ಬೀದರ್ ಜಿಲ್ಲೆಯಾದ್ಯಂತ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬೀದರ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆಯೆಂದು ಘೋಷಿಸಿ ರೈತರ ಹಿತ ಕಾಪಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಒತ್ತಾಯಿಸಿದೆ.
ಈ ಸಂಬಂಧ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ದಸಂಸ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ ಮಾತನಾಡಿ, “ಈ ವರ್ಷ ಮುಂಗಾರು ಮಳೆ ವಿಫಲವಾಗಿರುವುದರಿಂದ ರೈತರು ಬಿತ್ತನೆ ಮಾಡಿದ ಬೆಳೆಗಳು ಮಳೆಯ ಕೊರತೆಯಿಂದ ಒಣಗುತ್ತಿವೆ. ಬೀಜ, ಗೊಬ್ಬರ ಹಾಗೂ ಕೃಷಿ ಕಾರ್ಯಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವ ರೈತರು ಈಗ ಸಾಲದ ಹೊರೆ ಹೊತ್ತು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲ ರೈತರು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುವ ಆತಂಕವೂ ಎದುರಾಗಿದೆ” ಎಂದರು.
ರಾಜ್ಯ ಸರ್ಕಾರ ಕೂಡಲೇ ಬೀದರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಿ, ಜಿಲ್ಲೆಯ ಎಲ್ಲಾ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. 2025-26ನೇ ಸಾಲಿನ ಬರಗಾಲ ಘೋಷಣೆಯ ಸಂದರ್ಭದಲ್ಲಿ ಸರ್ಕಾರದಿಂದ ಮಂಜೂರಾದ ಬೆಳೆ ವಿಮೆ ಹಾಗೂ ಬರಪೀಡಿತ ಪರಿಹಾರದ ಹಣ ತಾಂತ್ರಿಕ ದೋಷಗಳಿಂದ ಜಿಲ್ಲೆಯ ಅನೇಕ ರೈತರ ಖಾತೆಗೆ ಇನ್ನೂ ಜಮೆಯಾಗಿಲ್ಲ. ಬಾಕಿ ಉಳಿದಿರುವ ಎಲ್ಲಾ ರೈತರಿಗೆ ಕೂಡಲೇ ಬೆಳೆ ವಿಮೆ ಹಾಗೂ ಬರಪೀಡಿತ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
ಕೃಷಿಯನ್ನೇ ನಂಬಿಕೊಂಡಿರುವ ರೈತ ಸಮುದಾಯವನ್ನು ಸಂಕಷ್ಟದಿಂದ ಪಾರು ಮಾಡಲು ಸರ್ಕಾರ ಯಾವುದೇ ವಿಳಂಬ ಮಾಡದೆ ಅಗತ್ಯ ಕ್ರಮಗಳನ್ನು ಕೈಗೊಂಡು ಆರ್ಥಿಕ ನೆರವು ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಬೀದರ್ | ಅಂಗವಿಕಲರ ಪಿಂಚಣಿ ಬಿಡುಗಡೆ ಆಗ್ರಹಿಸಿ ಧರಣಿ
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಯೋಜಕ ಹಾಗೂ ಸಂಚಾಲಕ ವಿಜಯಕುಮಾರ ಐಹೊಳೆ, ಅನೀಲಕುಮಾರ ಬಡಿಗೇರ್, ಗುಂಡಪ್ಪ ದಂಡೆ, ಔರಾದ ತಾಲ್ಲೂಕು ಸಂಚಾಲಕ ಜೈಪ್ರಕಾಶ ಅಷ್ಟೂರೆ ಹಾಗೂ ಮಲ್ಲಿಕಾರ್ಜುನ ಬಿರಾದಾರ ಉಪಸ್ಥಿತರಿದ್ದರು.





