ಕೇಂದ್ರ ನಗರಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ನೀಡಿದ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಕೇಂದ್ರ ನಗರ ಪಾಲಿಕೆ ವ್ಯಾಪ್ತಿ ವಿವಿಧ ಸ್ಥಳಗಳಲ್ಲಿ ರಸ್ತೆ ಗುಂಡಿ ಮುಚ್ಚುವ, ಪ್ಯಾಚ್ ವರ್ಕ್ ಹಾಗೂ ಬ್ಲಾಕ್ ಟಾಪಿಂಗ್ ಕಾಮಗಾರಿ ಚುರುಕಿನಿಂದ ಸಾಗುತ್ತಿವೆ.
ಸೆಪ್ಟೆಂಬರ್ 22ರ ರಾತ್ರಿ ಮಿಷನ್ ರಸ್ತೆ, St. John Church Street, ಕಮಿಷನರೇಟ್ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆಗಳಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತ ಡಾ. ರಾಜೇಂದ್ರ ಕೆ ವಿಯವರು ಇಂದು ಬೆಳಿಗ್ಗೆ ನಗರ ಪಾಲಿಕೆ ವ್ಯಾಪ್ತಿಯ ಗೋವಿಂದರಾಜ ನಗರ ವಿಭಾಗದ ಮೂಡಲಪಾಳ್ಯ ವಾರ್ಡ್‌ನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಆಯುಕ್ತರು ವಾರ್ಡ್ 127ರ ಮೂಡಲಪಾಳ್ಯದ ಪೌರಕಾರ್ಮಿಕರ ಮಸ್ಟರಿಂಗ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಪೌರಕಾರ್ಮಿಕರಿಗೆ ತಮಗೆ ನಿಗದಿಪಡಿಸಿದ ಸ್ಥಳಗಳನ್ನು ನಿತ್ಯವೂ ಸ್ವಚ್ಛಗೊಳಿಸಿ, ಸ್ವಚ್ಛತೆ ಕಾಪಾಡಲು ತಿಳಿಸಿ, ಸಮಯಕ್ಕೆ ಸರಿಯಾಗಿ ಮಸ್ಟರಿಂಗ್ ಸ್ಥಳದಲ್ಲಿ ಹಾಜರಿರುವಂತೆ ಸೂಚಿಸಿದರು.

ವಾರ್ಡ್ ರಸ್ತೆ ಪರಿಶೀಲಿಸಿದ ಆಯುಕ್ತರು, ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂದುವರೆದಂತೆ, ಪಾದಚಾರಿ ಮಾರ್ಗ ಪರಿಶೀಲಿಸಿದ ಆಯುಕ್ತರು ಪಾದಚಾರಿಯನ್ನು ಸ್ವಚ್ಛಗೊಳಿಸಿ, ಒತ್ತುವರಿಗಳನ್ನು ಗುರುತಿಸಿ, ಸೂಕ್ತ ಕ್ರಮ ಕೈಗೊಂಡು ಒತ್ತುವರಿಯನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ವಾರ್ಡ್ ವ್ಯಾಪ್ತಿಯಲ್ಲಿ ನೀರು ಸಂಗ್ರಹವಾಗಿದ್ದು, ನಾಗರಿಕರಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ, ಅಂತಹ ಸ್ಥಳಗಳನ್ನು ಗುರುತಿಸಿ ತಾತ್ಕಾಲಿಕವಾಗಿ ಕ್ರಮ ಕೈಗೊಂಡು, ಶಾಶ್ವತ ಪರಿಹಾರಕ್ಕಾಗಿ ಯೋಜನೆ ರೂಪಿಸಲು ಅಧಿಕಾರಿಗಳಿಗೆ ತಿಳಿಸಿದರು.

ಇಂದಿರಾ ಕ್ಯಾಂಟಿನ್‌ಗೆ ಭೇಟಿ ಕೊಟ್ಟ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿ, ಕ್ಯಾಂಟಿನ್‌ನಲ್ಲಿ ಹಾಗೂ ಕ್ಯಾಂಟಿನ್ ಅವರಣದಲ್ಲಿ ಸ್ವಚ್ಛತೆ ಕಾಪಾಡಲು ಸಿಬ್ಬಂದಿಗಳಿಗೆ ತಿಳಿಸಿದರು.
