ಚಳ್ಳಕೆರೆ ನಗರಸಭೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಹೋಟೆಲ್ ಗಳಿಗೆ ಭೇಟಿ ನೀಡಿ ಆಹಾರ ತಯಾರಿಕೆ, ಶುಚಿತ್ವ ಮತ್ತು ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿ ಹೋಟೆಲ್ ಉದ್ಯಮಿಗಳಿಗೆ ಬಿಸಿ ಮುಟ್ಟಿಸಿ, ನೈರ್ಮಲ್ಯ ಸ್ವಚ್ಛತೆ ಕಾಪಾಡದ ಹೋಟೆಲ್ ಮುಚ್ಚಿಸಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಬೆಳ್ಳಂಬೆಳಗ್ಗೆ ನಗರದ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಚಳ್ಳಕೆರೆಯ ನೆಹರು ವೃತ್ತದ ಬಳಿ, ರಸ್ತೆ ಬದಿಯಲ್ಲಿರುವ ಹೋಟೆಲ್ ಗಳಿಗೆ ಭೇಟಿ ನೀಡಿದ ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ನಗರಸಭೆಯ ಆಯುಕ್ತರು, ಆಹಾರ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅನೇಕ ಹೋಟೆಲ್ಗಳಲ್ಲಿ ಶುಚಿತ್ವ ಕಾಪಾಡದ ಮತ್ತು ಅನೈರ್ಮಲ್ಯ ಆಹಾರ ವ್ಯವಸ್ಥೆ ಕಂಡು ಬಂದಿದೆ. ಆಹಾರ ತಯಾರಿಕೆಯಲ್ಲಿ ಶುಚಿತ್ವ ಕಾಪಾಡದೇ ಕಳಪೆ ಕಾಳು, ತರಕಾರಿಗಳನ್ನು ಬಳಸದಿರುವುದು ಕೂಡ ಕಂಡು ಬಂದಿದೆ ಎಂದು ನಗರಸಭೆಯ ಮೂಲಗಳು ತಿಳಿಸಿವೆ.

ಈ ನೆಲೆಯಲ್ಲಿ ಶುಚಿತ್ವ ಕಾಪಾಡದ ಹೋಟೆಲ್ಗಳಿಗೆ ಗಂಭೀರ ಎಚ್ಚರಿಕೆ ನೀಡಿ ಹೋಟೆಲ್ಗಳನ್ನು ಮುಚ್ಚುವಂತೆ ತಿಳಿಸಲಾಗಿದೆ. ನೆಹರು ವೃತ್ತದ ಬಳಿಯ ಹೋಟೆಲ್ ಅಂದರಲ್ಲಿ ಗಂಭೀರ ವಾದ ಅನೈರ್ಮಲ್ಯ ವ್ಯವಸ್ಥೆ ಮತ್ತು ಆಹಾರ ತಯಾರಿಕೆಯಲ್ಲಿ ಲೋಪ ಕಂಡು ಬಂದಿರುವ ಹಿನ್ನೆಲೆಯಲ್ಲಿ ಹೋಟೆಲನ್ನು ಬಂದ್ ಮಾಡಿಸಿದರು. ಅಲ್ಲದೆ ಹೋಟೆಲ್ ಮಾಲೀಕರು, ಕೆಲಸಗಾರರು ಮತ್ತು ಸಾರ್ವಜನಿಕರಲ್ಲಿ ನೈರ್ಮಲ್ಯ ಮತ್ತು ಉತ್ತಮ ಆಹಾರ, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. ಮುಂದಿನ ದಿನಗಳಲ್ಲಿ ಉತ್ತಮ ಶುಚಿತ್ವ ಮತ್ತು ಆಹಾರದ ನೈರ್ಮಲ್ಯ ಕಾಪಾಡಬೇಕು. ಇಲ್ಲವಾದಲ್ಲಿ ಗಂಭೀರ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಭೇಟಿಯ ಮತ್ತು ಪರಿಶೀಲನೆ ಸಮಯದಲ್ಲಿ ಹೋಟೆಲ್ ಮಾಲೀಕರಿಗೆ ಎಚ್ಚರಿಕೆಯಾಗಿ ನೀಡಿದ್ದಾರೆ.

