ಕರಾವಳಿ ಭಾಗದ ಅಭಿವೃದ್ಧಿಯ ಜೊತೆಗೆ ಅರಣ್ಯ ಪ್ರದೇಶಗಳಲ್ಲಿ ತಲತಲಾಂತರಗಳಿಂದ ವಾಸಿಸುತ್ತಿರುವ ಆದಿವಾಸಿ ಮಲೆಕುಡಿಯ ಸಮುದಾಯದ ಮೂಲಸೌಕರ್ಯ ಅಭಿವೃದ್ಧಿಗೂ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ಒತ್ತು ನೀಡಬೇಕು ಎಂದು ಮಲೆಕುಡಿಯ ಸಂಘ ಕರ್ನಾಟಕದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ಆಗ್ರಹಿಸಿದ್ದಾರೆ.
ಹಲವು ವರ್ಷಗಳಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಲೆಕುಡಿಯರು ಸಮರ್ಪಕ ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ, ವಸತಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ವಿಶೇಷ ಚರ್ಚೆ ನಡೆಸಿ, ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬುಡಕಟ್ಟು ಸಮುದಾಯ ಹಾಗೂ ಇತರ ಪಾರಂಪರಿಕ ಅರಣ್ಯವಾಸಿಗಳಿಗೆ ಅನುಕೂಲವಾಗುವಂತೆ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಕಾಯ್ದೆಯ ಸೆಕ್ಷನ್ 3(2)ರ ಅವಕಾಶದಡಿ ಜಿಲ್ಲಾ ಹಂತದಲ್ಲೇ ರಸ್ತೆ, ವಿದ್ಯುತ್ ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಅರಣ್ಯಾಧಾರಿತ 13 ಬುಡಕಟ್ಟು ಸಮುದಾಯಗಳಿಗೆ ನೀಡಲಾಗುತ್ತಿದ್ದ ಪೌಷ್ಟಿಕ ಆಹಾರ ವಿತರಣೆ ಕಳೆದ ಏಳು ತಿಂಗಳಿನಿಂದ ಸ್ಥಗಿತಗೊಂಡಿದ್ದು, ಕೂಡಲೇ ಪುನರಾರಂಭಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅದೇ ರೀತಿ ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲೂ ಸಾಧಕ-ಬಾಧಕಗಳ ಕುರಿತು ವಿಸ್ತೃತ ಚರ್ಚೆ ನಡೆಸಬೇಕು. ಅರಣ್ಯ ಪ್ರದೇಶಗಳ ಭೌತಿಕ ಸಮೀಕ್ಷೆ ನಡೆಸಿ, ಅಲ್ಲಿನ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಮೂಲಕ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಶ್ರೀಧರ ಗೌಡ ಈದು ಒತ್ತಾಯಿಸಿದ್ದಾರೆ.
ಕರಾವಳಿ ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯವಾಸಿಗಳ ಬದುಕು ಮತ್ತು ಹಕ್ಕುಗಳಿಗೆ ಧಕ್ಕೆಯಾಗದಂತೆ, ಅವರ ಮೂಲಭೂತ ಅಗತ್ಯಗಳನ್ನು ಪರಿಗಣಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.






