ಕಲ್ಯಾಣ ಕರ್ನಾಟಕ ಸೇರಿ ರಾಜ್ಯಾದ್ಯಂತ ಪ್ರಾಥಮಿಕ ಅಂದಾಜಿನ ಪ್ರಕಾರ ಇದುವರೆಗೆ ಸುಮಾರು 9,60,578 ಹೆಕ್ಟೇರುಗಳಷ್ಟು ಬೆಳೆ ಹಾನಿಯಾಗಿದೆ. ಎನ್‌ಡಿಆರ್‌ಎಫ್ ಮತ್ತು ರಾಜ್ಯ ಸರ್ಕಾರದ ಪ್ಯಾಕೇಜ್ ಸೇರಿ ₹2,000 ದಿಂದ ₹2,500ಕ್ಕೂ ಹೆಚ್ಚು ಕೋಟಿ ಹಣ ಪರಿಹಾರ ಕೊಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಮಂಗಳವಾರ ವಿಜಯಪುರ, ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ʼವೈಮಾನಿಕ ಸಮೀಕ್ಷೆ ಬಳಿಕ ಶಾಸಕರು, ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿ ನಾಲ್ಕು ಜಿಲ್ಲೆಗಳ ಪರಿಸ್ಥಿತಿ ಅವಲೋಕಿಸಿದ್ದೇನೆ. ನಾಲ್ಕು ಜಿಲ್ಲೆಗಳಲ್ಲಿ 117 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ. 80 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಕೃಷ್ಣಾ ನದಿಯಿಂದ ಅಪಾರ ಪ್ರಮಾಣದ ನೀರು ಬಿಟ್ಟಿರುವುದು ಹಾಗೂ ನಾಲ್ಕೂ ಜಿಲ್ಲೆಗಳಲ್ಲಿ ಆಗಸ್ಟ್-ಸೆಪ್ಟೆಂಬರ್ ನಲ್ಲಿ ವಿಪರೀತ ಮಳೆ ಆಗಿರುವುದೂ ಸೇರಿ ಅನಾಹುತ ಮತ್ತು ಸಂಕಷ್ಟದ ಪ್ರಮಾಣವನ್ನು ಹೆಚ್ಚಾಗಿಸಿದೆʼ ಎಂದರು.
ʼಪ್ರವಾಹದಿಂದ ಸಂಕಷ್ಟದಲ್ಲಿರುವ ರೈತರು, ಜನಸಾಮಾನ್ಯರಿಗೆ ನೆರವಾಗುವ ಉದ್ದೇಶದಿಂದ ಎನ್‌ಡಿಆರ್‌ಎಫ್ ಪರಿಹಾರದ ಜೊತೆಗೆ ಹೆಚ್ಚುವರಿ ಪ್ಯಾಕೇಜ್ ಅನ್ನು ನಮ್ಮ ಸರ್ಕಾರ ನೀಡಲಿದೆ. ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಕುಷ್ಕಿ ಜಮೀನಿಗೆ ಹೆಕ್ಟೇರ್‌ಗೆ ₹8,500 ನೀರಾವರಿ ಜಮೀನಿಗೆ ಹೆಕ್ಟೇರ್‌ಗೆ ₹17,000, ಬಹು ವಾರ್ಷಿಕ ಬೆಳೆಗೆ ₹22,500 ಇದೆ. ಈ ಹಣವನ್ನು ಸಮೀಕ್ಷೆ ಮುಗಿದ ತಕ್ಷಣ ಬಿಡುಗಡೆ ಆಗಲಿದೆʼ ಎಂದು ತಿಳಿಸಿದರು.
