ಬೀದರ್ ನಗರದ ಸಮೀಪ 125 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸೂಕ್ತ ಸ್ಥಳ ಗುರುತಿಸಿದ ಬಳಿಕ ಸಚಿವ ಸಂಪುಟದ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ನಗರದ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಘೋಷವಾಕ್ಯದಡಿ ಆಯೋಜಿಸಿರುವ ರೋಟರಿ ಕ್ರಿಕೆಟ್ ಪ್ರೀಮಿಯರ್ ಲೀಗ್-3.0 ಟೂರ್ನಿಯ ಟ್ರೋಫಿ ಅನಾವರಣಗೊಳಿಸಿ ಶನಿವಾರ ಅವರು ಮಾತನಾಡಿದರು.
ಭಾಲ್ಕಿಯಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಜಿಲ್ಲೆಯಾದ್ಯಂತ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಎಲ್ಲ ಹೋಬಳಿಗಳಲ್ಲೂ ಕ್ರೀಡಾಂಗಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ₹10 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.
ಅತಿಯಾದ ಮೊಬೈಲ್ ಬಳಕೆಯಿಂದ ಯುವಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಯುವಕರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಶಾಸಕ ರಹೀಂಖಾನ್ ಮಾತನಾಡಿ, “ಬೀದರ್ ನಗರದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಸಹಕರಿಸಲಾಗುವುದು” ಎಂದರು.
ರೋಟರಿ ಕ್ಲಬ್ ಅಧ್ಯಕ್ಷೆ ಸ್ಫೂರ್ತಿ ಬಸವರಾಜ ಧನ್ನೂರ ಮಾತನಾಡಿ, “ಕ್ಲಬ್ ವತಿಯಿಂದ ₹25 ಲಕ್ಷ ವೆಚ್ಚದಲ್ಲಿ ವಿವಿಧ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲಾಗಿದೆ. ಕ್ಯಾನ್ಸರ್ ರೋಗಿಗಳಿಗೆ ನೆರವು ನೀಡುವ ಕಾರ್ಯವನ್ನೂ ಕೈಗೊಳ್ಳಲಾಗಿದೆ. ಕ್ರಿಕೆಟ್ ಟೂರ್ನಿಯಿಂದ ಸಂಗ್ರಹವಾಗುವ ಹಣವನ್ನು ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ಬಳಸಲಾಗುವುದು” ಎಂದು ತಿಳಿಸಿದರು.
ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಶುಕ್ರವಾರ ಬಲೂನ್ ಹಾರಿಬಿಡುವ ಮೂಲಕ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿದರು. ಇದೇ ವೇಳೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ ಸಾಕ್ಷಿ ಕೆ.ಡಾಯಿಜೋಡೆ ಅವರನ್ನು ಸನ್ಮಾನಿಸಲಾಯಿತು.

ಟೂರ್ನಿಯ ಸಮಾರೋಪ ಭಾನುವಾರ ನಡೆಯಲಿದೆ. ಒಟ್ಟು ಎಂಟು ತಂಡಗಳು ಪಾಲ್ಗೊಂಡಿದ್ದು, ವಿಜೇತ ತಂಡಕ್ಕೆ ₹50 ಸಾವಿರ ಹಾಗೂ ರನ್ನರ್ ಅಪ್ ತಂಡಕ್ಕೆ ₹25 ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು. ಲೀಗ್ ಹಂತದ ಪಂದ್ಯಗಳಲ್ಲಿ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು.
ಗುರುನಾನಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರ್ದಾರ್ ಬಲಬೀರಸಿಂಗ್, ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ ಕಾಮಶೆಟ್ಟಿ, ರೋಟರಿಯನ್ನರಾದ ರವಿ ಮೂಲಗೆ, ಹಾವಶೆಟ್ಟಿ ಪಾಟೀಲ, ಸುರೇಶ ಚನಶೆಟ್ಟಿ, ತರುಣ್ ನಾಗಮಾರಪಳ್ಳಿ, ಜಹೀರ್ ಅನ್ವರ್, ಶಿವಕುಮಾರ ಯಲಾಲ್, ವಸಂತ ಪವಾರ್, ಸೋಮಶೇಖರ ಬಿ. ಪಾಟೀಲ, ನಾಗರಾಜ ಕರ್ಪೂರ, ಮಂಜುನಾಥ ಹೂಗಾರ, ಸುವರ್ಣಾ ಧನ್ನೂರ, ಕೀರ್ತಿ ವಾಲೆ, ನೆಹಾಲ್ ಸಿಂಗ್, ಅಮಯ್ ಸಿಂದೋಲ್, ಪುನೀತ್ ಸಿಂಗ್, ಡಾ.ಸಂಗಮೇಶ ವಡಗಾಂವೆ, ಜೈಕಿಶನ್ ಬಿಯಾನಿ, ಕಿರಣ್ ಬೆಲ್ದಾಳೆ, ಅಶೋಕ ಹೆಬ್ಬಾಳೆ, ಗುರು ಸಿಂದೋಲ್, ಹರ್ಷದ್ ಪಟೇಲ್, ನಿಖಿಲ್ ಖಂಡ್ರೆ, ಶುಭಂ ಶರ್ಮಾ ಹಾಗೂ ದೀಪಕ್ ಪಾಂಚಾಳ್ ಉಪಸ್ಥಿತರಿದ್ದರು. ಕ್ಲಬ್ ಕಾರ್ಯದರ್ಶಿ ಅಭಿಷೇಕ ಚಿಂತಾಮಣಿ ಸ್ವಾಗತಿಸಿದರು. ಸಹನಾ ಪಾಟೀಲ ನಿರೂಪಿಸಿ, ವಂದಿಸಿದರು.
ಇದನ್ನೂ ಓದಿ : ಬೀದರ್ | ಅ.27, 28ರಂದು ಅಖಿಲ ಕರ್ನಾಟಕ 23ನೇ ಹಸ್ತಪ್ರತಿ ಸಮ್ಮೇಳನ





