ಚಾಮರಾಜನಗರ | ಸಾಗಡೆ ಗ್ರಾಮ ಪಂಚಾಯತಿ ಸಿಬ್ಬಂದಿಗಳ ಲಂಚದಾಹ; ‘ಇ-ಸ್ವತ್ತಿ’ಗಾಗಿ ಅಲೆದಾಟ

Date:

Advertisements

ಚಾಮರಾಜನಗರ ಜಿಲ್ಲೆಯ ಸಾಗಡೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂಗಾಕಿ ಗ್ರಾಮದ ಸ್ವಾಮಿ ಬಿನ್ ದೊಡ್ಡಮಾದಯ್ಯ ಎಂಬುವರು ಸತತವಾಗಿ 2024 ಜೂನ್ ತಿಂಗಳಿನಿಂದ, ಎಂದರೇ ಒಂದು ವರ್ಷಗಳಿಂದ ಖಾಲಿ ನಿವೇಶನ ಹಾಗೂ ಮನೆಗೆ ಇ-ಸ್ವತ್ತು ಮಾಡಿಕೊಡುವಂತೆ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿರುತ್ತಾರೆ. ಇದುವರೆಗೆ ಇ-ಸ್ವತ್ತು ಸಿಗಲಿಲ್ಲ. ಗ್ರಾಮ ಪಂಚಾಯತಿ ಪಿಡಿಓ ಸೇರಿದಂತೆ ಸಿಬ್ಬಂದಿ ಲಂಚವನ್ನು ಆನ್‌ಲೈನ್‌ ಮೂಲಕ ಪಡೆದುಕೊಂಡರೆ ಹೊರತು ಕೆಲಸ ಮಾಡಲಿಲ್ಲ ಎನ್ನುವ ಗಂಭೀರ ಆರೋಪ ದಾಖಲೆ ಸಮೇತ ಕೇಳಿಬಂದಿದೆ.

“2021ರಲ್ಲಿ ಕರ್ನಾಟಕ ಸರ್ಕಾರ ಗ್ರಾಮೀಣ ಭಾಗದಲ್ಲಿ ಆಸ್ತಿ ವಂಚನೆ ಕಡಿಮೆಗೊಳಿಸಲು ಹಾಗೂ ಆಸ್ತಿ ನೋಂದಣಿ ಪ್ರಕ್ರಿಯೆ ಸರಳಗೊಳಿಸಲು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಪ್ರಾರಂಭಿಸಿತು. ಗ್ರಾಮೀಣ ಪ್ರದೇಶದ ಆಸ್ತಿಗಳಿಗೆ ಇ-ಸ್ವತ್ತು ಕಡ್ಡಾಯವಾಗಿದ್ದು, ಫಾರ್ಮ್ 9 ಮತ್ತು 11ಬಿ ಆಸ್ತಿ ಮಾಲೀಕತ್ವ ಹಾಗೂ ವಹಿವಾಟಿಗೆ ಪೂರಕವಾಗಿದೆ. ಇ-ಸ್ವತ್ತು ಆನ್ಲೈನ್ ದೃಡೀಕೃತ ಡಿಜಿಟಲ್ ದಾಖಲೆಯಾಗಿದ್ದು, ಗ್ರಾಮ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅಧಿಕಾರ ವ್ಯಾಪ್ತಿ ಹೊಂದಿದೆ.”

ಪಿಡಿಓ ಆಸ್ತಿ ವಿವರ ಪರಿಶೀಲಿಸಿ, ದಾಖಲೆ ಅನುಸಾರ ಡಿಜಿಟಲ್ ಸಹಿಯಿಂದ ಮಾಲೀಕತ್ವ ದೃಡೀಕರಿಸುವ ಮಾದರಿ. ಪ್ರಮಾಣ ಪತ್ರ ಮಾಲೀಕರಿಗೆ ವಿತರಿಸುವ ಜವಾಬ್ದಾರಿ ಸಹ ಅವರದ್ದೇ ಆಗಿದೆ. ಆಸ್ತಿ ಸಮಸ್ಯೆ, ಆಸ್ತಿ ವಂಚನೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಪಿಡಿಓಗಳು ಪ್ರಾಮಾಣಿಕತೆ ಮರೆತು ಹಣಕ್ಕೆ ಜೋತು ಬಿದ್ದಿರುವುದು ಶೋಚನಿಯ ಸಂಗತಿ. 30 ಸರ್ಕಾರಿ ದಿನಗಳ ಅವಧಿಯೊಂದಿಗೆ ಕೇವಲ 50 ರೂಪಾಯಿ ವೆಚ್ಚದಲ್ಲಿ ನೀಡಬಹುದಾದ ದಾಖಲೆ. ಪಿಡಿಓ ಅಧಿಕಾರದಲ್ಲಿ ಅತಿ ಕಡಿಮೆ ಅವಧಿಯಲ್ಲಿಯೂ ಸಹ ನೀಡಬಹುದು.

