ನವ ಉದಾರೀಕರಣದ ನೀತಿಗಳು ಅನುಷ್ಠಾನಗೊಂಡ ಮೂರು ದಶಕಗಳ ಈ ಅವಧಿಯಲ್ಲಿ ಭಾರತ ಆರ್ಥಿಕ ಸಮಾನತೆಯ ಉತ್ತುಂಗಕ್ಕೆ ತಲುಪಿದೆ. ಕಾರ್ಮಿಕರು, ಕೂಲಿಕಾರರು ಸೇರಿದಂತೆ ದುಡಿಯುವ ಜನರು ಹಸಿವಿನಿಂದ ಬಳುತ್ತಿದ್ದಾರೆ. ಬಡವರು ಹಸಿವಿನಿಂದ ಬಳಲುತ್ತಿರುವ ಭಾರತದಲ್ಲಿ 284 ಬಿಲಿಯನೇರ್‌ಗಳನ್ನು ಸೃಷ್ಟಿಸಿರುವುದು ಮೋದಿಯವರ ಆಡಳಿತ ಕೊಡುಗೆ ಎಂದು CITU ಕರ್ನಾಟಕ ರಾಜ್ಯ ಉಪಾಧ್ಯಕ್ಷ ಡಾ. ಕೆ ಪ್ರಕಾಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
CITU 18ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರಂತರವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆಯೇ ಹೊರತು ದುಡಿಯುವ ವರ್ಗದ ಪರವಾಗಿ ಯಾವುದೇ ನೀತಿಗಳನ್ನು ಜಾರಿಗೊಳಿಸುತ್ತಿಲ್ಲ. ಇಂತಹ ಸರಕಾರಗಳ ಆಕ್ರಮಣಕಾರಿ ನೀತಿಗಳನ್ನು ಕಾರ್ಮಿಕ ವರ್ಗ ಸಮರಶೀಲ ಹೋರಾಟಗಳ ಮೂಲಕವೇ ಹಿಮ್ಮೆಟ್ಟಿಸಲು ಸಾಧ್ಯ” ಎಂದು ಹೇಳಿದರು.
CITU ದ.ಕ. ಜಿಲ್ಲಾಧ್ಯಕ್ಷ ಜೆ ಬಾಲಕೃಷ್ಣ ಶೆಟ್ಟಿ ಮಾತನಾಡಿ, “ಜಿಲ್ಲೆಯ ಕಾರ್ಮಿಕ ಚಳವಳಿಯ ಧೀರೋದತ್ತವಾದ ಹೋರಾಟಗಳನ್ನು ಮೆಲುಕು ಹಾಕುತ್ತಾ, ಮುಂಬರುವ ದಿನಗಳಲ್ಲಿ ಬಲಿಷ್ಠವಾದ ಕಾರ್ಮಿಕ ಚಳವಳಿಯನ್ನು ಕಟ್ಟುವ ಮೂಲಕ ಜಿಲ್ಲೆಯ ಸೌಹಾರ್ದತಾ ಪರಂಪರೆಯನ್ನು ಉಳಿಸಲು ಕಾರ್ಮಿಕ ವರ್ಗ ಕಟಿಬದ್ದರಾಗಿ ಶ್ರಮಿಸಬೇಕು” ಎಂದರು.
ಇದನ್ನೂ ಓದಿ: ದಕ್ಷಿಣ ಕನ್ನಡ | ಉದ್ಯೋಗಕ್ಕಾಗಿ ಡಿವೈಎಫ್ಐ ಬೃಹತ್ ಹೋರಾಟ; ಸೆ.7ರಿಂದ ಯುವ ಜಾಗೃತಿ ಜಾಥಾ
ವೇದಿಕೆಯಲ್ಲಿ CITU ಜಿಲ್ಲಾ ನಾಯಕ ವಸಂತ ಅಚಾರಿ, ಸುಕುಮಾರ್ ತೊಕ್ಕೋಟು, ಬಿ ಎಂ ಭಟ್, ರಮಣಿ ಮೂಡಬಿದ್ರೆ, ಪದ್ಮಾವತಿ ಶೆಟ್ಟಿ, ವಸಂತಿ ಕುಪ್ಪೆಪದವು, ಸುಂದರ ಕುಂಪಲ, ಗಿರಿಜಾ, ಯೋಗೀಶ್ ಜಪ್ಪಿನಮೊಗರು CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಜಿಲ್ಲಾ ಉಪಾಧ್ಯಕ್ಷ ರವಿಚಂದ್ರ ಕೊಂಚಾಡಿ ಹಾಗೂ ಇತರರು ಉಪಸ್ಥಿತರಿದ್ದರು.