ಬೀದರ್ ತಾಲೂಕಿನ ಬಗದಲ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದ ಲಕ್ಷ್ಮಿ @ ಮಾಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಓರ್ವ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಅನೀಲಕುಮಾರ ಪ್ರಭು ಖರ್ತಾಮಾಳ ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ. ಇದೇ ಪ್ರಕರಣದ ಇಬ್ಬರು ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯವು ಬಿಡುಗಡೆ ಮಾಡಿ ತೀರ್ಪು ನೀಡಿದೆ.
ಪ್ರಕರಣ ಏನು?
ಶಿಕ್ಷೆಗೊಳಗಾದ ಅನೀಲಕುಮಾರ ಪ್ರಭು ಖರ್ತಾಮಾಳ ಪತ್ನಿ ಮೃತ ಲಕ್ಷ್ಮಿ @ ಮಾಲಾ ಅವರೊಂದಿಗೆ ಮದುವೆಯಾದ ಬಳಿಕ ಕೆಲ ದಿನಗಳವರೆಗೆ ಮೃತಳನ್ನು ಸರಿಯಾಗಿ ನೋಡಿಕೊಂಡ, ನಂತರ ಆಕೆಯ ನಡತೆ ಕುರಿತು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆದು-ಬಡಿದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದನು.
ಈ ಸಂಬಂಧ 2018ರಲ್ಲಿ ಬಗದಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ನ್ಯಾಯಾಲಯದಲ್ಲಿ ರಾಜಿ ಸಂಧಾನ ಮಾಡಿಕೊಂಡು ಆರೋಪಿಗಳು ಆಕೆಯನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದರು. ಕೆಲದಿನಗಳ ಬಳಿಕ ಗಂಡ ಮತ್ತೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದು, ಮರಳಿ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದರಿಂದ ಮೃತಳು ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದರು.
2023ರ ಜೂನ್ 19ರಂದು ಬೆಳಿಗ್ಗೆ ಸುಮಾರು 8.30ಕ್ಕೆ ಮೃತ ಲಕ್ಷ್ಮಿ @ ಮಾಲಾ ಅವರು ತಮ್ಮ ಮಗಳೊಂದಿಗೆ ಆಟೋದಲ್ಲಿ ಗಂಡನ ಮನೆಗೆ ತೆರಳಿದಾಗ ಗಂಡ ಅನೀಲಕುಮಾರ ಹೆಂಡತಿಗೆ ಸಾಮಾನುಗಳನ್ನು ನೀಡುವುದಾಗಿ ಹೇಳಿ ಕೊಠಡಿಗೆ ಕರೆದುಕೊಂಡು ಹೋಗಿ, ಚೂರಿಯಿಂದ ಇರಿದು ಕೊಲೆ ಮಾಡಿರುವ ಕುರಿತು ಬಗದಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೀದರ್ ಗ್ರಾಮೀಣ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ ವಿ. ಅವರು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಬೀದರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸೈಯದ್ ಬಲಿಗುರ್ ರೆಹಮಾನ್ ಅವರು ಅಭಿಯೋಜನೆ ಹಾಜರುಪಡಿಸಿದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ, 1ನೇ ಆರೋಪಿ ಅನೀಲಕುಮಾರ ಪ್ರಭು ಈತನಿಗೆ ಭಾರತೀಯ ದಂಡ ಸಂಹಿತೆ ಕಲಂ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿದ್ದಾರೆ.
ಇದನ್ನೂ ಓದಿ : ಕಲ್ಯಾಣ ಕರ್ನಾಟಕ | 4,904 ಅಂಗನವಾಡಿ ಕೇಂದ್ರಕ್ಕಿಲ್ಲ ಸ್ವಂತ ಕಟ್ಟಡ: ಅಡುಗೆ ಕೋಣೆ, ಶೌಚಾಲಯ ಮರೀಚಿಕೆ
ದಂಡ ಪಾವತಿಸಲು ವಿಫಲವಾದಲ್ಲಿ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ನಾಗಪ್ಪ ಸಿ. ನಾಕಮನ್ ಅವರು ವಾದ ಮಂಡಿಸಿದ್ದರು.