ಈ ವಿಶೇಷ ಯೋಜನೆ ಜಾರಿಯಾಗಿದ್ದು ಗ್ರಾಮೀಣ ಜನರ ಆಸ್ತಿ ಕಾಪಾಡಲು, ವಂಚನೆ ತಡೆ ಹಿಡಿಯಲು ಮುಂದಿನ ದಿನಗಳಲ್ಲಿ ಆಸ್ತಿ ವರ್ಗಾವಣೆ ಅಧಿಕಾರ ಸುಲಲಿತಗೊಳಿಸಲು. ಆದರೇ, ಇದನ್ನೇ ಬಂಡವಾಳ ಮಾಡಿಕೊಂಡ ಗ್ರಾಮ ಪಂಚಾಯತಿಗಳು ಮಧ್ಯವರ್ತಿಗಳ ಮೂಲಕ, ಸಿಬ್ಬಂದಿಗಳ ಮೂಲಕ, ಸ್ವತಃ ತಾವೇ ಲಂಚ ಪಡೆಯುವ ಹಂತಕ್ಕೆ ತಲುಪಿದ್ದಾರೆ. ಈ ಆರೋಪಗಳು ರಾಜ್ಯದ ಮಟ್ಟಿಗೆ ವಿಪರೀತಕ್ಕೆ ತಲುಪಿದೆ. ಆರೋಪಗಳು ಸಾಕಷ್ಟು ಸಾಬೀತಾಗುತ್ತಿವೆ. ಅಂತಹದೇ ಪ್ರಕರಣ ಚಾಮರಾಜನಗರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಗ್ರಾಮ ಪಂಚಾಯತಿ ಸಹಾಯಕ ಲೋಕೇಶ್ (ಪೀವನ್) ಇ-ಸ್ವತ್ತು ಸರ್ವೇ (ಆಸೆಸ್ಮೆಂಟ್) ಮಾಡಿಸಲು ₹8,000 ಹಣವನ್ನು ಆನ್ಲೈನ್ ‘ಫೋನ್ ಪೇ’ ಮೂಲಕ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಕಂದಾಯ ಭೂಮಿ ಸರ್ವೇಗೆ ಕಡಿಮೆ ಹಣವನ್ನು ಸಂದಾಯ ಮಾಡಿ ಸರ್ವೇ ಮಾಡುವುದಿದೆ. ಅದುವೇ ಎಕರೆಗಟ್ಟಲೆ. ಆದರೇ, ಗ್ರಾಮ ಪಂಚಾಯತಿ ಅಳತೆ ಕೇವಲ ಟೇಪ್ ಹಿಡಿದು ಅಳೆಯುವ, ಚಕ್ ಬಂಧಿ ಮಾಡುವ ಕೆಲಸವಾಗಿದ್ದು, ಹಣ ಪಡೆಯುವಂತೆಯೇ ಇಲ್ಲ.

ಭ್ರಷ್ಟಾಚಾರ, ಲಂಚ ಎಷ್ಟರ ಮಟ್ಟಿಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಇರುತ್ತದೆ ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಸಾಕ್ಷಿಯ ಅಗತ್ಯವಿಲ್ಲ. ಹೊರ ಗುತ್ತಿಗೆಯ ಸಿಬ್ಬಂದಿ ಜನಗಳ ಬಳಿ ಆನ್ಲೈನ್ ಮೂಲಕ ಹಣ ಪಡೆಯುವುದರ ಮೂಲಕ ಅಧಿಕಾರಿಗಳಿಗೆ ಮದ್ಯವರ್ತಿಗಳಾಗಿ ನಡೆದುಕೊಳ್ಳುವುದು ಅಲ್ಲದೇ, ತಾವು ಹಣ ಮಾಡಿಕೊಳ್ಳುವ ದಾರಿಯಾಗಿದೆ. ಗ್ರಾಮ ಪಂಚಾಯತಿ ಹೊರ ಗುತ್ತಿಗೆ ಸಿಬ್ಬಂದಿಗಳ ಕೆಲಸಕ್ಕೆ ಈ ದಿನಮಾನಗಳಲ್ಲಿ ಎಷ್ಟರ ಮಟ್ಟಿಗೆ ಲಾಭಿಯಿದೆ ಎಂದರೇ ಹೇಳಲು ಅಸಾಧ್ಯ. ಗ್ರಾಮ ಪಂಚಾಯತಿ ಸಂಬಳ ಮುಖ್ಯವಲ್ಲ, ಗಿಂಬಳ ಇರುವ ಕೆಲಸವಾಗಿ ಮಾರ್ಪಟ್ಟಿದೆ. ಸರ್ಕಾರದ ಯೋಜನೆಯೊಂದು ಉದ್ದೇಶಿತ ಯೋಜನೆಯಾಗದೆ ಹಣ ಮಾಡುವ ಮೂಲವಾಗಿದೆ.

