ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮದ 2ನೇ ವಾರ್ಡ್ನಲ್ಲಿ ಸ್ವಚ್ಛತೆ ಹಾಗೂ ಮೂಲಸೌಕರ್ಯಗಳ ಕೊರತೆ ಜನರನ್ನು ಹೈರಾಣಾಗಿಸಿದೆ. ಹೂಳು ತುಂಬಿದ ಚರಂಡಿಗಳಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ದುರ್ನಾತ, ಸೊಳ್ಳೆಗಳ ಕಾಟ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿಯ ನಡುವೆಯೇ ಜನರು ಬದುಕುವಂತಾಗಿದೆ. ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಗ್ರಾಮದಲ್ಲೇ ನೈರ್ಮಲ್ಯಕ್ಕೆ ಆದ್ಯತೆ ದೊರೆಯದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದ ಪ್ರಮುಖ ಚರಂಡಿಗಳನ್ನು ಹಲವು ತಿಂಗಳಿಂದ ಸ್ವಚ್ಛಗೊಳಿಸದ ಪರಿಣಾಮ ಕಸ, ಕೆಸರು ಹಾಗೂ ಹೂಳಿನಿಂದ ತುಂಬಿಕೊಂಡಿವೆ. ಇದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೆ ರಸ್ತೆಗಳ ಮೇಲೆ ಹರಡುತ್ತಿದೆ. ಮಳೆ ಬಂದಾಗ ಚರಂಡಿ ನೀರು ಮನೆಗಳಿಗೆ ನುಗ್ಗುವ ಆತಂಕ ಎದುರಾಗುತ್ತಿದೆ. ರಸ್ತೆ ಮೇಲೆ ಹರಿಯುವ ಕೊಳಚೆ ನೀರಿನಿಂದ ಸಾರ್ವಜನಿಕರ ಸಂಚಾರಕ್ಕೂ ತೀವ್ರ ತೊಂದರೆಯಾಗುತ್ತಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ದುರ್ನಾತ ಹರಡುತ್ತಿದ್ದು, ಸೊಳ್ಳೆಗಳ ಉತ್ಪತ್ತಿಯಿಂದ ಆರೋಗ್ಯದ ಸಮಸ್ಯೆಗಳು ಎದುರಾಗುವ ಭೀತಿ ಹೆಚ್ಚಾಗಿದೆ.

ಗ್ರಾಮದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾದ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸದೆ ಪಾಳು ಬಿದ್ದಿದೆ. ಮತ್ತೊಂದೆಡೆ, ಜಲ ಜೀವನ್ ಮಿಷನ್ ಯೋಜನೆಯಡಿ ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದ್ದರೂ ಜನರಿಗೆ ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಗ್ರಾಮಸ್ಥರ ಆರೋಪವಾಗಿದೆ.

ಕೆಲವೆಡೆ ಕೊಳಚೆ ನೀರು ಹರಿಯುವ ಚರಂಡಿಗಳಲ್ಲಿಯೇ ಕುಡಿಯುವ ನೀರಿನ ಪೈಪ್ಗಳು ಹಾದುಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ಪೈಪ್ಗಳಲ್ಲಿ ಸೋರಿಕೆ ಉಂಟಾದರೆ ಕುಡಿಯುವ ನೀರು ಕಲುಷಿತಗೊಳ್ಳುವ ಅಪಾಯವಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನೀರಿನ ಗುಣಮಟ್ಟ ಪರೀಕ್ಷಿಸುವುದರ ಜತೆಗೆ ನೀರಿನ ಘಟಕವನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಹೋಬಳಿ ಕೇಂದ್ರವಾಗಿರುವ ನಿಟ್ಟೂರ(ಬಿ) ಗ್ರಾಮದಲ್ಲಿ ಅಂಚೆ ಕಚೇರಿ, ಬ್ಯಾಂಕ್, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸೇರಿದಂತೆ ಹಲವು ಸಂಸ್ಥೆಗಳಿವೆ. ಕಂದಾಯ ಇಲಾಖೆಯ ವಿವಿಧ ಕೆಲಸಗಳಿಗಾಗಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಇಲ್ಲಿನ ಅಟಲ್ಜೀ ಸ್ನೇಹಿ ಕೇಂದ್ರಕ್ಕೆ ಆಗಮಿಸುತ್ತಾರೆ. ಪ್ರತಿ ಶುಕ್ರವಾರ ನಡೆಯುವ ವಾರದ ಸಂತೆಗೆ ಸಾವಿರಕ್ಕೂ ಅಧಿಕ ಜನರು ಸೇರುತ್ತಾರೆ.

ಇಷ್ಟೆಲ್ಲ ಜನಸಂಚಾರವಿರುವ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ಗಂಭೀರ ಸಮಸ್ಯೆಯಾಗಿದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಶೌಚಕ್ಕಾಗಿ ಪರದಾಡುವಂತಾಗಿದೆ. ವಾರದ ಸಂತೆ ಹಾಗೂ ಸರ್ಕಾರಿ ಕೆಲಸಗಳಿಗಾಗಿ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳೊಂದಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕೆಂಬ ಬೇಡಿಕೆ ಕೇಳಿಬಂದಿದೆ.
ಗ್ರಾಮದ ಹಲವು ಸಿ.ಸಿ. ರಸ್ತೆಗಳ ಅಕ್ಕಪಕ್ಕದಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ತ್ಯಾಜ್ಯ ವಿಲೇವಾರಿಗೆ ವಾಹನಗಳಿದ್ದರೂ ಅವುಗಳನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ಮಳೆಗಾಲದಲ್ಲಿ ಬಡಾವಣೆಗಳ ರಸ್ತೆಗಳ ಮೇಲೆ ಸಂಚರಿಸುವುದೇ ಕಷ್ಟವಾಗಿದ್ದು, ನಿವಾಸಿಗಳು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
“ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಚರಂಡಿ ಸ್ವಚ್ಛಗೊಳಿಸುವ ಕೆಲಸ ನಡೆದಿಲ್ಲ. ಕೆಲವು ಕಡೆ ಕುಡಿಯುವ ನೀರಿನ ಪೈಪ್ಗಳು ಕೊಳಚೆ ನೀರಿನ ಮಧ್ಯದಲ್ಲಿವೆ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ” ಎಂದು ಗ್ರಾಮಸ್ಥ ಅನೀಲ ಬಿರಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ನಿಟ್ಟೂರ(ಬಿ)ಯಲ್ಲೇ ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಸ್ಥಿತಿ ಹದಗೆಟ್ಟಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಚರಂಡಿಗಳಲ್ಲಿನ ಹೂಳು ತೆರವುಗೊಳಿಸುವುದು, ಕೊಳಚೆ ನೀರಿನ ಸರಾಗ ಹರಿವಿಗೆ ವ್ಯವಸ್ಥೆ ಕಲ್ಪಿಸುವುದು, ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸುವುದು ಹಾಗೂ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕಗೊಳಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ಜಾವೀದ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಖಾಸಗಿ ಬಸ್ಗಳ ದುಬಾರಿ ಟಿಕೆಟ್ ದರಕ್ಕೆ ಕಡಿವಾಣ ಹಾಕಿ