ಮೂಡಲಪಾಳ್ಯದ ನಗರ ಪ್ರಾಥಮಿಕ ಆರೋಗ್ಯ ಕೇಂದಕ್ಕೆ ಭೇಟಿ ಕೊಟ್ಟ ಆಯುಕ್ತರು ಅಲ್ಲಿನ ಆಸ್ಪತ್ರೆಯ ಸ್ವಚ್ಛತೆ, ವೈದ್ಯಕೀಯ ಉಪಕರಣಗಳ ಲಭ್ಯತೆ, ಸಾರ್ವಜನಿಕರಿಗೆ ನೀಡುವ ಸೇವೆಯ ಗುಣಮಟ್ಟ ಎಲ್ಲವನ್ನೂ ಪರಿಶೀಲಿಸಿದರು. ಅಲ್ಲದೆ, ಅಗತ್ಯ ಸೌಲಭ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ವಿವಿಧ ಸ್ಥಳಗಳ ತಪಾಸಣೆಯ ನಂತರ ಆಯುಕ್ತರು ವಾರ್ಡ್ ಕಚೇರಿಯಲ್ಲಿ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಅಗತ್ಯ ಸೂಚನೆಗಳನ್ನು ನೀಡಿದರು.
ಸದರಿ ತಪಾಸಣೆಯಲ್ಲಿ ಜಂಟಿ ಆಯುಕ್ತ ಸಂಗಪ್ಪ ಹಾಗೂ ವಾರ್ಡ್ ವಲಯಕ್ಕೆ ಸಂಬಂಧಿಸಿದ ಇತರೆ ಅಧಿಕಾರಿಗಳು ಇದ್ದರು.
ಪಶ್ಚಿಮ ನಗರ ಪಾಲಿಕೆಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ನಡೆಸಲು ಮಾಸ್ಟರ್ ಟ್ರೈನರ್‌ಗಳಿಗೆ ಐಪಿಪಿ ಸಭಾಂಗಣ ಮಲ್ಲೇಶ್ವರದಲ್ಲಿ ಕಾರ್ಯಾಗಾರವು ಪಶ್ಚಿಮ ನಗರ ಪಾಲಿಕೆ ಮಾನ್ಯ ಆಯುಕ್ತರಾದ ಡಾ. ರಾಜೇಂದ್ರ ಕೆ ವಿ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಸದರಿ ಕಾರ್ಯಾಗಾರದಲ್ಲಿ ಪಾಲಿಕೆ ಜಂಟಿ ಆಯುಕ್ತರಾದ ಆರತಿ ಆನಂದ್,ಸಂಗಪ್ಪ ,ಮಾಸ್ಟರ್ ಟ್ರೈನರ್ ಗಳು ಹಾಗು ನೋಡಲ್ ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಇಂದು ಮುಂಜಾನೆ ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದರು.
ನಾಗವಾರದಿಂದ ಥಣಿಸಂದ್ರ ಬಳ್ಳಾರಿ ಮುಖ್ಯರಸ್ತೆ ಬೆಳ್ಳಹಳ್ಳಿ ಮೂಲಕ ಬಾಗಲೂರು ಮುಖ್ಯರಸ್ತೆಯಲ್ಲಿರುವ ರೇವಾ ಸರ್ಕಲ್‌ವರೆಗೆ ಸುಮಾರು 9.7 ಕಿಲೋಮೀಟರ್ ಹಾಗೂ ಬಾಗಲೂರು ಮುಖ್ಯ ರಸ್ತೆಯ ರೇವ ಸರ್ಕಲ್‌ನಿಂದ ಎನ್‌ಹೆಚ್-7(ಬಾಗಲೂರು ಕ್ರಾಸ್)ರವರೆಗೆ ಸುಮಾರು 2.5 ಕಿಲೋಮೀಟರ್ ಹಾಗೂ ಕೋಗಿಲು ವಿಲೇಜ್‌ನಿಂದ ಅಗ್ರಹಾರ ಸಂಪಿಗೆಹಳ್ಳಿ ಮಾರ್ಗವಾಗಿ MCECHS ಬಡಾವಣೆಯವರೆಗೆ(ಸುಮಾರು 3.5 ಕಿಲೋಮೀಟರ್) ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ, ಪಾದಚಾರಿ ಒತ್ತುವರಿ ತೆರವುಗೊಳಿಸುವುದು ಸೇರಿದಂತೆ ಹಲವು ನಿರ್ದೇಶನಗಳನ್ನು ನೀಡಿದರು.