ಗ್ರಾಮ ಪಂಚಾಯತಿ ಸಿಬ್ಬಂದಿಗಳ ಧೈರ್ಯ ಮೆಚ್ಚಲೇಬೇಕು. ಇಲಾಖೆ ಸಂಭಂದಿತ ಹಣಕಾಸಿನ ಯಾವುದೇ ವಿಚಾರ ಬಿಲ್ ಕಲೆಕ್ಟರ್ ಚಲನ್ ಮೂಲಕ ಪಡೆಯಬೇಕು, ಮಾಹಿತಿ ಅನುಸಾರವಾಗಿ. ಆದರೇ, ಆನ್ಲೈನ್ ವರ್ಗಾವಣೆ ಮೂಲಕ ವಯಕ್ತಿಕ ಖಾತೆಗೆ ಹಣ ಪಡೆಯುವ ಅಧಿಕಾರ ಗ್ರಾಮ ಪಂಚಾಯತಿ ಸಿಬ್ಬಂದಿಗೆ ಬಂದಿದ್ದು ಹೇಗೆ? ಎನ್ನುವುದು ಬಹು ಮುಖ್ಯವಾದ ಪ್ರಶ್ನೆ.

ಸಿಬ್ಬಂದಿ ಕಥೆ ಹೀಗಾದರೆ, ಇನ್ನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸತೀಶ್ ಅವರು ಆನ್ಲೈನ್ ಮೂಲಕ ₹3,000 ಹಾಗೂ ನೇರವಾಗಿ ₹2,000 ನಗದು ಹಣ ಪಡೆದುಕೊಂಡಿದ್ದಾರೆ ಎನ್ನುವುದು ದಾಖಲೆ ಸಮೇತದ ಆರೋಪ. ₹10000ಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದರಲ್ಲಿ ₹5000 ಹಣ ನೀಡಲಾಗಿದೆ ಎಂದು ಆರೋಪಿಸಲಾಗಿದ್ದು, ಸತೀಶ್‌ ಅವರಿಗೆ ಹಣ ನೀಡಿದವರು ತಮ್ಮ ಆನ್ಲೈನ್ ಹಣ ವರ್ಗಾವಣೆಯ ಮಾಹಿತಿ ನೀಡಿದ್ದಾರೆ.

ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕಿದ್ದ ಅಧಿಕಾರಿ ತಮ್ಮ ಅಭಿವೃದ್ಧಿಗಾಗಿ ಜನರಿಂದ ಆನ್ಲೈನ್ ಮೂಲಕ ನಿರ್ಭಯವಾಗಿ ಹಣ ಪಡೆಯುತ್ತಿರುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸಾರ್ವಜನಿಕರಿಂದ ಈ ಮಾದರಿಯಲ್ಲಿ ಹಣ ಪಡೆಯುವುದು ಸರ್ಕಾರಕ್ಕೂ, ಇಲಾಖೆಗೂ ಶೋಭೆ ತರುವಂತದ್ದಲ್ಲ. ಇನ್ನ ಗ್ರಾಮ ಪಂಚಾಯತಿ ಒಮ್ಮೆ ನೋಡಿದರೆ ಸಾಕು ಸುಣ್ಣಬಣ್ಣ ಕಂಡು ಅದೆಷ್ಟು ವರ್ಷಗಳು ಕಳೆದವೋ ಏನೋ?. ಕಟ್ಟಡದ ಮೇಲೆ ಗ್ರಾಮ ಪಂಚಾಯತಿ ಎನ್ನುವ ಹೆಸರು ಕಾಣದಷ್ಟು ಅಭಿವೃದ್ಧಿ ಪಡಿಸಿದ್ದಾರೆ ಎಂದರೇ ಇನ್ನ ಜನಸಾಮಾನ್ಯರ ಅಭಿವೃದ್ಧಿ ಇನ್ನೆಷ್ಟರ ಮಟ್ಟಿಗೆ ಮಾಡುತ್ತಿರಬೇಕು ಇಲ್ಲಿಯ ಸಿಬ್ಬಂದಿಗಳು. ಗ್ರಾಮ ಪಂಚಾಯತಿ ಕಟ್ಟಡದ ನಿರ್ವಹಣೆ ಸಹ ಪಿಡಿಓ ಸತೀಶ್ ಅವರಿಂದ ಮಾಡಲು ಸಾಧ್ಯವಾಗಿಲ್ಲ ಎಂದು ಆರೋಪಿಸಲಾಗಿದೆ.

