ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಬೀದರ್ ತಾಲ್ಲೂಕಿನ ಚಿಮಕೋಡ ಗ್ರಾಮದ ಹಿರಿಯ ಜಾನಪದ ಕಲಾವಿದ ದೇವಿದಾಸ ಚಿಮಕೋಡೆ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
56 ವರ್ಷದ ದೇವಿದಾಸ ಚಿಮಕೋಡೆ ಅವರು ಕಳೆದ 35 ವರ್ಷಗಳಿಂದ ಜಾನಪದ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಾನಪದ ಗಾಯನ, ವಾದನ, ಸುಗ್ಗಿ ಕುಣಿತ, ಹಲಗೆ ಸೇರಿದಂತೆ ವಿವಿಧ ಜನಪದ ಕಲಾ ಪ್ರಕಾರಗಳಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ, ಬೀದರ್ ಜಿಲ್ಲೆಯಿಂದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
“ಹಳ್ಳಿ-ಹಳ್ಳಿಗಳಲ್ಲಿ ಜಾನಪದ ಕಲೆಯನ್ನು ಪಸರಿಸುವ ಮೂಲಕ ಜನಪದ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿರುವ ದೇವಿದಾಸ ಚಿಮಕೋಡೆ ಅವರಿಗೆ ರಾಜ್ಯಮಟ್ಟದ ಗೌರವ ಲಭಿಸಿರುವುದು ಬೀದರ್ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ” ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ತಿಳಿಸಿದ್ದಾರೆ.
“ಸುಮಾರು 35 ವರ್ಷಗಳಿಂದ ನಿರಂತರವಾಗಿ ಜಾನಪದ ಕ್ಷೇತ್ರಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಅವರ ಸಾಧನೆ ಸ್ಮರಣೀಯ. ಹಿರಿಯ ಕಲಾವಿದರಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತಿರುವುದು ಅವರ ದೀರ್ಘಕಾಲದ ಕಲಾಸೇವೆಗೆ ಸಂದ ಗೌರವವಾಗಿದೆ. ಈ ಪ್ರಶಸ್ತಿಯಿಂದ ಜಿಲ್ಲೆಯ ಕೀರ್ತಿ ಹೆಚ್ಚುವುದರ ಜೊತೆಗೆ ಇತರ ಜಾನಪದ ಕಲಾವಿದರಿಗೂ ಪ್ರೋತ್ಸಾಹ ದೊರೆತಂತಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಕುರಿತು ʼಈದಿನʼ ಜೊತೆ ಮಾತನಾಡಿದ ದೇವಿದಾಸ ಚಿಮಕೋಡೆ, “ನನ್ನ ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಅದರಲ್ಲೂ ನಮ್ಮ ಜಿಲ್ಲೆಯವರೇ ಆದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಅವರ ಪ್ರಯತ್ನದ ಫಲವಾಗಿ ಈ ಗೌರವ ದೊರೆತಿರುವುದು ಹೆಮ್ಮೆಯ ಸಂಗತಿ. ಪೂರ್ವಜರಿಂದ ಬಂದ ಕಲೆಯನ್ನು ಮೈಗೂಡಿಸಿಕೊಂಡು, ಎಲೆಮರೆಯ ಕಾಯಿಯಂತೆ ಜಾನಪದ ಕಲಾಸೇವೆ ಮಾಡುತ್ತಿರುವ ನನ್ನನ್ನು ಗುರುತಿಸಿರುವುದು ಬದುಕಿನ ಸಾರ್ಥಕತೆಯ ಭಾವ ಮೂಡಿಸಿದೆ” ಎಂದು ಸಂತಸ ಹಂಚಿಕೊಂಡರು.






