ತಮಿಳುನಾಡಿಗೆ ದಿನನಿತ್ಯ 5,000 ಕ್ಯೂಸೆಕ್ ನೀರು ಹರಿಸುವುದನ್ನು ಖಂಡಿಸಿ ಶನಿವಾರ ರೈತ ಮತ್ತು ಕನ್ನಡ ಪರ ಸಂಘಟನೆಗಳು ಮಂಡ್ಯ ಬಂದ್‌ಗೆ ಕರೆ ನೀಡಿದ್ದವು. ಮಂಡ್ಯ ಮತ್ತು ಮದ್ದೂರಿನಲ್ಲಿ ಬಂದ್‌ಗೆ ಭಾರೀ ಬೆಂಬಲ ವ್ಯಕ್ತವಾಗಿದೆ.
ಮಂಡ್ಯ ಮತ್ತು ಮದ್ದೂರಿನಲ್ಲಿ ಅಂಗಡಿಗಳು ಬಂದ್ ಆಗಿವೆ. ಸಾರಿಗೆ ಬಸ್‌ಗಳು ಸೇರಿದಂತೆ ಖಾಸಗಿ ಬಸ್‌ಗಳು, ಆಟೋಗಳು ರಸ್ತೆಗೆ ಇಳಿಯದೇ ಬಂದ್‌ಗೆ ಬೆಂಬಲ ನೀಡಿವೆ. ಶಾಲಾ-ಕಾಲೇಜುಗಳೂ ಬಂದ್ ಆಗಿವೆ. ನಾನಾ ಸಂಘಟನೆಗಳು ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ನೆಸುತ್ತಿದ್ದಾರೆ.
ನಮಗೇ ನೀರಿಲ್ಲದೇ ಇರುವಾಗ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಸರಿಯಲ್ಲ. ನದಿಗೆ ನೀರು ಹರಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ಶಿವಕುಮಾರ ಆರಾಧ್ಯ ‘ರೈತರ ಬಾಯಿಗೆ ಮಣ್ಣು ಹಾಕಿದರಲ್ಲಪ್ಪೋ’ ಎಂದು ಮಣ್ಣು ತಿಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ವಿರೋಧದ ನಡುವೆಯೂ ತಮಿಳುನಾಡಿಗೆ ನೀರು
ಮಂಡ್ಯದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಕೋರ್ಟ್ ಆದೇಶದಂತೆ ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆ ನೀರು ಹರಿಸಲಾಗಿದೆ. ಶುಕ್ರವಾರ ಸಂಜೆ 5,734 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ ಎಂಬ ಮಾಹಿತಿ ಬಂದಿದೆ.
ಆದರೆ, ನೀರು ಹರಿಸುತ್ತಿರುವ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.