ಈದಿನ.ಕಾಮ್ ಜೊತೆ ಮಾತನಾಡಿದ ಫಲಾನುಭವಿ ಸ್ವಾಮಿಯವರು, “ದಿನಾಂಕ-10-06-2024 ರಂದು ಇ-ಸ್ವತ್ತು ಮಾಡಿಕೊಡಲು ಅರ್ಜಿ, ವಿಭಾಗ ಪತ್ರ ಸಂಭಂದಿತ ಎಲ್ಲಾ ದಾಖಲೆಗಳನ್ನು ಸಾಗಡೆ ಗ್ರಾಮ ಪಂಚಾಯಿತಿಯಲ್ಲಿ ಇರುವ ಅಂದಿನ ಕಾರ್ಯದರ್ಶಿ ರಂಗಸ್ವಾಮಿಯವರಿಗೆ ನೀಡಿರುತ್ತೇನೆ. ಇದರಂತೆ ದಿನಾಂಕ-21-06-2024 ರಂದು ದ್ವಿತೀಯ ದರ್ಜೆ ಸಹಾಯಕರಾದ ಸತೀಶ ನಾಯಕ ಎಂಬುವರ ನೇತೃತ್ವದಲ್ಲಿ ಸ್ಥಳ ಮಹಾಜರು ನಡೆಸಿ,ಅಳತೆ ಮಾಡಿ, ಅಕ್ಕಪಕ್ಕದವರ ಸಹಿಯನ್ನು ಪಡೆದು ನೋಟರಿ ಮಾಡಿಸಲು ತಿಳಿಸಿದರು. ಅದರಂತೆ, ದಿನಾಂಕ-30-06-2024 ರಂದು ನೋಟರಿಯನ್ನು ಮಾಡಿಸಿ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.

“ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ಇ-ಸ್ವತ್ತು ಮಾಡಿಕೊಡಲು ಸತಾಯಿಸುತ್ತಿದ್ದಾರೆ, ಇದುವರೆಗೆ ಮಾಡಿಕೊಟ್ಟಿಲ್ಲ. ಈ ವಿಚಾರವಾಗಿ ತಾಲ್ಲೂಕು ಇಓ ಶ್ರೀನಿವಾಸ್ ರವರಿಗೆ ದೂರವಾಣಿ ಕರೆ ಮಾಡಿ ದೂರು ಹೇಳಿದಾಗ ಅವರು ಪಿಡಿಓ ಅವರಿಗೆ ಸೂಚನೆ ನೀಡಿದ್ದಾರೆ. ಆದರೇ ಪಿಡಿಓ ಸತೀಶ್ ಅವರು ಇ-ಸ್ವತ್ತು ಮಾಡಲು ₹10,000 ಹಣಕ್ಕೆ ಬೇಡಿಕೆ ಇಟ್ಟರು. ಆದ್ದರಿಂದ, ₹5000ಯನ್ನು ಆನ್ಲೈನ್ ಮೂಲಕ ಹಾಗೂ ನೇರವಾಗಿ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.

