ಮಲೆನಾಡಿನಲ್ಲಿ ಬೆಳೆಯುವಂತಹ ಕಾಫಿ ಎಲ್ಲೆಡೆ ಹೆಸರುವಾಸಿಯಾಗಿದೆ. ಹಾಗೆಯೇ, ಬೇರೆ ಬೇರೆ ದೇಶ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಭಾರತದಲ್ಲಿ ಕಾಫಿ ಒಂದು ಪ್ರಮುಖ ಬೆಳೆಯಾಗಿದ್ದು, ದೇಶದ ಒಟ್ಟು ಉತ್ಪಾದನೆಯ ಶೇಕಡಾ 70ಕ್ಕೂ ಅಧಿಕ ಕಾಫಿಯನ್ನು 120ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಯುರೋಪಿಯನ್ ಮಾರುಕಟ್ಟೆಯ ಪಾಲು ಶೇಕಡಾ 60 ರಷ್ಟಿದೆ ಎಂದು ಚಿಕ್ಕಮಗಳೂರು ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟರೆಡ್ಡಿ ತಿಳಿಸಿದ್ದಾರೆ.
ಯುರೋಪಿಯನ್ ಒಕ್ಕೂಟವು ಇತ್ತೀಚೆಗೆ ಜಾರಿಗೊಳಿಸಿದ ಅರಣ್ಯ ಕಡಿತ ನಿರ್ಬಂಧ ನೀತಿ ಅಡಿಯಲ್ಲಿ ಕಾಫಿಯನ್ನೂ ಸೇರ್ಪಡೆ ಮಾಡಲಾಗಿದೆ. ಈ ನಿಯಮದ ಪ್ರಕಾರ, ಯುರೋಪಿಯನ್ ಮಾರುಕಟ್ಟೆಗೆ ನೇರವಾಗಿ ಕಾಫಿಯನ್ನು ರಫ್ತು ಮಾಡುವವರು, ಅಥವಾ ತಮ್ಮ ಕಾಫಿಯನ್ನು ವ್ಯಾಪಾರಿಗಳು, ಕ್ಯೂರರ್‌ಗಳು ಅಥವಾ ರಫ್ತುದಾರರಿಗೆ ಮಾರಾಟ ಮಾಡುವವರು ತಮ್ಮ ತೋಟದ ಭೂ ಪ್ರದೇಶದ ಸ್ಥಳಾಂಕ (Coordinates) ಅಥವಾ ಬಹುಭುಜ ಆಕಾರ (Polygon)ವನ್ನು ಜಿಯೋ ಜಾಸನ್ (GeoJSON) ಸ್ವರೂಪದಲ್ಲಿ ಒದಗಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ಯುರೋಪಿಯನ್ ಆಮದುದಾರರು ಈ ಮಾಹಿತಿಯನ್ನು ಬಳಸಿ, 2020 ಡಿಸೆಂಬರ್ 31ರ ನಂತರ ಅರಣ್ಯ ಕಡಿತಗೊಂಡ ಭೂಮಿಯಲ್ಲಿ ಕಾಫಿ ಬೆಳೆದಿದೆಯೇ ಇಲ್ಲವೇ ಎಂದು ಪರಿಶೀಲಿಸುತ್ತಾರೆ. ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಭಾರತದ ಕಾಫಿ ಮಂಡಳಿಯು ಇಂಡಿಯಾ ಕಾಫಿ ಆಪ್ ನಲ್ಲಿ ಹೊಸ ಆಯ್ಕೆಯನ್ನು ಪರಿಚಯಿಸಿದೆ. ರೈತರು ತಮ್ಮ ಮೊಬೈಲ್‌ಗಳಲ್ಲಿ ಆಪ್ ಡೌನ್‌ಲೋಡ್ ಮಾಡಿ, ಬೆಳೆಗಾರರಾಗಿ ನೋಂದಾಯಿಸಿಕೊಂಡು, ತೋಟದ ಸಳಾಂಕ ಅಥವಾ ಬಹುಭುಜ ಆಕಾರವನ ರಚಿಸಬಹುದಾಗಿದೆ.
ಇದನ್ನು ಓದಿದ್ದೀರಾ?ಚಿಕ್ಕಮಗಳೂರು l ಸೆ. 24ರಂದು ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣ
ಸ್ಥಳೀಯ ಕಾಫಿ ಮಂಡಳಿ ವಿಸ್ತರಣಾ ಅಧಿಕಾರಿ ಪರಿಶೀಲನೆ ಮಾಡಿದ ನಂತರ ರೈತರು ಅದನ್ನು ಜಿಯೋ ಜಾಸನ್ ಸ್ವರೂಪದಲ್ಲಿ ಡೌನ್‌ಲೋಡ್ ಮಾಡಿಕೊಂಡು ಖರೀದಿದಾರರೊಂದಿಗೆ ಹಂಚಿಕೊಳ್ಳಬಹುದು. ತೋಟದ ಗಾತ್ರವು 4 ಹೆಕ್ಟೇರ್‌ಗಿಂತ ಕಡಿಮೆ ಇದ್ದರೆ ಸ್ಥಳಾಂಕ (Coordinates) ಸಾಕು. 4 ಹೆಕ್ಟೇರ್‌ಗಿಂತ ಹೆಚ್ಚು ಇದ್ದರೆ ಬಹುಭುಜ (Polygon) ಆಕಾರ ಕಡ್ಡಾಯ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಕಾಫಿ ಮಂಡಳಿ ವಿಸ್ತರಣಾ ಅಧಿಕಾರಿಯನ್ನು ಸಂಪರ್ಕಿಸಬಹುದು ಅಥವಾ 99026 73939 ಗೆ ಕರೆ ಮಾಡಬಹುದು ಎಂದು ಕಾಫಿ ಮಂಡಳಿಯಿಂದ ತಿಳಿಸಿದ್ದಾರೆ.