ʼಎನ್‌ಡಿಆರ್‌ಎಫ್ ಹಣದ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತೀ ಹೆಕ್ಟೇರ್‌ಗೆ ₹8,500 ಪರಿಹಾರ ಕೊಡಲಿದೆ. ಇದರಿಂದಾಗಿ ಕುಷ್ಕಿ ಜಮೀನಿಗೆ ಹೆಕ್ಟೇರ್‌ಗೆ ₹8,500 ರ ಜೊತೆಗೆ ₹8,500 ಸೇರಿ ಒಟ್ಟು ₹17,000 ಸಿಗಲಿದೆ. ನೀರಾವರಿ ಜಮೀನಿಗೆ ₹17,000ದ ಜೊತೆ ₹8,500 ಸೇರಿ ಒಟ್ಟು ₹25,500 ಸಿಗಲಿದೆ. ಬಹುವಾರ್ಷಿಕ ಬೆಳೆಗೆ ಹೆಕ್ಟೇರ್‌ಗೆ ₹22,500ರ ಜೊತೆ ₹8,500 ಸೇರಿ ಒಟ್ಟು ₹31,000 ಸಿಗುತ್ತದೆʼ ಎಂದು ಭರವಸೆ ನೀಡಿದರು.
ʼರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿರುವ ಅಂದಾಜಿದೆ. ಈ ಪ್ರಮಾಣ ಇನ್ನೂ ಹೆಚ್ಚು ಆಗಬಹುದು. ಜಂಟಿ ಸಮೀಕ್ಷೆ ಪೂರ್ಣ ಆದ ಬಳಿಕ ಸ್ಪಷ್ಟವಾಗಿ ಗೊತ್ತಾಗುತ್ತದೆ. ಸದ್ಯ 5 ಲಕ್ಷ ಹೆಕ್ಟೇರ್ ನಲ್ಲಿ ಮಾತ್ರ ಜಂಟಿ ಸಮೀಕ್ಷೆ ಮುಗಿದಿದೆ. ಸಮೀಕ್ಷೆ ಪೂರ್ಣಗೊಂಡ ತಕ್ಷಣ ಹಣ ಅವರ ಖಾತೆಗಳಿಗೆ ಹಣ ಹೋಗುತ್ತದೆʼ ಎಂದು ಹೇಳಿದರು.
ʼಪ್ರವಾಹದಿಂದ ಬೆಳೆ ಜೊತೆಗೆ ಮೂಲಭೂತ ಸೌಕರ್ಯಗಳು ಅಪಾರ ಪ್ರಮಾಣದಲ್ಲಿ ಹಾನಿ ಆಗಿರುವುದರಿಂದ ರಾಜ್ಯಕ್ಕೆ ಪರಿಹಾರ ಒದಗಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು. ವಿಜಯಪುರ, ಬಾಗಲಕೋಟೆ, ಯಾದಗಿರಿ, ಬೀದರ್, ರಾಯಚೂರು, ಗದಗ, ಕಲಬುರಗಿ, ಧಾರವಾಡ ಸೇರಿ 8 ಜಿಲ್ಲೆಗಳಲ್ಲಿ ಶೇ 95ರಷ್ಟು ಬೆಳೆ ಹಾನಿ ಆಗಿದೆ. ಕಳೆದ ವರ್ಷ ಶೇ 22 ರಷ್ಟು ಮಳೆ ಹೆಚ್ಚಾಗಿದೆ. ಈ ವರ್ಷ ಶೇ 26 ರಷ್ಟು ಹೆಚ್ಚು ಅಂದರೆ ವಾಡಿಕೆಗಿಂತ ವಿಪರೀತ ಹೆಚ್ಚಿನ ಮಳೆ ಬಿದ್ದಿದೆʼ ಎಂದರು.
