ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಗ್ರಾಹಕರ ಹತ್ತಿರ ಹಿಂದಿ-ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವುದರಿಂದ ವ್ಯವಹಾರ ಮಾಡಲು ತುಂಬಾ ತೊಂದರೆಯಾಗಿದ್ದು, ಕೂಡಲೇ ಕಡ್ಡಾಯವಾಗಿ ಕನ್ನಡ ಬರುವ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವಂತೆ ಕೋರಿ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಈ ವೇಳೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕೆ ಟಿ ಶಿವಕುಮಾರ್ “ಕರ್ನಾಟಕದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕನ್ನಡ ಭಾಷೆ ಬರದ ಸಿಬ್ಬಂದಿಗಳನ್ನು, ಹೊರ ರಾಜ್ಯದವರನ್ನು ನೇಮಕ ಮಾಡಿಕೊಂಡಿರುವುದು ಕನ್ನಡಿಗರಿಗೆ ಮತ್ತು ಕನ್ನಡಭಾಷೆಗೆ ಅವಮಾನಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಸಿಬ್ಬಂದಿಗಳು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವುದರಿಂದ ಬಹಳಷ್ಟು ಗ್ರಾಹಕರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವ್ಯವಹಾರ ಮಾಡಲು ತೊಂದರೆಯಾಗಿರುತ್ತದೆ. ಕೆಲವು ಗ್ರಾಹಕರು ಎಷ್ಟೋ ಮಂದಿ ಬ್ಯಾಂಕಿಗೆ ಬರದೇ ಖಾಸಗಿ ಬ್ಯಾಂಕುಗಳಲ್ಲಿ ವ್ಯವಹಾರ ಮಾಡುತ್ತಿರುತ್ತಾರೆ. ಕನ್ನಡ ಭಾಷೆ ಬರುವ ಸಿಬ್ಬಂದಿಗಳನ್ನು ಕರ್ನಾಟಕದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಮತ್ತು ಅಂಚೆ ಕಛೇರಿಗಳಲ್ಲಿ ನೇಮಕ ಮಾಡಬೇಕು “ಎಂದು ಒತ್ತಾಯಿಸಿದರು.
“ಹಾಲಿ ಕರ್ನಾಟಕದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ 2-3 ಬಾರಿ ಕನ್ನಡ ಪುಸ್ತಕಗಳನ್ನು ಸಂಘಟನೆಯಿಂದ ನೀಡಿ ಕನ್ನಡದಲ್ಲಿಯೇ ಮಾತನಾಡುವಂತೆ ಮತ್ತು ಕನ್ನಡವನ್ನು ಕಲಿಯುವಂತೆ ಸಿಹಿತಿನಿಸಿ ಮನವಿ ಸಹ ಮಾಡಿಕೊಂಡಿರುತ್ತೇವೆ. ರಾಜ್ಯ ಸರ್ಕಾರ ಕಳೆದ ವರ್ಷ ಎಲ್ಲಾ ಅಂಗಡಿ ಮುಂಗಟ್ಟುಗಳು, ಕಛೇರಿಗಳಲ್ಲಿ ಕಡ್ಡಾಯವಾಗಿ ನಾಮಫಲಕಗಳು 60% ರಷ್ಟು ಕನ್ನಡದಲ್ಲಿರಬೇಕೆಂದು ಆದೇಶಿಸಿರುತ್ತದೆ. ಆದರೂ ಸಹ ಇದುವರೆಗೂ ಕನ್ನಡವನ್ನು ಬಳಸದೇ ಇರುವುದು ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ಮಾಡಿದ ದ್ರೋಹವಾಗಿರುತ್ತದೆ” ಎಂದು ಕಿಡಿಕಾರಿದರು.

“ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಭಾಷೆಯನ್ನು ಮಾತನಾಡಲು ಬರೆಯಲು ಬರುವ ಸಿಬ್ಬಂದಿಗಳನ್ನು ಮಾತ್ರ ನೇಮಕ ಮಾಡಬೇಕು. ಸಿಬ್ಬಂದಿಗಳಿಗೆ ಕನ್ನಡವನ್ನು ಕೂಡಲೇ ಕಲಿಯುವಂತೆ ಅಥವಾ ಕನ್ನಡ ಕಲಿಯದಿರುವ ಸಿಬ್ಬಂದಿಗಳನ್ನು ನಮ್ಮ ರಾಜ್ಯ ಬಿಟ್ಟು ಬೇರೆಡೆ ವರ್ಗಾವಣೆ
ಮಾಡಬೇಕು. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ರಾಷ್ಟ್ರೀಕೃತ ಬ್ಯಾಂಕ್ ಗಳ ಮುಂದೆ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ” ಎಂದು ಎಚ್ಚರಿಸಿದರು.
ಇದೇ ವೇಳೆ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕರುನಾಡ ವಿಜಯಸೇನೆ ಸಂಘಟನೆಯ ಮುಖಂಡರಾದ ಗೋಪಿನಾಥ್, ಸಂತೋಷ್, ನಾಗೇಶ್ ಅವಿನಾಶ್, ಹರೀಶ್ ಕುಮಾರ್, ತಿಪ್ಪೇಸ್ವಾಮಿ, ನಿರಂಜನ್, ಅಖಿಲೇಶ್ ನಾಯ್ಕ, ಜಗದೀಶ್, ಮಧುಸೂದನ, ರತ್ನಮ್ಮ, ಎರ್ರಿಸ್ವಾಮಿ, ನಿಸಾರ್ ಅಹಮದ್, ನಾಗರಾಜ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