ಈ ವೇಳೆ ಸ್ಥಳೀಯ ಮಾಧ್ಯಮವೊಂದಕ್ಕೆ ಮಾತನಾಡಿದ ನಗರಸಭೆ ಅಧ್ಯಕ್ಷೆ ಶಿಲ್ಪ ಮುರಳಿ,”ನಗರಸಭೆಯ ಉಪಾಧ್ಯಕ್ಷರು, ಆಯುಕ್ತರು, ಸ್ಥಾಯಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳ ತಂಡದೊಂದಿಗೆ ಸ್ವಚ್ಛತೆ ಮೂಡಿಸುವ ಸಲುವಾಗಿ ನಗರದ ಹೋಟೆಲ್ಗಳಿಗೆ ಮತ್ತು ತಿಂಡಿ ತಯಾರಿಕೆ ಸ್ಥಳಗಳಿಗೆ ಭೇಟಿ ನೀಡಿದ್ದು, ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಹಲವೆಡೆ ಸ್ವಚ್ಛತೆಯ ಕೊರತೆ ಕಂಡು ಬಂದಿದ್ದು ಎಚ್ಚರಿಕೆ ನೀಡಿದ್ದೇವೆ. ನಗರದ ಮಧ್ಯಭಾಗದ ಹೋಟೆಲ್ ಒಂದರಲ್ಲಿ ಆಹಾರ ತಯಾರಿಕೆಯ ಎಲ್ಲಿ ಸ್ವಚ್ಛತೆ ಮತ್ತು ಕಳಪೆ ತಯಾರಿಕೆ ಕಂಡು ಬಂದಿದ್ದು ಎಚ್ಚರಿಕೆ ನೀಡಿ ಹೋಟೆಲ್ ಅನ್ನು ಮುಚ್ಚಿಸಿದ್ದೇವೆ. ಮುಂದಿನ ದಿನಗಳಲ್ಲಿ ನಗರದ ಎಲ್ಲಾ ಹೋಟೆಲ್ ಮಾಲೀಕರು ಆಹಾರದಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಗಮನ ಹರಿಸಬೇಕು. ಇಲ್ಲವಾದಲ್ಲಿ ನಗರಸಭೆಯಿಂದ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ಶಕ್ತಿ ಯೋಜನೆ | ರಾಜ್ಯಾದ್ಯಂತ 500 ಕೋಟಿ ಮಹಿಳೆಯರ ಪ್ರಯಾಣ: ಕಾರ್ಮಿಕರಿಗೆ ಸುಲಭ ಸಂಚಾರ, ಆರ್ಥಿಕ ಬಲ
ಪರಿಶೀಲನೆ ಸಮಯದಲ್ಲಿ ನಗರಸಭೆಯ ತಂಡದಲ್ಲಿ ಉಪಾಧ್ಯಕ್ಷೆ ಕವಿತಾ ಬೋರಯ್ಯ, ಸದಸ್ಯೆ ಮತ್ತು ಮಾಜಿ ಅಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ನಗರಸಭೆ ಆಯುಕ್ತ ಜಗಾರೆಡ್ಡಿ, ಅಧಿಕಾರಿ, ಸತೀಶ್, ಆರೋಗ್ಯ ಅಧಿಕಾರಿಗಳಾದ ಮಹಾಲಿಂಗಪ್ಪ, ಗಣೇಶ್, ಸಿಬ್ಬಂದಿಗಳಾದ ಭದ್ರಪ್ಪ, ಮಹಾಂತೇಶ ಸೇರಿದಂತೆ ಇತರ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.