ʼರಾಜ್ಯದಲ್ಲಿ ಜೂ.1 ರಿಂದ ಸೆಪ್ಟೆಂಬರ್ 29ರವರೆಗೆ ಸರಾಸರಿ 845 ಮಿಮೀ ಮಳೆಯಾಗಬೇಕಾಗಿತ್ತು. ಆದರೆ, 879 ಮಿಮೀ ಮಳೆಯಾಗಿದೆ. ವಾಡಿಕೆಗಿಂತ ಶೇ 4ರಷ್ಟು ಹೆಚ್ಚುವರಿ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯವರೆಗೆ 972 ಮಿಮೀ ಮಳೆಯಾಗಿತ್ತು. ಶೇ 22ರಷ್ಟು ಹೆಚ್ಚಿನ ಮಳೆಯಾಗಿತ್ತು. ಆದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ವರ್ಷ ಹಿಂದೆಂದೂ ಕಾಣದ ಪ್ರಮಾಣದಲ್ಲಿ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಸರಾಸರಿ ಮಳೆಯಾಗಬೇಕಾಗಿದ್ದದ್ದು 472 ಮಿಮೀ. ಆದರೆ ಈ ವರ್ಷ 576 ಮಿಮೀಗಳಷ್ಟು ಅಂದರೆ ಶೇ. 22ರಷ್ಟು ಹೆಚ್ಚಿನ ಮಳೆಯಾಗಿದೆʼ ಎಂದು ವಿವರಿಸಿದರು.
ʼಒಟ್ಟು ಹಾನಿಯಾದ ಬೆಳೆಗಳಲ್ಲಿ 8,88,953 ಹೆಕ್ಟೇರುಗಳಷ್ಟು ಕೃಷಿ ಬೆಳೆ ಮತ್ತು 71,624 ಹೆಕ್ಟೇರುಗಳಷ್ಟು ತೋಟಗಾರಿಕಾ ಬೆಳೆಗಳು ನಷ್ಟವಾಗಿದೆಯೆಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ. ಪೂರ್ಣ ಪ್ರಮಾಣದ ಸಮೀಕ್ಷೆಯ ನಂತರ ಈ ಪ್ರಮಾಣ ಹೆಚ್ಚೂ ಆಗಬಹುದು. ಇದುವರೆಗಿನ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 9,60,578 ಹೆಕ್ಟೇರುಗಳಷ್ಟು ಬೆಳೆ ಹಾನಿಯಾಗಿದ್ದರೆ, ಉತ್ತರ ಕರ್ನಾಟಕದ ಈ 8 ಜಿಲ್ಲೆಗಳಲ್ಲಿಯೇ 9,03,966 ಹೆಕ್ಟೇರುಗಳಷ್ಟು ಬೆಳೆಹಾನಿ ಸಂಭವಿಸಿದೆ. ಶೇ 95 ರಷ್ಟು ಹಾನಿ ಈ ಜಿಲ್ಲೆಗಳಲ್ಲಿಯೇ ಸಂಭವಿಸಿದೆ. ಕಳೆದ ಎರಡು ತಿಂಗಳಿಂದ ನೆಲ ಒಣಗದಂತೆ ಮಳೆಯಾಗುತ್ತಿದೆʼ ಎಂದು ತಿಳಿಸಿದರು.
ʼರಾಜ್ಯದಲ್ಲಿ ಜೂನ್ 1ರಿಂದ ಈವರೆಗೆ ಮಳೆ ಹಾನಿಯಿಂದಾಗಿ 52 ಮಂದಿ ಮರಣ ಹೊಂದಿದ್ದಾರೆ. ಸೆಪ್ಟೆಂಬರ್ 28 ರವರೆಗಿನ ಎಲ್ಲಾ ಮೃತರ ವಾರಸುದಾರರಿಗೆ ಪರಿಹಾರ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 422 ಜಾನುವಾರುಗಳು ಮರಣ ಹೊಂದಿವೆ. ಇದರಲ್ಲಿ ಯಾದಗಿರಿ ಜಿಲ್ಲೆ ಒಂದರಲ್ಲೇ 245 ಜಾನುವಾರುಗಳು ಮರಣ ಹೊಂದಿವೆ. ಕಲಬುರಗಿ ಜಿಲ್ಲೆಯಲ್ಲಿ 27, ವಿಜಯಪುರದಲ್ಲಿ 3, ಬೀದರ್ ಜಿಲ್ಲೆಯಲ್ಲಿ 38 ಜಾನುವಾರುಗಳು ಮರಣ ಹೊಂದಿವೆ. ಈ ಪೈಕಿ 407 ಜಾನುವಾರುಗಳ ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆʼ ಎಂದು ಮಾಹಿತಿ ನೀಡಿದರು.
