ಟೊಮ್ಯಾಟೋ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕರಡಿಯೊಂದು ದಾಳಿ ಮಾಡಿದ ಪರಿಣಾಮ ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಗುರುಕುಲ ನಾಗೇನಹಳ್ಳಿ ಗ್ರಾಮದ ಬಳಿ ನಡೆದಿದೆ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯ ನಿವಾಸಿ ನರಸಿಂಹಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ತಪತ್ರೆಗೆ ದಾಖಲಿಸಲಾಗಿದೆ. ದಾಳಿಗೆ ಒಳಗಾದ ನರಸಿಂಹಪ್ಪನಿಗೆ ಮುಖ ತಲೆ ಕಿವಿ ಮತ್ತು ಕಣ್ಣಿಗೆ ಗಂಭೀರ ಗಾಯವಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ನರಸಿಂಹಪ್ಪನ ಮೇಲೆ ದಾಳಿ ಮಾಡಿದ ಕರಡಿ ಪಕ್ಕದ ತೋಟದಲ್ಲಿದ್ದ ಕೃಷ್ಣಪ್ಪ ಎಂಬುವರ ಮೇಲೂ ದಾಳಿ ಮಾಡಿದೆ.
ಕೃಷ್ಣಪ್ಪನ ಕೈಯನ್ನು ಬಲವಾಗಿ ಹಿಡಿದು ಕಚ್ಚಿದ್ದರಿಂದ ಆಘಾತಕ್ಕೊಳಗಾದ ಆತ ಸಹಾಯಕ್ಕಾಗಿ ಜೋರಾಗಿ ಕಿರುಚಿಕೊಂಡಿದ್ದಾರೆ. ಕೃಷ್ಣಪ್ಪನ ಕಿರುಚಾಟ ಕೇಳಿ ಅಕ್ಕಪಕ್ಕದ ತೋಟದ ರೈತರು ಓಡಿ ಬಂದಿದ್ದಾರೆ. ಜನರ ಗುಂಪು ಕಂಡು ಕರಡಿ ಓಡಿಹೋಗಿದೆ. ಗುರುಕುಲ ನಾಗೇನಹಳ್ಳಿ ಗ್ರಾಮದ ಬಳಿ ಇಬ್ಬರು ರೈತರ ಮೇಲೆ ಏಕಾಏಕಿ ಕರಡಿ ದಾಳಿ ನಡೆಸಿರುವ ಪ್ರಕರಣ ಸುತ್ತಮುತ್ತಲ ಗ್ರಾಮಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ ಕಾರ್ಯದಿಂದ ವಿನಾಯಿತಿ ನೀಡಲು ಶಿಕ್ಷಕರ ಮನವಿ
ಗಾಯಾಳು ಕೃಷ್ಣಪ್ಪ ಹೇಳುವಂತೆ ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಕರಡಿಯೊಂದು ಮನುಷ್ಯರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಕರಡಿ ದಾಳಿಯ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಗಾಯಾಳುಗಳನ್ನು ದಾಖಲಿಸಿರುವ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿದ್ದಾರೆ.