ಸಾರಿಗೆ ಇಲಾಖೆಯಲ್ಲಿ ವಾಹನಗಳ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಶೇಕಡಾ 50ರಷ್ಟು ದಂಡ ಪಾವತಿಸಿ ಇತ್ಯರ್ಥಪಡಿಸಿಕೊಳ್ಳಲು ಸರ್ಕಾರ ವಿಶೇಷ ಅವಕಾಶ ಕಲ್ಪಿಸಿದೆ.
1991ರಿಂದ 2022ರ ಅವಧಿಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಅಧಿಕಾರಿಗಳು ದಾಖಲಿಸಿರುವ ಪ್ರಕರಣಗಳು ಮಾತ್ರ ಈ ರಿಯಾಯಿತಿ ಯೋಜನೆಯ ವ್ಯಾಪ್ತಿಗೆ ಒಳಪಡುತ್ತವೆ. ವಾಹನ ಮಾಲೀಕರು ತಮ್ಮ ವಾಹನಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ವಿಧಿಸಿರುವ ದಂಡದ ಅರ್ಧದಷ್ಟು ಮೊತ್ತವನ್ನು ಪಾವತಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಬಹುದು.
ಮಂಗಳೂರು ಆರ್‌ಟಿಒ ಕಚೇರಿಯಲ್ಲಿ ಈ ಅವಧಿಗೆ ಸಂಬಂಧಿಸಿದಂತೆ 2724 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದ್ದು, ಸಂಬಂಧಪಟ್ಟ ವಾಹನ ಮಾಲೀಕರು ಜೂನ್ 21ರಿಂದ ಜುಲೈ 10ರೊಳಗೆ ಈ ಸೌಲಭ್ಯವನ್ನು ಬಳಸಿಕೊಂಡು ದಂಡ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಮಂಗಳೂರು ಉಪ ಸಾರಿಗೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