“ಇದರ ನಡುವೆ ದ್ವಿತೀಯ ದರ್ಜೆ ಸಹಾಯಕ ಸತೀಶ್ ನಾಯಕರವರು ಅಸೆಸ್ ಮೆಂಟ್ (ಜಾಗದ ಅಳತೆ)ಮಾಡಲು ₹10,000 ಹಣಕ್ಕೆ ಬೇಡಿಕೆ ಇಟ್ಟರು. ಅದರಲ್ಲಿ ₹8,000 ಹಣವನ್ನು ಗ್ರಾಮ ಪಂಚಾಯತಿ ಸಹಾಯಕ ಲೋಕೇಶ್ ಅವರಿಗೆ ಆನ್ಲೈನ್ ಮೂಲಕ ಪಾವತಿ ಮಾಡಿದ್ದೇನೆ. ನನ್ನ ತಾತ ದೊಡ್ಡಮಾದಯ್ಯ 1964ರಲ್ಲಿ ಬೊಮ್ಮಯ್ಯರವರಿಂದ ಒಂದು ಖಾಲಿ ನಿವೇಶನವನ್ನು ತೆಗೆದುಕೊಂಡಿದ್ದು, ಈ ನಿವೇಶನದಲ್ಲಿ 1997 ರಲ್ಲಿ ಸರ್ಕಾರದಿಂದ ಮನೆ ಮಂಜೂರಾಗಿರುತ್ತದೆ. ಸದರಿ ನಿವೇಶನ ಮತ್ತು ಮುಂದಿನ ಖಾಲಿ ಜಾಗಕ್ಕೆ ಇ-ಸ್ವತ್ತು ಮಾಡಿಕೊಡಲು ಅರ್ಜಿ ಜೊತೆಗೆ ಸಬ್ ರಿಜಿಸ್ಟರ್ ಕ್ರಯ ಪತ್ರ ಮತ್ತು 1960 ರಿಂದ 2024 ರ ವರಗೆ ಇಸಿ (ಋಣಭಾರ) ನೀಡಿದ್ದೇನೆ” ಎಂದು ವಿವರಿಸಿದ್ದಾರೆ.

“ಇದುವರೆಗೆ ದಾಖಲೆ ಅನುಸಾರ ಇ-ಸ್ವತ್ತು ಮಾಡದೆ. ಹಣ ಪಡೆದುಕೊಂಡು ವರ್ಷದಿಂದ ಅಲೆಸುತ್ತಿದ್ದಾರೆ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು. ದಿನನಿತ್ಯ ಇದೇ ವಿಚಾರವಾಗಿ ಗ್ರಾಮ ಪಂಚಾಯತಿಗೆ ಅಲೆಯುವಂತೆ ಆಗಿದೆ. ಯಾರ್ಯಾರೋ ಮನೆ ಹತ್ತಿರ ಬರುತ್ತಾರೆ ಈ ಜಾಗ ನಿನ್ನದಲ್ಲ, ಮನೆ ನಿನ್ನದಲ್ಲ ಎಂದು ಗದುರುತ್ತಾರೆ. ಒಮ್ಮೊಮ್ಮೆ ಪೊಲೀಸರ ಜೊತೆ ಬಂದು ಧಮ್ಕಿ ಹಾಕುತ್ತಾರೆ” ಎಂದು ಅಲವತ್ತುಕೊಂಡರು.

ಮಹಾದೇವ ಸ್ವಾಮಿ ಮಾತನಾಡಿ, “1964ರಲ್ಲಿ ಖರೀದಿ ಮಾಡಿದ ನಿವೇಶನ ಹಾಗೂ ಖಾಲಿ ನಿವೇಶನ. ಎಲ್ಲಾ ದಾಖಲೆಗಳು ಇವೆ. ಗ್ರಾಮ ಪಂಚಾಯತಿಯವರು ಅಳೆದಿದ್ದಾರೆ. ಆಸೆಸ್ಮೆಂಟ್ ಮಾಡಿ ಗ್ರಾಮ ಪಂಚಾಯತಿ ಸದಸ್ಯರು, ಅಕ್ಕಪಕ್ಕದವರ ಸಹಿ ಮಾಡಿಸಿದ್ದಾರೆ. ಅದೆಲ್ಲವೂ ವಕೀಲರ ಮೂಲಕ ನೋಟರಿ ಆಗಿದೆ. ಇದರ ಜೊತೆಗೆ ಇಸಿ (ಋಣಭಾರ)ಯಲ್ಲಿ 1964 ರಿಂದ ಇದುವರೆಗೆ ನಮ್ಮ ತಾತ ಅವರ ಹೆಸರಿನಲ್ಲಿಯೇ ಇದೇ. ಬೇರೆ ಋಣಬಾರ ಕಂಡುಬಂದಿರುವುದಿಲ್ಲ. ಇಷ್ಟೆಲ್ಲಾ ಆಗಿ ಹಣ ಬೇಡಿಕೆ ಇಟ್ಟಾಗ ನಾವುಗಳೇ ಆನ್ಲೈನ್ ಮೂಲಕ, ನೇರವಾಗಿ ಪಿಡಿಓ ಸತೀಶ್ ಹಾಗೂ ಪಂಚಾಯತಿ ಸಹಾಯಕ ಲೋಕೇಶ್ ಅವರಿಗೆ ಹಣ ಪಾವತಿ ಮಾಡಿದ್ದೀವಿ” ಎಂದು ತಿಳಿಸಿದರು.

