜಿಂಕೆಗಳನ್ನು ಸಂರಕ್ಷಿಸಬೇಕುʼ ಎಂದು ಹೇಳಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.