ಥಣಿಸಂದ್ರದ ಪೌರಕಾರ್ಮಿಕರ ಮಸ್ಟರಿಂಗ್ ಸ್ಥಳಕ್ಕೆ ಭೇಟಿಕೊಟ್ಟ ವೇಳೆ ಪೌರಕಾರ್ಮಿಕರ ಹಾಜರಾತಿ ಪುಸ್ತಕವನ್ನು ಪರಿಶೀಲಿಸಲಾಯಿತು. ಹಾಜರಾತಿಯ ತಪಾಸಣೆಯಲ್ಲಿ, ಬಯೋಮೆಟ್ರಿಕ್ ಯಂತ್ರದಲ್ಲಿ 13 ಮಂದಿ ಗೈರುಹಾಜರಾಗಿರುವಾಗ, ಹಾಜರಾತಿ ಪುಸ್ತಕದಲ್ಲಿ ಕೇವಲ 3 ಮಂದಿಯ ಹೆಸರುಗಳು ಮಾತ್ರ ಗೈರುಹಾಜರಾಗಿ ದಾಖಲೆಯಾಗಿರುವುದು ಪತ್ತೆಯಾಯಿತು.
ಆಯುಕ್ತರು ಸಿಬ್ಬಂದಿಗೆ ನಿಗದಿತ ಸಮಯದಲ್ಲಿ ಬೆಳಿಗ್ಗೆ 5:30ರಿಂದ 6:30ರೊಳಗೆ ಮಸ್ಟರಿಂಗ್ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂಬ ಸೂಚನೆ ನೀಡಿದ್ದು, ತಡವಾಗಿ ಬರುವವರನ್ನು ಗೈರುಹಾಜರಾತಿ ನೀಡಬೇಕಾಗಿ ಖಡಕ್ ಆದೇಶ ನೀಡಿದ್ದಾರೆ.
ಮೇಲ್ವಿಚಾರಕರಿಗೆ ಎಚ್ಚರಿಕೆ ನೀಡಿ, ಮುಂದಿನ ದಿನಗಳಲ್ಲಿಯೂ ತಪಾಸಣೆ ನಡೆಸಲಾಗುವುದು. ಆ ವೇಳೆ ಹಾಜರಾತಿಯನ್ನು ವ್ಯವಸ್ಥಿತವಾಗಿ ನಿರ್ವಹಿಸದಿರುವುದು ಕಂಡುಬಂದರೆ ಸೂಕ್ತಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಇಂದಿನಿಂದಲೇ ಹಾಜರಾತಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ನಿರ್ದೇಶಿಸಿದರು.
ಈ ವೇಳೆ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಸಂಬಂಧಿಸಿದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇತರೆ ಸಂಬಂಧಪಟ್ಟ ಸಿಬ್ಬಂದಿಗಳು ಇದ್ದರು.
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರವರಿಂದ ಪ್ರತಿ ಶುಕ್ರವಾರ ಫೋನ್-ಇನ್ ಕಾರ್ಯಕ್ರಮ
ನಾಗರಿಕರೊಂದಿಗೆ ನೇರ ಸಂಪರ್ಕ ಸಾಧಿಸುವ ಉದ್ದೇಶದಿಂದ, ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಪ್ರತಿ ಶುಕ್ರವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಎರಡು ಗಂಟೆಗಳ ಕಾಲ ಫೋನ್-ಇನ್ ಕಾರ್ಯಕ್ರಮ ನಡೆಸಲಿದ್ದಾರೆ.