“ಈಗಲೂ ಇ-ಸ್ವತ್ತು ಮಾಡುತ್ತಿಲ್ಲ. ಕಾರಣ ಕೇಳಿದರೆ ಹೇಳಲ್ಲ. ಹಿಂಬರಹ ಸಹ ಕೊಡುತ್ತಿಲ್ಲ. ಇನ್ನೊಬ್ಬರಿಗೆ ಸೇರಿದ್ದು ಎನ್ನುವಂತೆ ಇತ್ತೀಚಿಗೆ ಡಿಮ್ಯಾಂಡ್ ಒಂದನ್ನು ಸೃಷ್ಟಿ ಮಾಡಿ ಹಣಕ್ಕಾಗಿ ತೊಂದರೆ ನೀಡುತ್ತಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಆಗಬೇಕು. ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಗಳನ್ನು ಅಮಾನತ್ತು ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು. ಲೋಕಾಯುಕ್ತ ಹಾಗೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದರ ಜೊತೆಗೆ ಜಿಲ್ಲಾ ಪಂಚಾಯತ್ ಸಿಇಓ ಅವರಿಗೂ ದೂರು ನೀಡುತ್ತೇವೆ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ಯುವಕರ ಥಳಿತ ಪ್ರಕರಣ; ಸುಳ್ಳು ಸುಮೋಟೋ ಕೇಸ್ : ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ದಸಂಸ ಪ್ರತಿಭಟನೆ

ಬೇಲಿಯೇ ಎದ್ದು ಹೊಲ ಮೇದಂತೆ ಸರ್ಕಾರಿ ಅಧಿಕಾರಿಗಳು ಜನ ಸಾಮಾನ್ಯರ ಕೆಲಸ ಮಾಡದೆ ಲಂಚದ ಅಮೀಶಕ್ಕೆ ಮೈಗೂಡಿಸಿಕೊಳ್ಳುತ್ತಿರುವುದು ಅಪಾಯದ ಸಂಗತಿ. ಸರ್ಕಾರಗಳು ಯೋಜನೆ ರೂಪಿಸುವುದು ಜನ ಹಿತಕ್ಕಾಗಿ. ಹಣ ಮಾಡುವುದಕ್ಕಲ್ಲ. ಸರ್ಕಾರಿ ಸಂಬಳ ಪಡೆದು, ಅಡ್ಡ ದಾರಿ ಮೂಲಕ ಲಂಚಕ್ಕೆ ಕೈ ಚಾಚುವುದು ಕಾನೂನು ರೀತ್ಯಾ ಅಪರಾಧ.
ಮುಂದಿನ ಸಂಚಿಕೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಪ್ರತಿಕ್ರಿಯೆ ಪಡೆದು ಈದಿನ.ಕಾಮ್ ಸಂಕ್ಷಿಪ್ತವಾಗಿ ವರದಿ ಮಾಡಲಿದೆ.

WhatsApp Image 2025 02 05 at 18.09.20
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

ಜನಸ್ಪಂದನ, ಸೌಲಭ್ಯಗಳ ವಿತರಣೆಯ ತಾಣವಾಗಲಿ-ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ:ಕಳೆದ ಹಲವಾರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಮತ್ತು ಜನಸ್ನೇಹಿಯಾಗಿ ನಡೆಯುತ್ತಿರುವ ಜನಸ್ಪಂಧನ...

ಉಡುಪಿ | ಮೈಸೂರು ದಸರಾ ಮೆರವಣಿಗೆಯಲ್ಲಿ ಬಿರ್ತಿಯ ಅಂಕದಮನೆ ತಂಡದ “ಕಂಗೀಲು ನೃತ್ಯ” ಆಯ್ಕೆ

ಅಕ್ಟೋಬರ್ 2 ರಂದು ನಡೆಯುವ ಕರ್ನಾಟಕದ ನಾಡ ಹಬ್ಬ ವಿಶ್ವವಿಖ್ಯಾತ ಮೈಸೂರು...

Download Eedina App Android / iOS

X