ಬೋಳಿಯಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾರದಗುಡ್ಡೆ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಡಿವೈಎಫ್ಐ ಕಾರ್ಯಕರ್ತರು ಬೋಳಿಯಾರ್ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.
“ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲೆ(ಕರಿಸಾಲೆ)ಯ ಆವರಣ ಗೋಡೆಯು ಬಿರುಕು ಬಿಟ್ಟಿದ್ದು, ಬೀಳುವ ಸ್ಥಿತಿಯಲ್ಲಿದೆ. ಪಕ್ಕದಲ್ಲೇ ಕಾರ್ಯಾಚರಿಸುತ್ತಿರುವ ಅಂಗನವಾಡಿಯಲ್ಲಿರುವ ಪುಟ್ಟ ಪುಟ್ಟ ಮಕ್ಕಳು ಆವರಣದ ಗೋಡೆ ಕುಸಿಯುವ ಭೀತಿಯಲ್ಲಿಯೇ ಕೂತು ಪಾಠ ಕೇಳಬೇಕಾಗಿದೆ. ಅಂಗನವಾಡಿ ಕಟ್ಟಡದ ಗೋಡೆಯೂ ಕೂಡ ಬಿರುಕು ಬಿಟ್ಟಿದ್ದು, ಕುಸಿಯುವ ಭೀತಿ ಎದುರಾಗಿದೆ. ಜನಪ್ರತಿನಿಧಿಗಳಿಗೆ ವಿವರವಾಗಿ ತಿಳಿಸಿದರೂ ಚಕಾರ ಎತ್ತುತ್ತಿಲ್ಲ” ಎಂದು ಆರೋಪಿಸಿದರು.

“ಜಿಲ್ಲೆಯಲ್ಲಿ ಈಗಾಗಲೇ ಗೋಡೆ ಬಿದ್ದಿರುವ ಹಲವಾರು ಘಟನೆಗಳು ನಡೆದು ಹೋಗಿ ಜೀವಹಾನಿ ಸಂಭವಿಸಿದೆ. ಸ್ಥಳೀಯ ಶಾಸಕರು ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಲು ಬರುವ ಶಾಲೆ ಇದಾಗಿದೆ. ಶಾಲೆಯ ಸಮೀಪದಲ್ಲಿಯೇ ಶಾಸಕರ ಶಾಶ್ವತ ವಿಳಾಸದ ಮನೆಯೂ ಇದೆ. ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಕಾರ್ಯಾಚರಿಸುತ್ತಿರುವ ಈ ಶಾಲೆಯ ಗೋಡೆಗಳು ಬಿರುಕು ಬಿಟ್ಟಿರುವುದರಿಂದ ಮಳೆಗಾಲದಲ್ಲಿ ಮಳೆನೀರು ಸೋರುತ್ತಿರುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಮಳೆನೀರಿನಿಂದ ಗೋಡೆ ತೋಯ್ದಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಕಾರಣಕ್ಕಾಗಿ ಶಾಲೆಯ ಒಂದು ಕಟ್ಟಡದ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ಇಷ್ಟೆಲ್ಲ ಅವ್ಯವ್ಯಸ್ಥೆಯಿಂದ ಕೂಡಿದ ಈ ಶಾಲೆಯನ್ನು ಸರಿಪಡಿಸಲು ಸ್ಥಳೀಯ ಜನಪ್ರತಿನಿಧಿಗಳು ಮುಂದೆ ಬಾರದ ಕಾರಣ ಶಾಲೆಯು ಬಂದಾಗುವ ಭೀತಿ ಎದುರಾಗಿದೆ. ಹಾಗಾಗಿ ಸರ್ಕಾರಿ ಶಾಲೆ ಉಳಿಸುವ ದೃಷ್ಟಿಯಿಂದ ಶಾಲೆಯಲ್ಲಿರುವ ಎಲ್ಲ ಅವ್ಯವಸ್ಥೆಗಳನ್ನು ಸರಿಪಡಿಸಬೇಕು” ಎಂದು ಡಿವೈಎಫ್‌ಐ ಕಾರ್ಯಕರ್ತರು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಕೋಲಾರ | ವಕ್ಕಲೇರಿ ಶಾಲೆಯ ವಿದ್ಯಾರ್ಥಿಗಳಿಗೆ ಹೋಂಡಾ ಕಂಪೆನಿಯಿಂದ ನೋಟ್ ಬುಕ್, ಬ್ಯಾಗ್ ವಿತರಣೆ
ನಿಯೋಗದಲ್ಲಿ ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಜ್ವಾನ್ ಹರೇಕಳ, ಉಪಾಧ್ಯಕ್ಷ ರಝಾಕ್ ಮುಡಿಪು, ಮುಖಂಡರಾದ ಇರ್ಫಾನ್ ಇರಾ, ಸಾಮಾಜಿಕ ಕಾರ್ಯಕರ್ತ ಶಮೀರ್, ಸ್ಥಳೀಯರಾದ ಫಯಾಜ್, ರಫೀಕ್, ಸಲಾಮ್ ಜಾರದಗುಡ್ಡೆ, ಬಾಪು ಅಮ್ಮೆಂಬಳ ಇದ್ದರು.