ಈ ಕಾರ್ಯಕ್ರಮ ಸೆಪ್ಟೆಂಬರ್ 26ರಿಂದ ಪ್ರಾರಂಭವಾಗಲಿದ್ದು, ಪ್ರತಿ ಶುಕ್ರವಾರ ನಿಯಮಿತವಾಗಿ ನಡೆಯಲಿದೆ. ಈ ವೇಳೆ ನಾಗರಿಕರು ರಸ್ತೆ ಗುಂಡಿಗಳು, ಬೀದಿ ದೀಪ ದುರಸ್ತಿ, ಕಸದ ಸಮಸ್ಯೆಗಳು, ಅಪಾಯಕರ ಮರ/ಕೊಂಬೆಗಳ ಕತ್ತರಿಸುವಿಕೆ, ಸೊಳ್ಳೆ ನಿಯಂತ್ರಣ, ಬೀದಿ ನಾಯಿಗಳ ಹಾವಳಿ, ಉದ್ಯಾನವನಗಳ ನಿರ್ವಹಣೆ, ಅನಧಿಕೃತ ಬ್ಯಾನರ್/ಪೋಸ್ಟರ್‌ಗಳ ತೆರವು, ಪಾದಚಾರಿ ಮಾರ್ಗದ ಒತ್ತುವರಿ, ಇ-ಖಾತಾ ಸಂಬಂಧಿತ ಸಮಸ್ಯೆಗಳು, ಚರಂಡಿ ಶುದ್ಧೀಕರಣದಂತಹ ಸೇವೆಗಳ ಕುರಿತಾಗಿ ತಮ್ಮ ದೂರುಗಳು ಅಥವಾ ಅಹವಾಲುಗಳನ್ನು ನೀಡಬಹುದು ಎಂದು ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಪೌರಕಾರ್ಮಿಕ ದಿನಾಚರಣೆ ಮುನ್ನಾ ದಿನವೇ ವಿವಾದ – ರಾತ್ರಿ ಹೊತ್ತು ಸ್ವಚ್ಛತೆಗೆ ಪೌರಕಾರ್ಮಿಕರ ಬಳಕೆ
ಈ ಕಾರ್ಯಕ್ರಮದ ಮೂಲಕ ನಾಗರಿಕರ ಅಹವಾಲುಗಳನ್ನು ನೇರವಾಗಿ ಅಧಿಕಾರಿಗಳಿಗೆ ತಲುಪಿಸುವುದರೊಂದಿಗೆ, ಸಂಬಂಧಿಸಿದ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ದೂರುಗಳ ಪರಿಹಾರದ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.
ಪ್ರತಿ ದೂರು ಸಹಾಯ 2.0 ಪೋರ್ಟಲ್‌ನಲ್ಲಿ ದಾಖಲಾಗಿ, ಸಂಬಂಧಿಸಿದ ಅಧಿಕಾರಿಗೆ ನಿಯೋಜಿಸಲಾಗುವುದು. ನಾಗರಿಕರಿಗೆ SMS ಮುಖಾಂತರ ದೂರು ಸ್ವೀಕೃತಿಯ ಮಾಹಿತಿ ಹಾಗೂ ಅಧಿಕಾರಿಯ ವಿವರ ಕಳುಹಿಸಲಾಗುತ್ತದೆ.
ನಿಯಂತ್ರಣ ಕೊಠಡಿ ಸಂಪರ್ಕ ಸಂಖ್ಯೆ: ಮೊಬೈಲ್ ಮತ್ತು ವಾಟ್ಸ್ಯಾಪ್ ಸಂಖ್ಯೆ 9480685705ಕ್ಕೆ ಅಥವಾ ಲ್ಯಾಂಡ್‌ಲೈನ್ ಸಂಖ್ಯೆ 080-22975936 / 080-23636671ಕ್ಕೆ ಕರೆ ಮಾಡುವ ಮೂಲಕ ಅಥವಾ ಸಹಾಯ ಆಪ್ ಮುಂಖಾಂತರ ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಕುರಿತು ನೋಂದಾಯಿಸಬಹುದು ಎಂದು ತಿಳಿಸಲಾಗಿದೆ.