ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎರಡು ಪ್ರಮುಖ ವಾರ್ಡ್‌ಗಳಲ್ಲಿ ಕಾಮಾಲೆ ಅಥವಾ ಜಾಂಡೀಸ್(ಹೆಪಟೈಟಿಸ್) ಪ್ರಕರಣಗಳು ಗಣನೀಯವಾಗಿ ಪತ್ತೆಯಾಗುತ್ತಿರುವುದಾಗಿ ವರದಿಯಾಗಿವೆ.
ಜೂನ್ 23ರಿಂದ ಜುಲೈ 9ರವರೆಗಿನ ಕೇವಲ ಎರಡು ವಾರಗಳ ಅವಧಿಯಲ್ಲಿಯೇ 19 ಹೊಸ ಪ್ರಕರಣಗಳು ಪತ್ತೆಯಾಗಿರುವುದು ಜಿಲ್ಲಾ ಆರೋಗ್ಯ ಇಲಾಖೆಯನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
“ಮಂಗಳೂರಿನ ಡೋಂಗರಕೇರಿ, ಅಳಕೆ ಮತ್ತು ಕುದ್ರೋಳಿ ಸುತ್ತಮುತ್ತಲಿನ ಎರಡು ವಾರ್ಡ್‌ಗಳಲ್ಲಿ ಹೆಪಟೈಟಿಸ್ ‘ಎ’ ಮತ್ತು ಹೆಪಟೈಟಿಸ್ ‘ಇ’ ಕಾಮಾಲೆ ಸೋಂಕು ಪ್ರಮುಖವಾಗಿ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಯುದ್ಧೋಪಾದಿಯಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿದೆ” ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್ ಆರ್ ತಿಮ್ಮಯ್ಯ ತಿಳಿಸಿದ್ದಾರೆ.
“ಈ ಪರಿಸರದಿಂದ ಪರೀಕ್ಷೆಗಾಗಿ ಒಟ್ಟು 40 ಕಡೆ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪೈಕಿ ಒಂದರಲ್ಲಿ ರೋಗಾಣುಗಳು ಪತ್ತೆಯಾಗಿದ್ದು 13 ಮಾದರಿಗಳ ವರದಿ ಬರಬೇಕಷ್ಟೆ” ಎಂದಿದ್ದಾರೆ.
“ಹೆಪಟೈಟಿಸ್ ‘ಬಿ’ ಗೆ ಅತ್ಯಂತ ಪರಿಣಾಮಕಾರಿ ಲಸಿಕೆ ಲಭ್ಯವಿದೆ. ಮಕ್ಕಳಿಗೆ ಹುಟ್ಟಿದ ತಕ್ಷಣ, 6ನೇ ವಾರ, 10ನೇ ವಾರ ಮತ್ತು 14ನೇ ವಾರದಲ್ಲಿ ಒಟ್ಟು 4 ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಕೊಡಿಸಬೇಕು. ಸಾರ್ವಜನಿಕರು ಈ ಲಸಿಕೆಯನ್ನು ಪಡೆದು ಸುರಕ್ಷಿತರಾಗಬೇಕು” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್ ಆರ್ ತಿಮ್ಮಯ್ಯ ಮನವಿ ಮಾಡಿದ್ದಾರೆ.
ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ನವೀನ್‍ಚಂದ್ರ ಕುಲಾಲ್ ಮಾತನಾಡಿ, “ಬಿಟ್ಟು ಬಿಟ್ಟು ಮಳೆ ಸುರಿಯುತ್ತಿರುವುದರಿಂದ ನೀರು ಸಂಗ್ರಹವಾಗುವ ಸಾಧ್ಯತೆ ಹೆಚ್ಚು ಇದೆ. ಇದು ಡೆಂಘಿಗೆ ಕಾರಣವಾಗಬಹುದು. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು” ಎಂದು ಸಲಹೆ ನೀಡಿದ್ದಾರೆ.
ಸಾರ್ವಜನಿಕರು ಪಾಲಿಸಬೇಕಾದ ಕಟ್ಟುನಿಟ್ಟಿನ ನಿಯಮಗಳು:
ಕಡ್ಡಾಯವಾಗಿ ನೀರನ್ನು ಚೆನ್ನಾಗಿ ಕುದಿಸಿ, ಆರಿಸಿದ ನಂತರವೇ ಕುಡಿಯಲು ಬಳಸಬೇಕು. ಹೋಟೆಲ್ ಅಥವಾ ಹೊರಗಡೆ ಸಿಗುವ ಬೇಯಿಸದ ಆಹಾರ ಪದಾರ್ಥಗಳು, ಮುಖ್ಯವಾಗಿ ಮಜ್ಜಿಗೆ, ಪಾನಕ, ಜ್ಯೂಸ್ ಅಥವಾ ಕೋಸಂಬರಿಗಳನ್ನು ಸೇವಿಸಬಾರದು. ಇವುಗಳನ್ನು ಬೇಯಿಸದೇ ಇರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಶೌಚಾಲಯಕ್ಕೆ ಹೋಗಿ ಬಂದ ನಂತರ ಹಾಗೂ ಆಹಾರ ಸೇವಿಸುವ ಮುನ್ನ ಸಾಬೂನಿನಿಂದ ಕೈಗಳನ್ನು ಕಡ್ಡಾಯವಾಗಿ ತೊಳೆದುಕೊಳ್ಳಬೇಕು. ಈ ನಿಯಮಗಳನ್ನು ಪಾಲಿಸುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು.
ಜ್ವರ, ತೀವ್ರ ಆಯಾಸ, ವಾಕರಿಕೆ, ಹೊಟ್ಟೆನೋವು ಮತ್ತು ಮೂತ್ರ ಗಾಢ ಹಳದಿ ಬಣ್ಣಕ್ಕೆ ತಿರುಗುವ ಲಕ್ಷಣಗಳಿದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು. ನಾಟಿ ಔಷಧಿ ಅಥವಾ ಸ್ವಯಂ ಔಷಧಿ ಮಾಡಿಕೊಳ್ಳುವುದನ್ನು ತಪ್ಪಿಸಬೇಕು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಸತಿ ನಿಲಯದಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಸಹಾಯವಾಣಿ: ಸಾರ್ವಜನಿಕರಿಗೆ ಯಾವುದೇ ಮಾಹಿತಿ ಅಥವಾ ಪೂರಕ ನೆರವು ಬೇಕಿದ್ದಲ್ಲಿ ಜಿಲ್ಲಾ ಸರ್ವೇಕ್ಷಣಾ ಘಟಕ ಅಥವಾ ಜಿಲ್ಲಾ ಆರೋಗ್ಯ ಅಧಿಕಾರಿಗಳ ವೈಯಕ್ತಿಕ ಮೊಬೈಲ್ ಸಂಖ್ಯೆ: 9449843050ಕ್ಕೆ ಸಂಪರ್ಕಿಸಬಹುದು ಅಥವಾ ಇದೇ ಸಂಖ್ಯೆಗೆ ವಾಟ್ಸ್ಯಾಪ್(WhatsApp) ಮೂಲಕವೂ ಮಾಹಿತಿ ರವಾನಿಸಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್ ಆರ್ ತಿಮ್ಮಯ್ಯ ತಿಳಿಸಿದ್ದಾರೆ.