ʼರಾಜ್ಯದಲ್ಲಿ 547 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಇವುಗಳಿಗೆ ತಲಾ ₹1.20 ಲಕ್ಷ ಪರಿಹಾರ ನೀಡಲಾಗಿದೆ. ಅನಧಿಕೃತವಾಗಿ ನಿರ್ಮಿಸಿದ್ದ 62 ಮನೆಗಳಿಗೆ ತಲಾ ₹1 ಲಕ್ಷ ಪರಿಹಾರ ನೀಡಲಾಗಿದೆ. ಭಾಗಶಃ ಹಾನಿಯಾದ ಮನೆಗಳು (ಶೇ.50 ರಿಂದ 75) ಇವುಗಳಿಗೆ ತಲಾ ₹50 ಸಾವಿರ ಪರಿಹಾರ ವಿತರಿಸಲಾಗಿದೆ. ಶೇ 20ರಿಂದ 50ರಷ್ಟು ಹಾನಿಯಾದ ಮನೆಗಳ ಸಂಖ್ಯೆ 3,166. ಶೇ.15ರಿಂದ 20ರಷ್ಟು ಹಾನಿಯಾಗಿದ್ದ 3,881 ಮನೆಗಳಿಗೆ ₹6,500 ಪ್ರಕಾರ ಪರಿಹಾರ ನೀಡಲಾಗಿದೆ. ಒಟ್ಟಾರೆ ಇದುವರೆಗೆ ₹23.12 ಕೋಟಿ ಪರಿಹಾರವಾಗಿ ಮನೆಗಳನ್ನು ಕಳೆದುಕೊಂಡವರಿಗೆ ನೀಡಲಾಗಿದೆ. ಬಟ್ಟೆ ಮತ್ತು ಗೃಹ ಬಳಕೆ ವಸ್ತುಗಳನ್ನು ಕಳೆದುಕೊಂಡ 4,858 ಕುಟುಂಬಗಳಿಗೆ ಈ ವರೆಗೆ ₹2.42 ಕೋಟಿ ಪರಿಹಾರ ನೀಡಲಾಗಿದೆ’ ಎಂದರು.
ʼರಸ್ತೆ, ಸೇತುವೆ ಮುಂತಾದವುಗಳ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಸಮೀಕ್ಷೆ ಪೂರ್ಣಗೊಂಡು ವರದಿ ಬಂದ ಕೂಡಲೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪ್ರತಿ ಕ್ಷೇತ್ರಕ್ಕೆ ವಿಶೇಷ ಅನುದಾನದ ರೂಪದಲ್ಲಿ 25 ರಿಂದ 50 ಕೋಟಿ ನೀಡಲಾಗಿದೆʼ ಎಂದರು.
ಇದನ್ನೂ ಓದಿ : ಬೀದರ್ ಜಿಲ್ಲೆಯಲ್ಲಿ ಪ್ರವಾಹ : ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ
ಕಂದಾಯ ಸಚಿವ ಕೃಷ್ಣ ಭೈರೇಗೌಡ, ಕೃಷಿ ಸಚಿವ ಚೆಲುವರಾಯಸ್ವಾಮಿ, ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಚಿವರಾದ ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್. ರಹೀಂ ಖಾನ್, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಜಗದೇವ ಗುತ್ತೇದಾರ್, ಚಂದ್ರಶೇಖರ್ ಪಾಟೀಲ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಕಲಬುರಗಿ, ಯಾದಗಿರಿ, ಬೀದರ್ ಇತರೆ ಜಿಲ್ಲೆಗಳ ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.