ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವವು ಎಪ್ರಿಲ್ 14ರಿಂದ 20ರವರೆಗೆ ನಡೆಯುತ್ತಿದೆ. ಈ ಜಾತ್ರೋತ್ಸವದಲ್ಲಿ ಪ್ರತಿದಿನ ಸುಮಾರು 2,000 ಜನರು ಭಾಗವಹಿಸುವ ನಿರೀಕ್ಷೆಯಿದೆ.
ಎಪ್ರಿಲ್ 19ರಂದು ಕಟ್ಟೆ ಪೂಜೆ, ದೇವರ ಜಳಕ ಸ್ನಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭದಲ್ಲಿ ಕಿಡಿಗೇಡಿಗಳು ಅಮಲು ಪದಾರ್ಥ ಸೇವಿಸಿ ಅಹಿತಕರ ಘಟನೆಗಳಿಗೆ ಕಾರಣವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದೆ.
ಈ ಹಿನ್ನಲೆಯಲ್ಲಿ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ತೊಡಿಕಾನ ಗ್ರಾಮದಲ್ಲಿರುವ ಸರಕಾರಿ ಸ್ವಾಮ್ಯದ ಎಂ.ಎಸ್.ಐ.ಎಲ್ ಮದ್ಯದಂಗಡಿಯನ್ನು ಎಪ್ರಿಲ್ 19ರಂದು ಬೆಳಿಗ್ಗೆ 6 ಗಂಟೆಯಿಂದ ಎಪ್ರಿಲ್ 20ರ ಬೆಳಿಗ್ಗೆ 6 ಗಂಟೆಯವರೆಗೆ ಮುಚ್ಚಲು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರು ಆದೇಶಿಸಿದ್ದಾರೆ.






