ಮೇಲಾಧಿಕಾರಿಗಳ ಕಿರುಕುಳ ಹಾಗೂ ಕೆಲಸದ ಒತ್ತಡದಿಂದ ಮನನೊಂದು ಬಸವಕಲ್ಯಾಣ ತಾಲೂಕಿನ ಹಳ್ಳಿ ಮತ್ತು ಉಮಾಪುರ ಗ್ರಾಮ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿ ಮಹಾದೇವ ಉದ್ದವ ಆತ್ಮಹತ್ಯೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಶುಕ್ರವಾರ ಬಸವಕಲ್ಯಾಣ ತಹಸೀಲ್ ಕಚೇರಿ ಮುಂಭಾಗದಲ್ಲಿ ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯಾಧ್ಯಕ್ಷ ಯೋಗೇಶ ನಾಯಕ್ ಮಾತನಾಡಿ, “ಸಹೋದ್ಯೋಗಿ ಮಹಾದೇವ ಅವರು ಒಂದು ವರ್ಷದ ಹಿಂದೆಯಷ್ಟೇ ಅವರು ಕರ್ತವ್ಯಕ್ಕೆ ಸೇರಿದ್ದರು. ಕೆಲಸದಲ್ಲಿ ಶೇ 50ರಷ್ಟು ಪ್ರಗತಿ ಸಾಧಿಸಿದರೂ ಬಸವಕಲ್ಯಾಣ ತಹಸೀಲ್ದಾರ್ ದತ್ತಾತ್ರೇಯ ಗಾದಾ ಅವರು ಹೆಚ್ಚಿನ ಒತ್ತಡ ನೀಡಿದ್ದಾರೆ. ಪ್ರಗತಿ ಸಾಧಿಸದಿದ್ದರೆ ಅಮಾನತು ಮಾಡುವುದಾಗಿ ಕಿರುಕುಳ ನೀಡಿದಕ್ಕೆ ಮಹಾದೇವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಬಸವಕಲ್ಯಾಣ ತಹಸೀಲ್ದಾರ್ ಅವರು ಅವೈಜ್ಞಾನಿಕವಾಗಿ ಕೆಲಸದ ಗುರಿಯನ್ನು ನಿಗದಿಪಡಿಸುವುದು, ರಾತ್ರಿ ಸಭೆ ನಡೆಸುವುದು ಮಹಾದೇವ ಅವರಿಗೆ ಬೆದರಿಕೆ ಹಾಕಿದ್ದಾರೆ. ಕಚೇರಿ ಸಮಯ ಹೊರತುಪಡಿಸಿ ಕೆಲಸ ಮಾಡುವಂತೆ ಒತ್ತಡ ಹೇರಿದಕ್ಕೆ ಮಹಾದೇವ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ತಹಸೀಲ್ದಾರ್ ಅವರ ಕಿರುಕುಳವೇ ನೇರ ಕಾರಣವಾಗಿದೆ” ಎಂದು ದೂರಿದರು.
ಗ್ರಾಮ ಆಡಳಿತ ಅಧಿಕಾರಿ ಮಹಾದೇವ ಆತ್ಮಹತ್ಯೆಗೆ ನೇರ ಕಾರಣರಾದ ಬಸವಕಲ್ಯಾಣ ತಹಸೀಲ್ದಾರ್ ದತ್ತಾತ್ರೇಯ ಗಾದಾ ಅವರನ್ನು ಕೂಡಲೇ ಅಮಾನತುಗೊಳಿಸಿ ಸ್ಥಳದಿಂದ ಬೇರೆಡೆ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಈ ಹೋರಾಟ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಸಹಾಯಕ ಆಯುಕ್ತ ಪ್ರಕಾಶ ಕುದರಿ ಭೇಟಿ ನೀಡಿದರು. ಆದರೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಭೇಟಿ ನೀಡಿ ನಮಗೆ ನ್ಯಾಯ ಕೊಡಿಸಬೇಕೆಂದು ಪಟ್ಟು ಹಿಡಿದರು. ಹೀಗಾಗಿ ಈ ಪ್ರತಿಭಟನೆ ನಾಳೆಯೂ ಮುಂದುವರೆಯಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಬೀದರ್ | 4.12 ಲಕ್ಷ ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆ ಗುರಿ : ಬೀಜ, ರಸಗೊಬ್ಬರ ಕೊರತೆ ಇಲ್ಲ
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಬ್ರುವಾಹನ ಬೆಳಮಗಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಜಿಲ್ಲೆಯ ಗ್ರಾಮ ಆಡಳಿತ ಅಧಿಕಾರಿಗಳು ಪಾಲ್ಗೊಂಡಿದ್ದರು.





