ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಕ್ಸಿಜನ್ ದುರಂತ ಕುಟುಂಬದ ಸಂತ್ರಸ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಜಿಲ್ಲಾ ಉಸ್ತುವಾರಿ ಹಾಗೂ ಪಶುಸಂಗೋಪನೆ, ರೇಷ್ಮೆ ಸಚಿವ ಕೆ. ವೆಂಕಟೇಶ್ ಸಭೆ ನಡೆಸಿ, ಅಹವಾಲುಗಳನ್ನು ಆಲಿಸಿದರು.
ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ ಸಂತ್ರಸ್ತರಿಗೆ ಭರವಸೆ ನೀಡಿದಂತೆ ಖಾಯಂ ಸರ್ಕಾರಿ ಉದ್ಯೋಗ ನೀಡಬೇಕು. ಹೆಚ್ಚಿನ ಪರಿಹಾರ ಹಣವನ್ನು ಸಹ ನೀಡಬೇಕು. ಸಂತ್ರಸ್ತ ಕುಟುಂಬಗಳು ಸಂಕಷ್ಟದಲ್ಲಿವೆ. ಇವರ ನೆರವಿಗೆ ತಕ್ಷಣವೇ ಸ್ಪಂದಿಸಬೇಕು ಎಂಬುದೂ ಸೇರಿದಂತೆ ವಿವರವಾಗಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಮಾತನಾಡಿ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಖಾಯಂ ಉದ್ಯೋಗ ನೀಡುವ ಸಂಬಂಧ ಪ್ರಕ್ರಿಯೆ ನಡೆಯುತ್ತಿದೆ. ವಿದ್ಯಾರ್ಹತೆ ಮೇಲೆ ಕೆಲಸ ಕೊಡಲಿದ್ದೇವೆ. ಖಾಯಂ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ಬದ್ದವಾಗಿದೆ. ಶೀಘ್ರದಲ್ಲೇ ಈ ಕೆಲಸವಾಗಲಿದೆ. ಹೆಚ್ಚಿನ ಪರಿಹಾರ ನೀಡುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತನಾಡುವೆ ಎಂದು ಹೇಳಿದರು.

ಶಾಸಕರಾದ ಎ. ಆರ್. ಕೃಷ್ಣಮೂರ್ತಿ ಮಾತನಾಡಿ ಖಾಯಂ ಸರ್ಕಾರಿ ಉದ್ಯೋಗ ಕೊಡುವ ಉದ್ದೇಶದಿಂದ ಅಗತ್ಯ ಪ್ರಕ್ರಿಯೆ ಕೈಗೊಳ್ಳಲಾಗಿದೆ. ನ್ಯಾಯ ಸಮ್ಮತ ಅವಕಾಶಗಳನ್ನು ಸಂತ್ರಸ್ತರಿಗೆ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಕಾಡು ಪ್ರಾಣಿ ಹಾವಳಿ, ಬೆಳೆ ಪರಿಹಾರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ : ಸಚಿವ ಕೆ ವೆಂಕಟೇಶ್
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ವಿವಿಧ ಸಂಘಟನೆಗಳ ಮುಖಂಡರಾದ ಸಿ. ಎಂ. ಕೃಷ್ಣಮೂರ್ತಿ, ಅಬ್ರಾರ್ ಅಹಮದ್, ಅರಕಲವಾಡಿ ನಾಗೇಂದ್ರ, ಕೆ. ವೆಂಕಟರಾಜು, ನಿಜಧ್ವನಿ ಗೋವಿಂದರಾಜು, ಗಾಳಿಪುರ ಮಹೇಶ್, ಡಾ. ಗುರು ಪ್ರಸಾದ್, ಪಣ್ಯದಹುಂಡಿ ರಾಜು, ಪುಣಜನೂರು ದೊರೆಸ್ವಾಮಿ, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಚಾ. ರಂ. ಶ್ರೀನಿವಾಸಗೌಡ, ಸುರೇಶ್ ವಾಜಪೇಯಿ ಸೇರಿದಂತೆ ಇನ್ನಿತರರು ಸಭೆಯಲ್ಲಿ ಇದ್ದರು.